
ಯಶ್ (Yash) ನಟನೆಯ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ನಿರೀಕ್ಷೆ ಸಿನಿಮಾ. ಈಗಾಗಲೇ ಸಿನಿಮಾದ ಬಿಡುಗಡೆ ದಿನಾಂಕ ಎರಡು ಬಾರಿ ಬದಲಾಗಿದೆ. ಸಿನಿಮಾದ ಬಿಡುಗಡೆ ಯಾವಾಗ ಎಂಬ ಬಗ್ಗೆ ಖಾತ್ರಿ ಸಹ ಇಲ್ಲ. ಯಶ್, ‘ಟಾಕ್ಸಿಕ್’ ಸಿನಿಮಾವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾರೆ. ಇವುಗಳ ನಡುವೆ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ನಾಯಕಿಯರು, ಕೆಲ ತಂತ್ರಜ್ಞರು ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಕೆಲವು ಕಡೆ ಮಾತನಾಡಿದ್ದು, ಎಲ್ಲರೂ ಸಹ ಬಹಳ ಹೆಮ್ಮೆಯಿಂದ ಸಿನಿಮಾದ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲೂ ಸಿನಿಮಾದ ಕತೆಯ ಭಿನ್ನತೆ ಬಗ್ಗೆ ಆಡಿರುವ ಮಾತುಗಳು ಕತೆಯ ಬಗ್ಗೆ ಹೆಚ್ಚು ಕುತೂಹಲ ಮೂಡಿಸುತ್ತಿವೆ. ಇದೀಗ ಸಿನಿಮಾದ ನಾಯಕಿ ಕಿಯಾರಾ ಅಡ್ವಾಣಿ, ‘ಟಾಕ್ಸಿಕ್’ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಟಾಕ್ಸಿಕ್’ ಸಿನಿಮಾನಲ್ಲಿ ಗಂಡು-ಹೆಣ್ಣಿನ ಸಂಬಂಧವನ್ನು ಬೇರೆ ರೀತಿಯ ಕೋನದಲ್ಲಿ ನೋಡಲಾಗಿದೆ. ಗಂಡು ಮತ್ತು ಹೆಣ್ಣಿನ ನಡುವಿನ ಸಾಂಪ್ರದಾಯಿಕ ಸಮೀಕರಣದ ಬದಲಿಗೆ ಆ ಸಂಬಂಧವನ್ನು ಭಿನ್ನವಾದ ಬಗೆಯಲ್ಲಿ ನೋಡಲಾಗಿದೆ. ಗಂಡು-ಹೆಣ್ಣಿನ ನಡುವಿನ ಪ್ರೀತಿಯನ್ನು ವಿಭಿನ್ನವಾದ ದೃಷ್ಟಿಕೋನದಿಂದ ಹೇಳಲಾಗಿದೆ ಎಂದು ಕಿಯಾರಾ ಹೇಳಿದ್ದಾರೆ.
ಬಾಂಬೆ ಟೈಮ್ಸ್ ಜೊತೆಗಿನ ಸಂದರ್ಶನದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಕಿಯಾರಾ ಅಡ್ವಾಣಿ, ‘ಟಾಕ್ಸಿಕ್ ಸಿನಿಮಾವು ವಿಶಿಷ್ಟವಾದ ಭಾವನಾತ್ಮಕ ಲೋಕವನ್ನು ಹೊಂದಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಮೊದಲು ತಮಗೆ ಕಥೆಯನ್ನು ವಿವರಿಸಿದಾಗ, ಅದು ತಮ್ಮ ಗ್ರಹಿಕೆಗೆ ಬರಲು ತುಸು ಸಮಯ ಬೇಕಾಯ್ತು, ಅಷ್ಟು ಭಿನ್ನವಾದ ಕತಾ ಎಳೆಯನ್ನು ಆ ಸಿನಿಮಾ ಹೊಂದಿದೆ ಎಂದು ಕಿಯಾರಾ ಹೇಳಿದ್ದಾರೆ.
ಇದನ್ನೂ ಓದಿ:‘ಟಾಕ್ಸಿಕ್ ಸಿನಿಮಾದ ಮಹಿಳಾ ಪಾತ್ರಗಳು ಸಖತ್ ಬೋಲ್ಡ್’: ಕೌತುಕ ಹೆಚ್ಚಿಸಿದ ಯಶ್
‘ಟಾಕ್ಸಿಕ್’ ಸಿನಿಮಾ ನೋಡಿದ ಮೇಲೆ, ಗಂಡು ಮತ್ತು ಹೆಣ್ಣಿನ ನಡುವಿನ ಸಂಬಂಧವನ್ನು ನೋಡುವ ದೃಷ್ಟಿಕೋನವೇ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಿಜ ಹೇಳಬೇಕೆಂದರೆ, ಗೀತು ಮೋಹನ್‌ದಾಸ್ ಅವರು ನನಗೆ ಕಥೆಯನ್ನು ವಿವರಿಸಿದಾಗ, ‘ಸರಿ, ಇದು ಕೂಡ ಸಹಜವೇ’ ಎಂದು ಅರ್ಥಮಾಡಿಕೊಳ್ಳಲು ನನಗೇ ಸ್ವಲ್ಪ ಸಮಯ ಹಿಡಿಯಿತು. ಕತೆ ಸ್ವಲ್ಪ ‘ಗ್ರೇ’ (ಹಿಂಸಾತ್ಮಕ ಅಥವಾ ಹೆಚ್ಚು ಗ್ಲಾಮರಸ್) ಆಗಿರಬಹುದು, ಎಲ್ಲರಿಗೂ ಗೊತ್ತಿರುವ ಎಂದಿನ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಇಲ್ಲದೇ ಇರಬಹುದು, ಆದರೆ ಪ್ರೀತಿಯಲ್ಲಿ ಒಂದು ರೀತಿಯ ಲಿಬರೇಷನ್ (ವಿಮೋಚನೆ) ಇರುತ್ತದೆ, ಅದನ್ನು ಈ ಸಿನಿಮಾ ತೋರಿಸಿದೆ’ ಎಂದು ಕಿಯಾರಾ ಹೇಳಿದ್ದಾರೆ.
ಚಿತ್ರದಲ್ಲಿ ತಮ್ಮ ‘ನಾಡಿಯಾ’ ಎಂಬ ಪಾತ್ರದ ಬಗ್ಗೆ ಮಾತನಾಡಿದ ಅವರು, ಆ ಪಾತ್ರದ ಮನಸ್ಥಿತಿ, ಭಾವನಾತ್ಮಕ ಜಟಿಲತೆ ನನ್ನನ್ನು ಕಾಡಿತು. ನಾಡಿಯಾ ಪಾತ್ರದ ಕಥೆಯನ್ನು ನನಗೆ ಹೇಳಿದಾಗ ನಾನು ಆಶ್ಚರ್ಯಚಕಿತಳಾದೆ. ನನ್ನ ಸ್ವಂತ ಆಲೋಚನೆಗಳಲ್ಲಿ ಅಷ್ಟು ಮುಕ್ತವಾಗಿ ಮತ್ತು ಯಾವುದೇ ಬಂಧನಗಳಿಲ್ಲದ ವ್ಯಕ್ತಿಯಾಗಿ ನನಗೆ ಇರಲು ಸಾಧ್ಯವಾಗಿದ್ದಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ನನಗೆ ಹಲವು ಬಾರಿ ಅನಿಸಿದೆ’ ಎಂದು ಅವರು ಹೇಳಿದ್ದಾರೆ.
ಈ ಚಿತ್ರದಲ್ಲಿ ಕೆಲಸ ಮಾಡುವಾಗ ಎದುರಾದ ಸವಾಲುಗಳನ್ನು ನೆನೆದ ಕಿಯಾರಾ, ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ತಮಗೆ ಕನ್ನಡ ಭಾಷೆ ಬರದೇ ಇದ್ದರೂ, ಪ್ರತಿ ದೃಶ್ಯವನ್ನು ಮೊದಲು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಿ ನಂತರ ಕನ್ನಡದಲ್ಲಿ ಶೂಟ್ ಮಾಡಲಾಗುತ್ತಿತ್ತು ಮತ್ತು ಶೂಟಿಂಗ್‌ಗೂ ಮುನ್ನಾ ದಿನ ರಾತ್ರಿ ಅವರು ಸಂಭಾಷಣೆಗಳನ್ನು ಕಂಠಪಾಠ ಮಾಡುತ್ತಿದ್ದುದಾಗಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ