ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಹತ್ತು ಹಲವು ಕಾರಣಗಳಿಗಾಗಿ ಸದ್ದು ಮಾಡುತ್ತಿದ್ದಾರೆ. ಈಗಂತೂ ಅವರಿಗೆ ಸಿನಿಮಾ ಮಾತ್ರವಲ್ಲದೇ ಜಾಹೀರಾತು ಕ್ಷೇತ್ರದಲ್ಲಿ ಡಿಮ್ಯಾಂಡ್ ಹೆಚ್ಚಿದೆ. ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಜನಪ್ರಿಯ ಬ್ರ್ಯಾಂಡ್ಗಳಿಗೆ ರಶ್ಮಿಕಾ ರಾಯಭಾರಿ ಆಗುತ್ತಿದ್ದಾರೆ. ಅವುಗಳ ಜಾಹೀರಾತಿನಲ್ಲಿ ಕೊಡಗಿನ ಕುವರಿ ಮಿಂಚುತ್ತಿದ್ದಾರೆ. ರಶ್ಮಿಕಾ ಹೆಸರಿಗೆ ಈಗ ದೊಡ್ಡ ತೂಕ ಇದೆ. ಅದನ್ನು ಬಳಸಿಕೊಂಡು ಮಾರ್ಕೆಟಿಂಗ್ ಮಾಡಲು ಕೆಲವು ಕಂಪನಿಗಳು ಮುಂದೆಬಂದಿವೆ. ಆ ಪೈಕಿ ‘ಮ್ಯಾಕ್ ಡೊನಾಲ್ಡ್ಸ್’ (McDonald’s) ಕಂಪನಿ ಒಂದು ವಿಶೇಷ ಪ್ರಯೋಗ ಮಾಡಿದೆ. ರಶ್ಮಿಕಾ ಮಂದಣ್ಣ ಹೆಸರಿನಲ್ಲಿಯೇ ಊಟವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದಕ್ಕೆ ‘ದಿ ರಶ್ಮಿಕಾ ಮೀಲ್’ (The Rashmika Meal) ಎಂದು ಹೆಸರು ಇಡಲಾಗಿದೆ. ಅದರ ಜಾಹೀರಾತುಗಳು ಈಗ ರಾರಾಜಿಸುತ್ತಿವೆ.
ಅಮೆರಿಕಾ ಮೂಲದ ‘ಮ್ಯಾಕ್ ಡೊನಾಲ್ಡ್ಸ್’ ಕಂಪನಿ ವಿಶ್ವಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ. ಭಾರತದಲ್ಲೂ ಇದು ಫೇಮಸ್ ಆಗಿದೆ. ಮ್ಯಾಕ್ ಡೊನಾಲ್ಡ್ಸ್ ಕಡೆಯಿಂದ ಈಗ ‘ದಿ ರಶ್ಮಿಕಾ ಮೀಲ್’ ಪರಿಚಯಿಸಲಾಗಿದೆ. ಅದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ. ಈ ಊಟವನ್ನು ಹೇಗೆ ಸೇವಿಸಬೇಕು ಎಂದು ‘ಕಿರಿಕ್ ಪಾರ್ಟಿ’ ಬ್ಯೂಟಿ ಮಾಹಿತಿ ನೀಡಿದ್ದಾರೆ.
‘ಮೊದಲು ಸ್ಪೈಸೀ ಫ್ರೈಡ್ ಚಿಕನ್ ತಿನ್ನಬೇಕು. ಆನಂತರ ಮಿಕ್ಸ್ ಸ್ಪೈಸಿ ಚಿಕನ್ ಬರ್ಗರ್ ಜೊತೆ ಪಿರಿಪಿರಿ ಫ್ರೈಸ್ ಸೇವಿಸಬೇಕು. ಆ ಮೇಲೆ ನಿಂಬೂ ಫಿಜ್ ಕುಡಿಯಬೇಕು. ಕೊನೆಯದಾಗಿ ಮ್ಯಾಕ್ ಫ್ಲರಿ ಐಸ್ ಕ್ರೀಮ್ ಸವಿಯಬೇಕು’ ಎಂದು ರಶ್ಮಿಕಾ ಮಂದಣ್ಣ ವಿವರಿಸಿದ್ದಾರೆ. ಅವರ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಊಟದ ಪ್ಯಾಕೇಜ್ ಅನ್ನು ಪರಿಚಯಿಸಲಾಗಿದೆ. ಇದು ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ರಶ್ಮಿಕಾಗೆ ಸಿಕ್ಕಿರುವ ಜನಪ್ರಿಯತೆಯನ್ನು ದೊಡ್ಡ ದೊಡ್ಡ ಕಂಪನಿಗಳು ಈ ರೀತಿ ಉಪಯೋಗಿಸಿಕೊಳ್ಳುತ್ತಿರುವುದು ವಿಶೇಷ.
ಸದ್ಯ ರಶ್ಮಿಕಾ ಮಂದಣ್ಣ ಬಹುಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಪುಷ್ಪ’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅವರು ಅಲ್ಲು ಅರ್ಜುನ್ಗೆ ಜೋಡಿಯಾಗಿ ನಟಿಸಿದ್ದಾರೆ. ಡಿ.17ರಂದು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ವಿಶ್ವಾದ್ಯಂತ ‘ಪುಷ್ಪ’ ಬಿಡುಗಡೆ ಆಗಲಿದೆ. ಈ ಸಿನಿಮಾದಿಂದ ರಶ್ಮಿಕಾ ವೃತ್ತಿ ಜೀವನಕ್ಕೆ ದೊಡ್ಡ ಯಶಸ್ಸು ಸಿಗುವ ಸಾಧ್ಯತೆ ಇದೆ. ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್ ಜೊತೆ ‘ಗುಡ್ ಬೈ’, ಸಿದ್ದಾರ್ಥ್ ಮಲ್ಹೋತ್ರಾ ಜೊತೆ ‘ಮಿಷನ್ ಮಜ್ನು’ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.
ಇದನ್ನೂ ಓದಿ:
ತಮಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಮಂದಣ್ಣ ಹೇಳೋದೇನು?