ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅಭಿನಯಿಸಿರುವ ‘ತಲೈವಿ’ (Thalaivi) ಸಿನಿಮಾ ಬಗ್ಗೆ ಇತ್ತೀಚೆಗೆ ಒಂದು ಗಾಸಿಪ್ ಹಬ್ಬಿತ್ತು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ (Jayalalitha) ಅವರ ಬಯೋಪಿಕ್ (Biopic) ಆಗಿ ಮೂಡಿಬರುತ್ತಿರುವ ಈ ಸಿನಿಮಾ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಆ ಮಾಹಿತಿಯನ್ನು ಕಂಗನಾ ರಣಾವತ್ ಅಲ್ಲಗಳೆದಿದ್ದಾರೆ. ಚಿತ್ರಮಂದಿರಗಳಲ್ಲೇ ‘ತಲೈವಿ’ ಚಿತ್ರ ರಿಲೀಸ್ ಆಗಲಿದೆ ಎಂದು ಅವರು ಖಚಿತ ಪಡಿಸಿದ್ದಾರೆ.
ಈ ಬಗ್ಗೆ ಕಂಗನಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ‘ತಲೈವಿ ಸಿನಿಮಾದ ರಿಲೀಸ್ ಡೇಟ್ ಇನ್ನೂ ಅಂತಿಮವಾಗಿಲ್ಲ. ಈ ಸಂಬಂಧ ಯಾವುದೇ ಗಾಸಿಪ್ಗಳಿಗೆ ಕಿವಿಗೊಡಬೇಡಿ. ದೇಶಾದ್ಯಂತ ಚಿತ್ರಮಂದಿರಗಳು ಓಪನ್ ಆದಾಗ ನಾವು ಈ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ’ ಎಂದು ಕಂಗನಾ ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ ಮತ್ತು ಟೀಸರ್ಗಳ ಮೂಲಕ ‘ತಲೈವಿ’ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಜಯಲಲಿತಾ ಪಾತ್ರಕ್ಕಾಗಿ ಕಂಗನಾ ಅವರು ಅನೇಕ ಟ್ರಾನ್ಸ್ಫಾರ್ಮೇಷನ್ಗೆ ಒಳಗಾಗಿದ್ದಾರೆ. ಜಯಲಲಿತಾ ಗೆಟಪ್ನಲ್ಲಿ ಕಂಗನಾ ಕಾಣಿಸಿಕೊಂಡಿರುವ ಪೋಸ್ಟರ್ಗಳಿಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಅನೇಕ ಖ್ಯಾತ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅರವಿಂದ್ ಸ್ವಾಮಿ, ನಾಸರ್, ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಹಿಂದಿ ಮಾತ್ರವಲ್ಲದೆ, ತಮಿಳು ಮತ್ತು ತೆಲುಗಿನಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆ. ‘ತಲೈವಿ’ಗೆ ಖ್ಯಾತ ನಿರ್ದೇಶಕ ಎ.ಎಲ್. ವಿಜಯ್ ನಿರ್ದೇಶನ ಮಾಡಿದ್ದಾರೆ. ವಿಜಯೇಂದ್ರ ಪ್ರಸಾದ್ ಅವರು ಚಿತ್ರಕಥೆ ಬರೆದಿದ್ದಾರೆ. ದೊಡ್ಡ ಕ್ಯಾನ್ವಾಸ್ನಲ್ಲಿ ಚಿತ್ರ ಮೂಡಿಬಂದಿದ್ದು, ದೊಡ್ಡ ಪರದೆಯಲ್ಲಿ ಕಣ್ತುಂಬಿಕೊಳ್ಳಲು ಜಯಲಲಿತಾ ಅಭಿಮಾನಿಗಳು ಕಾದಿದ್ದಾರೆ.
ಸದಾ ಕಿರಿಕ್ನಲ್ಲಿಯೇ ತೊಡಗಿಕೊಂಡಿರುವ ಕಂಗನಾ ರಣಾವತ್ ಅವರಿಗೆ ಹಲವು ಸಿನಿಮಾ ಆಫರ್ಗಳು ಕೈ ಬೀಸಿ ಕರೆಯುತ್ತಿವೆ. ‘ತಲೈವಿ’ ಬಳಿಕ ‘ತೇಜಸ್’, ‘ಮಣಿಕರ್ಣಿಕಾ ರಿಟರ್ನ್ಸ್’ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಾಧಾರಿತ ಸಿನಿಮಾದಲ್ಲೂ ಕಂಗನಾ ನಟಿಸುತ್ತಿದ್ದಾರೆ. ಇಂದಿರಾ ಗಾಂಧಿ ಬಯೋಪಿಕ್ಗೆ ‘ಎಮರ್ಜೆನ್ಸಿ’ ಎಂದು ಹೆಸರು ಇಡಲಾಗಿದೆ. ಅದರಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಕಂಗನಾ ನಿಭಾಯಿಸುವುದು ಮಾತ್ರವಲ್ಲದೆ, ಸ್ವತಃ ಅವರೇ ನಿರ್ದೇಶನ ಕೂಡ ಮಾಡಲಿದ್ದಾರೆ.
ಇದನ್ನೂ ಓದಿ:
ಹಿಂದು-ಮುಸ್ಲಿಂ ಮದುವೆಯಾದ್ರೆ ಮಕ್ಕಳು ಮುಸ್ಲಿಂ ಆಗ್ತಾರೆ; ಹಿಂದು ಆಗಲ್ಲ ಯಾಕೆ? ಕಂಗನಾ ಪ್ರಶ್ನೆ
ಇಂದಿರಾ ಗಾಂಧಿ ಪಾತ್ರದಲ್ಲಿ ಕಿರಿಕ್ ನಟಿ ಕಂಗನಾ ರಣಾವತ್; ಹೊಸ ಸಿನಿಮಾ ಹೆಸರು ‘ಎಮರ್ಜೆನ್ಸಿ’