
ಕಳೆದ ವರ್ಷ ಬಿಡುಗಡೆ ಆದ ಮಲಯಾಳಂ ಸಿನಿಮಾ ‘ಮಂಜ್ಞುಮೆಲ್ ಬಾಯ್ಸ್’ (Manjummel Boys) ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಹಿಟ್ ಆಗಿದ್ದು ಮಾತ್ರವಲ್ಲದೆ ವರ್ಷದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿತು. ನಿಜ ಘಟನೆ ಆಧರಿಸಿದ ಈ ಸಿನಿಮಾ ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿತ್ತು. ಕೇವಲ 20 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ 250 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಭಾರಿ ಕಲೆಕ್ಷನ್ ಆದ ಬಳಿಕ ಸಿನಿಮಾ ತಂಡದಲ್ಲಿ ವೈಮನಸ್ಯ ಉಂಟಾಗಿದ್ದು, ಸಿನಿಮಾದ ನಾಯಕ ಮತ್ತು ನಿರ್ಮಾಪಕರೂ ಆಗಿರುವ ಸೌಬಿನ್ ವಿರುದ್ಧ ಈ ಮೊದಲೇ ದೂರು ದಾಖಲಾಗಿತ್ತು. ಇದೀಗ ನಟನನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾಕ್ಕೆ ಸಂಬಂಧಿಸಿದಂತೆ ಕಳೆದ ವರ್ಷವೇ ನಿರ್ಮಾಪಕರಾದ ಸೌಬಿನ್ ಸಾಹಿರ್, ಬಾಬು ಸಾಹಿರ್ ಮತ್ತು ಬಾಬು ಆಂಟೊನಿ ವಿರುದ್ಧ ದೂರು ದಾಖಲಾಗಿತ್ತು. ಆದರೆ ಆರೋಪಿಗಳು ಕೇರಳ ಹೈಕೋರ್ಟ್ಗೆ ಅರ್ಜಿ ಹಾಕಿಕೊಂಡು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆದರೆ ಇತ್ತೀಚೆಗೆ ಕೇರಳದ ಕೊಚ್ಚಿಯ ಮರಾಡು ಪೊಲೀಸ್ ಠಾಣೆ ಅಧಿಕಾರಿಗಳು ಸುಬಿನ್ ಸಾಹಿರ್, ಬಾಬು ಸಾಹಿರ್ ಮತ್ತು ಬಾಬು ಆಂಟೊನಿ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರು. ಬಳಿಕ ಮೂವರು ಆರೋಪಿಗಳನ್ನು ಬಂಧಿಸಿ, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ:ಸಿಬಿಎಫ್ಸಿ ವಿರುದ್ಧ ಪ್ರತಿಭಟನೆಗೆ ಮುಂದಾದ ಮಲಯಾಳಂ ಚಿತ್ರರಂಗ: ಕಾರಣ?
ಸಿರಾಜ್ ವಲಯತ್ತುರು ಎಂಬುವರು ಈ ಮೂವರು ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರುದಾರರ ಪ್ರಕಾರ, ಈ ಮೂವರು ಸಹ ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ನಿರ್ಮಾಣಕ್ಕೆ ಬೇರೆ ಬೇರೆ ಸಂದರ್ಭದಲ್ಲಿ ಏಳು ಕೋಟಿ ರೂಪಾಯಿ ಸಾಲ ಪಡೆದಿದ್ದರು. ಸಾಲಕ್ಕೆ ಪ್ರತಿಯಾಗಿ ಲಾಭದಲ್ಲಿ 40% ಹಣವನ್ನು ಕೊಡುವುದಾಗಿ ಹೇಳಿ ಹಣ ಪಡೆದುಕೊಂಡಿದ್ದರಂತೆ. ಆದರೆ ಈಗ 40% ಹಣವನ್ನು ನೀಡುತ್ತಿಲ್ಲ ಎಂದು ಸಿರಾಜ್ ವಲಯತ್ತುರು ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 20 ಕೋಟಿಗೂ ಹೆಚ್ಚು ಮೊತ್ತ ಕಲೆಹಾಕಿದೆ. ಲಾಭದಲ್ಲಿ 40% ಹಣ ನೀಡುವುದಾದರೆ ಸುಮಾರು 100 ಕೋಟಿಗೂ ಹೆಚ್ಚು ಹಣ ನೀಡಬೇಕಾಗುತ್ತದೆ. ಮೂವರು ಅಧಿಕೃತ ನಿರ್ಮಾಪಕರುಗಳಿಗೂ ಇಷ್ಟು ದೊಡ್ಡ ಮೊತ್ತದ ಲಾಭ ಬಂದಿರುವುದು ಅನುಮಾನ. ಹಾಗಾಗಿ ನಿರ್ಮಾಪಕರುಗಳು ಕಾನೂನು ಮೂಲಕ ಹೋರಾಟ ಮಾಡುತ್ತಿದ್ದಾರೆ. ಇದು ಮಾತ್ರವೇ ಅಲ್ಲದೆ, ಸಿನಿಮಾದ ಹಾಡು ಸಹ ವಿವಾದಕ್ಕೆ ಕಾರಣವಾಗಿತ್ತು. ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾನಲ್ಲಿ ತಮಿಳಿನ ಕಮಲ್ ಹಾಸನ್ ನಟನೆಯ ‘ಗುಣ’ ಸಿನಿಮಾದ ಜನಪ್ರಿಯ ಹಾಡೊಂದನ್ನು ಬಳಸಲಾಗಿತ್ತು. ಆ ಸಿನಿಮಾದ ಸಂಗೀತ ನಿರ್ದೇಶಕ ಇಳಯರಾಜ ಅವರು ಸಿನಿಮಾದ ವಿರುದ್ಧ ಕೃತಿಚೌರ್ಯದ ಆರೋಪ ಮಾಡಿದ್ದರು. ಆ ಪ್ರಕರಣವೂ ಸಹ ಚಾಲ್ತಿಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ