ಚಿತ್ರರಂಗಕ್ಕೆ ಮೇಲಿಂದ ಮೇಲೆ ಆಘಾತ ಎದುರಾಗುತ್ತಲೇ ಇದೆ. ಕಿರುತೆರೆ ನಟಿ ತುನಿಶಾ ಶರ್ಮಾ ಚಿತೆಯ ಬೆಂಕಿ ಆರುವ ಮುನ್ನವೇ ಮತ್ತೋರ್ವ ನಟಿಯ ಕೊಲೆ ಆಗಿದೆ. ಝಾರ್ಖಂಡ್ ಮೂಲದ ನಟಿ ರಿಯಾ ಕುಮಾರಿ (Riya Kumari) ಅವರನ್ನು ಮಧ್ಯ ದಾರಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬುಧವಾರ (ಡಿ.28) ನಸುಕಿನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿ 16ರಲ್ಲಿ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ ಎಂದು ರಿಯಾ ಕುಮಾರಿ ಅವರ ಪತಿ ಪ್ರಕಾಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಘಟನೆ (Riya Kumari Death) ನಡೆದಾಗ ಪ್ರಕಾಶ್ ಕೂಡ ಜೊತೆಯಲ್ಲೇ ಇದ್ದರು. ಆದರೆ ಅವರ ಹೇಳಿಕೆ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಹಾಗಾಗಿ ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ.
ಝಾರ್ಖಂಡ್ನ ಪ್ರಾದೇಶಿಕ ಸಿನಿಮಾಗಳಲ್ಲಿ ಮತ್ತು ಆಲ್ಬಂ ಸಾಂಗ್ಗಳಲ್ಲಿ ನಟಿಸುವ ಮೂಲಕ ರಿಯಾ ಕುಮಾರಿ ಅವರು ಖ್ಯಾತಿ ಗಳಿಸಿದ್ದರು. ಅವರ ಪತಿ ಪ್ರಕಾಶ್ ಕುಮಾರ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಮಗಳ ಜೊತೆ ಈ ದಂಪತಿ ಕಾರಿನಲ್ಲಿ ತೆರಳಿದ್ದಾಗ ಹೌರಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ದುರ್ಘಟನೆ ಸಂಭವಿಸಿದೆ.
ಪ್ರಕಾಶ್ ಕುಮಾರ್ ಹೇಳಿಕೆ ಪ್ರಕಾರ, ಬುಧವಾರ ರಾಂಚಿಯಿಂದ ಪಶ್ಚಿಮ ಬಂಗಾಳಕ್ಕೆ ಅವರು ಪತ್ನಿ ಮತ್ತು ಮಗಳ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗ್ಗೆ 6 ಗಂಟೆ ಸಮಯದಲ್ಲಿ ಮೂತ್ರ ವಿಸರ್ಜನೆ ಸಲುವಾಗಿ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿದರು. ಈ ವೇಳೆ ಮೂವರು ದರೋಡೆಕೋರರು ದಾಳಿ ಮಾಡಿದರು. ಪ್ರಕಾಶ್ ಕುಮಾರ್ ಅವರನ್ನು ರಕ್ಷಿಸಲು ಬಂದ ಪತ್ನಿ ರಿಯಾ ಕುಮಾರಿಗೆ ಖದೀಮರು ಗುಂಡಿಕ್ಕಿದರು.
ರಿಯಾ ಕುಮಾರಿ ಅವರ ಹತ್ಯೆ ಬಳಿಕ ದರೋಡೆಕೋರರು ಓಡಿಹೋದರು. ಆ ಬಳಿಕ ಪ್ರಕಾಶ್ ಕುಮಾರ್ ಅವರು ಕಾರಿನಲ್ಲಿ ಪತ್ನಿಯನ್ನು ಕೂರಿಸಿಕೊಂಡು ಮೂರು ಕಿಲೋಮೀಟರ್ ತನಕ ಸಾಗಿ ಬಂದರು. ನಂತರ ಸ್ಥಳೀಯರ ಸಹಾಯ ಪಡೆದು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ರಿಯಾ ಕುಮಾರಿ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಪ್ರಕಾಶ್ ಕುಮಾರ್ ಹೇಳಿದ್ದಾರೆ.
ಪ್ರಕಾಶ್ ಕುಮಾರ್ ಹೇಳಿಕೆಯನ್ನು ಪೊಲೀಸರು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ವರದಿ ಆಗಿದೆ. ಆ ನಿರ್ದಿಷ್ಟ ಜಾಗದಲ್ಲಿ ಕಾರು ನಿಲ್ಲುತ್ತದೆ ಎಂದು ದರೋಡೆಕೋರರಿಗೆ ಹೇಗೆ ಗೊತ್ತಿತ್ತು? ಒಂದು ವೇಳೆ ದರೋಡೆಕೋರರು ಫಾಲೋ ಮಾಡಿಕೊಂಡು ಬಂದಿದ್ದಾರೆ ಅಂದಾದರೆ ಅದು ಪ್ರಕಾಶ್ಗೆ ಗೊತ್ತಾಗಲಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಪ್ರಕಾಶ್ ಕಾರು ನಿಲ್ಲಿಸಿದ ಜಾಗ ಕೂಡ ಪಾರ್ಕಿಂಗ್ಗೆ ಸೂಕ್ತವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:41 pm, Wed, 28 December 22