
ನಟ ಸೈಫ್ ಅಲಿ ಖಾನ್ (Saif Ali Khan) ಅವರು ಈಗ ಬಾಲಿವುಡ್ಗೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ಭಾರತದಲ್ಲೂ ಅವರಿಗೆ ಸಖತ್ ಬೇಡಿಕೆ ಸೃಷ್ಟಿ ಆಗಿದೆ. ಹಿಂದಿ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚುವ ಅವರು ಸೌತ್ ಸಿನಿಮಾಗಳಲ್ಲಿ ವಿಲನ್ ಅವತಾರ ತಾಳುತ್ತಿದ್ದಾರೆ. ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುವ ಮೂಲಕ ಅವರು ಗಮನ ಸೆಳೆದಿದ್ದರು. ಈಗ ಜೂನಿಯರ್ ಎನ್ಟಿಆರ್ ಅಭಿನಯದ ‘ದೇವರ’ (Devara) ಸಿನಿಮಾದಲ್ಲಿ ಕೂಡ ಸೈಫ್ ಅಲಿ ಖಾನ್ ಅವರು ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇಂದು (ಆಗಸ್ಟ್ 16) ಅವರ ಜನ್ಮದಿನ. ಆ ಪ್ರಯುಕ್ತ ಎಲ್ಲರೂ ಅವರಿಗೆ ಶುಭ ಕೋರುತ್ತಿದ್ದಾರೆ. ‘ದೇವರ’ ಚಿತ್ರತಂಡದ ಪರವಾಗಿ ಜೂನಿಯರ್ ಎನ್ಟಿಆರ್ (Jr NTR) ಕೂಡ ಸೈಫ್ ಅಲಿ ಖಾನ್ಗೆ ವಿಶ್ ಮಾಡಿದ್ದಾರೆ.
‘ದೇವರ’ ಸಿನಿಮಾ ತಂಡದಿಂದ ಸೈಫ್ ಅಲಿ ಖಾನ್ ಅವರ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿದೆ. ಜೂನಿಯರ್ ಎನ್ಟಿಆರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭ ಕೋರಿದ್ದಾರೆ. ‘ಹ್ಯಾಪಿ ಬರ್ತ್ಡೇ ಸೈಫ್ ಸರ್..’ ಎಂದು ಗೌರವದಿಂದ ಅವರು ವಿಶ್ ಮಾಡಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಅವರು ಭೈರ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಹೊಸ ಪೋಸ್ಟರ್ ಮೂಲಕ ಈ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ.
ಸೈಫ್ ಅಲಿ ಖಾನ್ ಅವರಿಗೆ ಈಗ 53 ವರ್ಷ ವಯಸ್ಸು. ಯಾವ ಪಾತ್ರ ಸಿಕ್ಕರೂ ಅವರು ಅದಕ್ಕೆ ನ್ಯಾಯ ಸಲ್ಲಿಸುತ್ತಾರೆ. ಬಾಲಿವುಡ್ನಲ್ಲೂ ಅವರು ನೆಗೆಟಿವ್ ಶೇಡ್ ಇರುವ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ವಿಲನ್ ಪಾತ್ರಗಳನ್ನು ಮಾಡುವ ಮೂಲಕ ವೃತ್ತಿಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಅವರು ನಟಿಸುತ್ತಿರುವುದರಿಂದ ‘ದೇವರ’ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚುವಂತಾಗಿದೆ.
ಇದನ್ನೂ ಓದಿ: ‘ಹೃದಯಂ’ ರಿಮೇಕ್ನಲ್ಲಿ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ? ಲಾಂಚ್ ಮಾಡ್ತಾರೆ ಕರಣ್ ಜೋಹರ್
‘ದೇವರ’ ಸಿನಿಮಾಗೆ ಕೊರಟಾಲ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಕೂಡ ‘ಆರ್ಆರ್ಆರ್’ ರೀತಿ ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಬಾಲಿವುಡ್ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜೂನಿಯರ್ ಎನ್ಟಿಆರ್ ಅವರಿಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಅವರಿಗೆ ಇದು ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬುದು ವಿಶೇಷ. ‘ಆರ್ಆರ್ಆರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದ ಬಳಿಕ ಜೂನಿಯರ್ ಎನ್ಟಿಆರ್ ಅವರು ‘ದೇವರ’ ಸಿನಿಮಾವನ್ನು ಕೈಗೆತ್ತಿಕೊಂಡರು. ಈ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.