
ಬಹುನಿರೀಕ್ಷಿತ ‘ಕೊರಗಜ್ಜ’ (Koragajja) ಸಿನಿಮಾಗೆ ಈಗ ಕೊಚ್ಚಿ ಮತ್ತು ಚೆನ್ನೈ ನಲ್ಲಿ 3ಡಿ ಕೆಲಸ ಭರದಿಂದ ಸಾಗುತ್ತಿದೆ. ತಾಂತ್ರಿಕವಾಗಿ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾಗೂ ಕಡಿಮೆ ಇಲ್ಲ ಎನ್ನುವ ಹಾಗೆ ಈ ಸಿನಿಮಾ ಮೂಡಿಬರುತ್ತಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ (Sudheer Attavar) ಅವರು ತಿಳಿಸಿದ್ದಾರೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದ ವಿತರಣಾ ಸಂಸ್ಥೆಗಳು ಈ ಸಿನಿಮಾ ಮೇಲೆ ಆಸಕ್ತಿ ತೋರಿಸುತ್ತಿವೆ ಎಂದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರಿಗೆ ಖುಷಿ ಆಗಿದೆ. ಇದೇ ಖುಷಿಯಲ್ಲಿ ನಿರ್ದೇಶಕರಿಗೆ ಅವರು ದೊಡ್ಡ ಗಿಫ್ಟ್ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ‘ಕೊರಗಜ್ಜ’ ಸಿನಿಮಾ ಈ ಮಟ್ಟಕ್ಕೆ ಬೆಳೆಯಲು ಶ್ರಮಿಸುತ್ತಿರುವ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಮೂರು ಬೆಡ್ ರೂಮಿನ, ಸುಮಾರು 1.75 ಕೋಟಿ ರೂಪಾಯಿ ಬೆಲೆಬಾಳುವ ಐಷಾರಾಮಿ ಫ್ಲಾಟನ್ನು ಉಡುಗೊರೆಯಾಗಿ ನೀಡಲಾಗಿದೆ. ಸಿನಿಮಾದ ಮೇಲೆ ಮತ್ತು ನಿರ್ದೇಶಕರ ಮೇಲೆ ತಮಗಿರುವ ಅಭಿಮಾನವನ್ನು ಈ ರೂಪದಲ್ಲಿ ನಿರ್ಮಾಪಕರು ತೋರಿಸಿದ್ದಾರೆ.
ಈಗಾಗಲೇ ಆರು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾಗೆ ಅಸ್ಸಾಮಿ, ಚೈನಿಸ್ ಮತ್ತು ಇಂಗ್ಲಿಷ್ ಅವತರಣಿಕೆಗಳೂ ಸೇರ್ಪಡೆ ಆಗುತ್ತಿವೆ ಎಂಬ ವಿಷಯವನ್ನು ಕೂಡ ನಿರ್ಮಾಪಕರು ತಿಳಿಸಿದ್ದಾರೆ. ಇತ್ತೀಚೆಗೆ ಹೊಸ ಫ್ಲಾಟ್ ಗೃಹ ಪ್ರವೇಶ ನಡೆಯಿತು. ಬಳಿಕ ಸತ್ಯನಾರಾಯಣ ಪೂಜೆ ಕೂಡ ಮಾಡಲಾಯಿತು. ಇದೇ ವೇಳೆ ಕೊರಗಜ್ಜ ದೈವದ ಅಗೆಲು ಸೇವೆಯನ್ನು ಅತಿಥಿಗಳ ಸಮ್ಮುಖದಲ್ಲಿ ಮಾಡಲಾಯಿತು.
‘ಕೊರಗಜ್ಜ’ ಸಿನಿಮಾದಲ್ಲಿ ಅಭಿನಯಿಸಿರುವ ಹಿರಿಯ ಕಲಾವಿದೆ ಭವ್ಯ ಅವರು ಕೊರಗಜ್ಜ ದೈವದ ಅಗೆಲು ಸೇವೆಗೆ ಇಷ್ಟವಾದ ಕುಚಲಕ್ಕಿ ಅನ್ನ, ಹುರುಳಿ-ಬಸಳೆ ಸಾರು, ಮಿಡಿ ಮಾವಿನ ಉಪ್ಪಿನಕಾಯಿ, ಬಂಗುಡೆ ಮೀನಿನ ಗಸಿ, ಕೋಳಿ ಸುಕ್ಕ, ಕಳ್ಳು ಮೊದಲಾದವುಗಳನ್ನು ಗೆರಸೆಯಲ್ಲಿಟ್ಟು ಸಮರ್ಪಿಸಿದರು. ನಿರ್ದೇಶಕರ ಪತ್ನಿ ರಾಜಶ್ರೀ ಸುಧೀರ್ ಎಲ್ಲಾ ಭಕ್ಷ್ಯಗಳನ್ನು ಅಣಿಗೊಳಿಸಿದರು. ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಅವರು ಭವ್ಯಗೆ ಸಾಥ್ ನೀಡಿದರು.
ಇದನ್ನೂ ಓದಿ: ‘ಕೊರಗಜ್ಜ’ ಸಿನಿಮಾದಲ್ಲಿ ಡ್ಯುಯೆಟ್ ಸಾಂಗ್? ಕುತೂಹಲ ಮೂಡಿಸಿದ ಚಿತ್ರತಂಡ
ಈ ವೇಳೆ ಭವ್ಯ ಮಾತನಾಡಿದರು. ‘ಕೊರಗಜ್ಜ ಸಿನಿಮಾವು ನನ್ನನ್ನು ಹೆಚ್ಚು ದೈವಭಕ್ತಳನ್ನಾಗಿಸಿದೆ. ನಾನು ಈ ಸಿನಿಮಾದ ಎಲ್ಲಾ ಕಾರ್ಯಕ್ರಮಗಳಿಗೂ ಭಾಗಿಯಾಗುತ್ತಾ ಚಿತ್ರತಂಡದ ಅವಿಭಾಜ್ಯ ಅಂಗ ಎನ್ನುವ ರೀತಿಯಲ್ಲಿ ಜೊತೆಗಿದ್ದೇನೆ. ಈ ಸಿನಿಮಾದಲ್ಲಿ ನಾನು ಕೊರಗಜ್ಜನಿಗೆ ಪ್ರಪ್ರಥಮವಾಗಿ ಅಗೆಲು ಸೇವೆ ನೀಡುವ ರಾಣಿ ಪಂಜಂದಾಯಿ ಪಾತ್ರ ವಹಿಸಿದ್ದೇನೆ. ಈಗ ನಿಜ ಜೀವನದಲ್ಲೂ ಕೊರಗಜ್ಜನಿಗೆ ಅಗೆಲು ಸೇವೆ ಮಾಡುವಂತಹ ಸೌಭಾಗ್ಯ ಸಿಕ್ಕಿದೆ’ ಎಂದು ಅವರು ಹೇಳಿದರು.
ಚೈನೀಸ್ ಭಾಷೆಗೂ ಈ ಸಿನಿಮಾ ಡಬ್ ಆಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ಹಾಂಕಾಂಗ್ ಮತ್ತು ಬೀಜಿಂಗ್ನಿಂದ ವಿತರಣಾ ಸಂಸ್ಥೆಗಳು ಮಾತುಕಥೆಗೆ ಮುಂದೆ ಬಂದಿವೆ. ಸಿನಿಮಾದ ಬಜೆಟ್ 40 ಕೋಟಿ ರೂಪಾಯಿ ದಾಟಿದರೂ ವ್ಯಾವಹಾರಿಕವಾಗಿ ವಿಶ್ವಾಸ ಮತ್ತು ಖುಷಿ ಹೆಚ್ಚುತ್ತಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ತೆರೆಕಾಣುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.