ಭಾವನೆ ಕಡಲಲ್ಲಿ ಸಿಲುಕಿದ ನುಡಿ-ನೀಲ್: ‘ಅಮೆರಿಕಾ ಅಮೆರಿಕಾ 2’ ಚಿತ್ರ ವಿಮರ್ಶೆ

ಅಮೆರಿಕಾ ಅಮೆರಿಕಾ 2
- Time - 122 Minutes
- Released - ಸೆಪ್ಟೆಂಬರ್ 11, 2026
- Language - ಕನ್ನಡ
- Genre - ಡ್ರಾಮಾ, ರೊಮ್ಯಾಂಟಿಕ್
‘ಅಮೆರಿಕಾ ಅಮೆರಿಕಾ’ ಸಿನಿಮಾ 1997ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಇದಾದ ಸುಮಾರು 3 ದಶಕಗಳ ಬಳಿಕ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಬಂದಿದೆ. ಮೊದಲ ಭಾಗಕ್ಕೂ ಎರಡನೇ ಭಾಗಕ್ಕೂ ಯಾವುದೇ ಲಿಂಕ್ ಇಲ್ಲ. ಆದರೆ, ಎರಡೂ ಸಿನಿಮಾದ ಉಸಿರು ಒಂದೇ. ಅದುವೇ ಪ್ರೀತಿ. ಹಾಗಾದರೆ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಹೇಗಿದೆ? ಸಿನಿಮಾದ ವಿಮರ್ಶೆ ಇಲ್ಲಿದೆ.
ನುಡಿ (ಶಾನ್ವಿ ಶ್ರೀವಾಸ್ತವ) ಎಐ ಇಂಜಿನಿಯರ್. ಆಕೆಯ ಮೇಲೆ ಕಿಂಚಿತ್ತೂ ಕಾಳಜಿ ತೋರದ ಗಂಡ ನಿನಾದ್ (ನಿರೂಪ್ ಭಂಡಾರಿ) ಇದ್ದಾನೆ. ಇಬ್ಬರ ಮಧ್ಯೆ ದೊಡ್ಡ ಅಂತರ ಸೃಷ್ಟಿ ಆಗಿದೆ. ಮಗಳು ಸಿರಿ (ರೀತು ಸಿಂಗ್) ಕಾರಣಕ್ಕೆ ಇಬ್ಬರ ಸಂಸಾರ ಹಾಗೆಯೇ ಉಳಿದುಕೊಂಡಿದೆ. ಒಂದು ಪ್ರಾಜೆಕ್ಟ್ ನಿಮಿತ್ತ ಶಾನ್ವಿ ಅಮೆರಿಕ ತೆರಳಬೇಕಾದ ಪರಿಸ್ಥಿತಿ ಬರುತ್ತದೆ. ಅಮೆರಿಕದಲ್ಲಿ ಆಕೆಯ ಹಳೆಯ ಬಾಯ್ಫ್ರೆಂಡ್ ನೀಲ್ (ಪೃಥ್ವಿ ಅಂಬರ್) ಭೇಟಿ ಆಗುತ್ತದೆ. ಬಿಟ್ಟುಹೋದ ಭೂತ ಕಾಲದ ಪ್ರೀತಿ ದಸಕ್ಕನೆ ಮುಖದ ಎದುರು ಬಂದು ನಿಲ್ಲುತ್ತದೆ. ಅಲ್ಲಿಂದ ನುಡಿಯ ಮನಸ್ಸಿನ ಭಾವನೆಗಳ ತಿಕ್ಕಾಟ ಶುರು. ನುಡಿ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾಳೆ? ಕೊನೆಗೆ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ ಎಂಬುದೇ ಸಿನಿಮಾದ ಕಥೆ.
‘ಅಮೆರಿಕಾ ಅಮೆರಿಕಾ’ ಸಿನಿಮಾದಲ್ಲಿ ಪ್ರೀತಿ ಎಷ್ಟು ಸುಂದರ ಹಾಗೂ ಕಾಂಪ್ಲಿಕೇಟೆಡ್ ಎಂಬುದನ್ನು ತೋರಿಸಲಾಗಿತ್ತು. ಸೀಕ್ವೆಲ್ನ ಕಥೆಯ ಜೀವಾಳ ಕೂಡ ಇದೇ ಆಗಿದೆ. ಆದರೆ, ಇಲ್ಲಿ ಪ್ರೀತಿಯ ಸ್ವರೂಪ ಹಾಗೂ ಪರಿಸ್ಥಿತಿಗಳು ಬದಲಾಗಿವೆ. ಈ ಚಿತ್ರದ ಕ್ಲೈಮ್ಯಾಕ್ಸ್ ಜನರ ಮನಸ್ಸಿಗೆ ನಾಟುವ ಶಕ್ತಿಯನ್ನು ಹೊಂದಿದೆ. ಆದರೆ, ಸಿನಿಮಾದ ಮೊದಲಾರ್ಧದಲ್ಲಿ ಮುಖ್ಯ ಪಾತ್ರಗಳ ನಡುವಿನ ಸಂಬಂಧಕ್ಕೆ ಇನ್ನಷ್ಟು ಆಳವಾದ ತರ್ಕ ಬೇಕಿತ್ತು ಎಂದನಿಸುತ್ತದೆ. ಇವರ ಭಾವನೆಗಳು, ಇವರ ನೋವು, ಇವರ ವಿರಹ ಅಷ್ಟಾಗಿ ಪ್ರೇಕ್ಷಕನಿಗೆ ತಲುಪುವುದಿಲ್ಲ. ಕೆಲವು ದೃಶ್ಯಗಳಿಗೆ ಇನ್ನಷ್ಟು ವಿಸ್ತಾರವಾದ ವಿವರಣೆಯ ಅಗತ್ಯವಿತ್ತು ಎಂದನಿಸುತ್ತದೆ. ಹೊಸತನದ ಕೊರತೆಯೂ ಎದ್ದು ಕಾಣಿಸುತ್ತದೆ.
ಇದನ್ನೂ ಓದಿ: ‘ಅಮೆರಿಕಾ ಅಮೆರಿಕಾ 2’ ಈ ವಾರ ರಿಲೀಸ್; ‘ಅಮೆರಿಕಾ ಅಮೆರಿಕಾ’ ಕಲಾವಿದರು ಎಲ್ಲಿದ್ದಾರೆ?
ನಟನೆಯಲ್ಲಿ ಶಾನ್ವಿ ಶ್ರೀವಾಸ್ತವ್ ನುಡಿ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಭಾವನೆಗಳ ತಿಕ್ಕಾಟದಲ್ಲಿ ಬೇಯುವುದು ಅಲ್ಲಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇನ್ನು ಪೃಥ್ವಿ ಅಂಬಾರ್ ಮತ್ತು ನಿರೂಪ್ ಭಂಡಾರಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರೀತು ಸಿಂಗ್ ಕೂಡ ಉತ್ತಮ ನಟನೆ ತೋರಿಸಿದ್ದಾರೆ. ಅಮೆರಿಕದ ಸುಂದರ ತಾಣಗಳನ್ನು ಎಸ್‌ಕೆ ರಾವ್ ಅವರು ಅದ್ಭುತವಾಗಿ ಚಿತ್ರಿಸಿದ್ದಾರೆ. ಮನೋಮೂರ್ತಿ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಈ ಬಾರಿ ಮೋಡಿ ಮಾಡುವಲ್ಲಿ ಕೊಂಚ ಎಡವಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:00 am, Fri, 11 September 26




