
ಒಂದಷ್ಟು ದಿನಗಳ ಕಾಲ ರಾಜಕೀಯದ ಕಡೆಗೆ ಗಮನ ಹರಿಸಿದ್ದ ಕಮಲ್ ಹಾಸನ್ (Kamal Haasan) ಅವರು ಈಗ ಚಿತ್ರರಂಗದಲ್ಲೇ ಫುಲ್ ಟೈಮ್ ಆ್ಯಕ್ಟೀವ್ ಆಗಿದ್ದಾರೆ. ಅವರ ಹೊಸ ಸಿನಿಮಾಗಳಿಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಅದರಲ್ಲೂ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ (Vikram Movie) ಮೊದಲಿನಿಂದಲೂ ಕುತೂಹಲ ಮೂಡಿಸಿದೆ. ಆ ಚಿತ್ರ ಸೆಟ್ಟೇರಿದ ದಿನದಿಂದಲೂ ದೊಡ್ಡ ಮಟ್ಟದ ಹೈಪ್ ಸೃಷ್ಟಿ ಮಾಡಿದೆ. ಈಗ ‘ವಿಕ್ರಮ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಅದನ್ನು ಕಂಡು ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ. ಲೋಕೇಶ್ ಕನಗರಾಜ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳು ಇರಲಿವೆ ಎಂದು ಈ ಮೊದಲು ಚಿಕ್ಕ ಟೀಸರ್ ಮೂಲಕವೇ ಚಿತ್ರತಂಡ ಸುಳಿವು ನೀಡಿತ್ತು. ಈಗ ಅದಕ್ಕೆ ಇನ್ನಷ್ಟು ಪುಷ್ಠಿ ನೀಡುವ ರೀತಿಯಲ್ಲಿ ಟ್ರೇಲರ್ (Vikram Movie Trailer) ಮೂಡಿಬಂದಿದೆ. ಮೈನವಿರೇಳಿಸುವಂತಹ ಆ್ಯಕ್ಷನ್ ಸನ್ನಿವೇಶಗಳ ಝಲಕ್ ಈ ಟ್ರೇಲರ್ನಲ್ಲಿ ಕಾಣಿಸಿಕೊಂಡಿದೆ. ಕಮಲ್ ಹಾಸನ್ ಜೊತೆಗೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಅವರಂತಹ ಘಟಾನುಘಟಿ ಕಲಾವಿದರು ಕೂಡ ‘ವಿಕ್ರಮ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ನಡುವೆ ‘ವಿಕ್ರಮ್’ ಟ್ರೇಲರ್ ನೋಡಿದವರಿಗೆ ‘ಕೆಜಿಎಫ್ 2’ ಚಿತ್ರದ ಒಂದು ಸೀನ್ ನೆನಪಾಗಿದೆ.
ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ದೊಡ್ಡಮ್ಮ ಗನ್ ದೃಶ್ಯ ಸಖತ್ ಫೇಮಸ್ ಆಗಿದೆ. ಯಶ್ ಬರ್ತ್ಡೇ ಸಲುವಾಗಿ ಬಿಡುಗಡೆ ಮಾಡಿದ್ದ ಟೀಸರ್ನಲ್ಲೂ ಆ ದೃಶ್ಯ ಗಮನ ಸೆಳೆದಿತ್ತು. ‘ಕೆಜಿಎಫ್ 2’ ಸಿನಿಮಾದಲ್ಲಿ ಕಥಾನಾಯಕ ರಾಕಿ ಭಾಯ್ ‘ದೊಡ್ಡಮ್ಮ ಗನ್’ ಹಿಡಿದು ಬ್ಯಾಕ್ ಟು ಬ್ಯಾಕ್ ಸಾವಿರಾರು ಬುಲೆಟ್ ಹಾರಿಸಿದ ಬಳಿಕ ಬ್ಯಾರಲ್ ಕೆಂಪಾಗುವ ದೃಶ್ಯವನ್ನು ಕಂಡು ಫ್ಯಾನ್ಸ್ ಸಖತ್ ಎಂಜಾಯ್ ಮಾಡಿದ್ದಾಗಿದೆ. ಈಗ ಅದೇ ರೀತಿಯ ‘ದೊಡ್ಡಮ್ಮ ಗನ್’ ಹಿಡಿದು ಕಮಲ್ ಹಾಸನ್ ಪೋಸ್ ನೀಡಿದ್ದಾರೆ.
ಎರಡೂ ಸಿನಿಮಾದಲ್ಲಿ ಈ ರೀತಿಯ ದೃಶ್ಯ ಇರುವುದು ಕಾಕತಾಳೀಯವೋ ಅಥವಾ ಪ್ರಶಾಂತ್ ನೀಲ್ ಅವರಿಂದ ಸ್ಫೂರ್ತಿಗೊಂಡು ನಿರ್ದೇಶಕ ಲೋಕೇಶ್ ಕನಗರಾಜ್ ಅವರು ‘ವಿಕ್ರಮ್’ ಸಿನಿಮಾದಲ್ಲಿ ಈ ದೃಶ್ಯ ಅಳವಡಿಸಿದ್ದಾರೋ ಗೊತ್ತಿಲ್ಲ. ನಂತರದ ದಿನಗಳಲ್ಲಿ ನಿರ್ದೇಶಕರೇ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕಿದೆ. ‘ವಿಕ್ರಮ್’ ಚಿತ್ರ ಖಂಡಿತವಾಗಿಯೂ ಬ್ಲಾಕ್ಬಸ್ಟರ್ ಹಿಟ್ ಆಗಲಿದೆ ಎಂದು ಸಿನಿಪ್ರಿಯರು ಊಹಿಸುತ್ತಿದ್ದಾರೆ. ಕಮಲ್ ಹಾಸನ್ ಅವರಂಥ ದಿಗ್ಗಜ ನಟನ ಜೊತೆಗೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಅವರು ಸೇರಿಕೊಂಡಿರುವುದರಿಂದ ಈ ಸಿನಿಮಾಗೆ ಹೈ-ವೋಲ್ಟೇಜ್ ಬಂದಂತಾಗಿದೆ.
ಕಮಲ್ ಹಾಸನ್, ಆರ್. ಮಹೇಂದ್ರನ್ ಅವರು ‘ವಿಕ್ರಮ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅನಿರುದ್ ರವಿಚಂದರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣ ಕೂಡ ಟ್ರೇಲರ್ನಲ್ಲಿ ಗಮನ ಸೆಳೆಯುತ್ತಿದೆ. ಡೈಲಾಗ್ಗಳು ಕೂಡ ಭರ್ಜರಿಯಾಗಿವೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 10 ಮಿಲಿಯನ್ಗಿಂತಲೂ ಅಧಿಕ ಬಾರಿ ಈ ಟ್ರೇಲರ್ ವೀಕ್ಷಣೆಗೆ ಒಳಪಟ್ಟಿದೆ. ‘ವಿಕ್ರಮ್’ ಚಿತ್ರದ ಮೇಲೆ ಅಭಿಮಾನಿಗಳಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ.
ಜೂನ್ 3ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆ ದಟ್ಟವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.