Ghost Review: ಮಾಸ್​ ಪ್ರೇಕ್ಷಕರಿಗಾಗಿ ಅವಸರದಲ್ಲಿ ಹೇಳಿಮುಗಿಸಿದ ‘ಘೋಸ್ಟ್​’ ಕಹಾನಿ

|

Updated on: Oct 19, 2023 | 2:58 PM

Ghost Movie Review: ನಿರ್ದೇಶಕ ಶ್ರೀನಿ ಅವರು ಪ್ರೇಕ್ಷಕರಿಗೆ ಯಾವುದನ್ನೂ ಯೋಚಿಸಲು ಸಮಯಾವಕಾಶ ನೀಡಿಲ್ಲ. ಒಂದರಹಿಂದೊಂದು ದೃಶ್ಯಗಳು ಪಟಪಟನೆ ಸಾಗುತ್ತವೆ. ಸ್ವಲ್ಪ ಗಮನ ಅತ್ತಿತ್ತ ಹರಿದರೂ ಏನೋ ಒಂದನ್ನು ಮಿಸ್​ ಮಾಡಿಕೊಂಡಂತೆ ಅನಿಸುತ್ತದೆ. ಇಂಥ ಹರಿಬರಿಯ ನಿರೂಪಣೆಯು ಒಮ್ಮೆ ಪ್ಲಸ್​ ಆದರೆ, ಕೆಲವೊಮ್ಮೆ ಮೈನಸ್​ ಎನಿಸಿಕೊಳ್ಳುತ್ತದೆ.

Ghost Review: ಮಾಸ್​ ಪ್ರೇಕ್ಷಕರಿಗಾಗಿ ಅವಸರದಲ್ಲಿ ಹೇಳಿಮುಗಿಸಿದ ‘ಘೋಸ್ಟ್​’ ಕಹಾನಿ
ಶಿವರಾಜ್​ಕುಮಾರ್​
Follow us on

ಚಿತ್ರ: ಘೋಸ್ಟ್​. ನಿರ್ಮಾಣ: ಸಂದೇಶ ಪ್ರೊಡಕ್ಷನ್ಸ್​. ನಿರ್ದೇಶನ: ಶ್ರೀನಿ. ಪಾತ್ರವರ್ಗ: ಶಿವರಾಜ್​ಕುಮಾರ್​, ಅನುಪಮ್​ ಖೇರ್​, ಜಯರಾಂ, ಅರ್ಚನಾ ಜೋಯಿಸ್​, ಪ್ರಶಾಂತ್​ ನಾರಾಯಣನ್​, ದತ್ತಣ್ಣ ಮುಂತಾದವರು. ಸ್ಟಾರ್​: 3/5

ನಟ ಶಿವರಾಜ್​ಕುಮಾರ್​ (Shivarajkumar) ಅವರಿಗೆ ಭೂಗತ ಲೋಕದ ಕಥಾಹಂದರ ಇರುವ ಸಿನಿಮಾಗಳು ಹೊಸದೇನೂ ಅಲ್ಲ. ಈಗಾಗಲೇ ಅವರು ಅಂಥ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಭರ್ಜರಿಯಾಗಿ ರಂಜಿಸಿದ್ದಾರೆ. ಇಂದು (ಅ.19) ಬಿಡುಗಡೆ ಆಗಿರುವ ‘ಘೋಸ್ಟ್​’ ಸಿನಿಮಾದಲ್ಲೂ ಅಂಥ ಒಂದು ಅಂಡರ್​ವರ್ಲ್ಡ್​ ಜಗತ್ತಿನ ಕಥೆ ಇದೆ. ಆದರೆ ಒಂದಷ್ಟು ಕಾರಣಗಳಿಂದಾಗಿ ಬೇರೆ ಚಿತ್ರಗಳಿಗಿಂತಲೂ ‘ಘೋಸ್ಟ್​’ ಭಿನ್ನ ಎನಿಸಿಕೊಳ್ಳುತ್ತದೆ. ನಿರ್ದೇಶಕ ಶ್ರೀನಿ (MG Srinivas) ಅವರು ತುಂಬ ವೇಗವಾದ ಚಿತ್ರಕಥೆಯ ಮೂಲಕ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಶಿವರಾಜ್​ಕುಮಾರ್​ ​ಅವರು ಖಡಕ್​ ಆದಂತಹ ಮ್ಯಾನರಿಸಂ ಮೂಲಕ ಅಭಿಮಾನಿಗಳ ಎದುರು ಬಂದಿದ್ದಾರೆ. ಒಟ್ಟಾರೆ ಸಿನಿಮಾದಲ್ಲಿ ಪ್ಲಸ್​ ಮತ್ತು ಮೈಸನ್​ ಏನು ಎಂಬುದು ತಿಳಿಯಲು ಈ ವಿಮರ್ಶೆ (Ghost Review) ಓದಿ.

‘ಘೋಸ್ಟ್​’ ಚಿತ್ರದಲ್ಲಿ ಥ್ರಿಲ್ಲರ್​ ಕಹಾನಿ:

ನಿರ್ದೇಶಕ ಶ್ರೀನಿ ಅವರು ‘ಘೋಸ್ಟ್​’ ಸಿನಿಮಾದಲ್ಲಿ ಥ್ರಿಲ್ಲಿಂಗ್​ ಆದಂತಹ ಒಂದು ಕಥೆಯನ್ನು ತೆರೆದಿಟ್ಟಿದ್ದಾರೆ. ಒಂದು ಜೈಲನ್ನು ಕಥಾನಾಯಕನೇ ಹೈಜಾಕ್​ ಮಾಡುವ ದೃಶ್ಯದ ಮೂಲಕ ಸಿನಿಮಾ ಆರಂಭ ಆಗುತ್ತದೆ. ಬಹುತೇಕ ಕಹಾನಿ ಒಂದೇ ಲೊಕೇಷನ್​ನಲ್ಲಿ ನಡೆಯುತ್ತದೆ. ಹಾಗಾಗಿ ಕೆಲವೊಮ್ಮೆ ಏಕತಾನತೆ ಕಾಡುತ್ತದೆ. ಆದರೆ ಫ್ಲ್ಯಾಶ್​ಬ್ಯಾಕ್​ ತಂತ್ರದ ಮೂಲಕ 10 ವರ್ಷದ ಹಳೇ ಕಹಾನಿಯನ್ನೂ ಹೇಳಲಾಗುತ್ತದೆ. ಅಷ್ಟಕ್ಕೂ ಕಥಾನಾಯಕ ಎಲ್ಲವನ್ನೂ ಬಿಟ್ಟು ಜೈಲನ್ನೇ ಹೈಜಾಕ್​ ಮಾಡಿದ್ದು ಯಾಕೆ ಎಂಬುದು ಪ್ರೇಕ್ಷಕರ ಮನದಲ್ಲಿ ಕಾಡುವ ದೊಡ್ಡ ಪ್ರಶ್ನೆ. ಅದಕ್ಕೆ ಕ್ಲೈಮ್ಯಾಕ್ಸ್​ನಲ್ಲಿ ಉತ್ತರ ಸಿಗುತ್ತದೆ.

ಕಾಲಹರಣಕ್ಕೆ ಜಾಗವಿಲ್ಲ:

‘ಘೋಸ್ಟ್​’ ಸಿನಿಮಾ ಭಿನ್ನ ಎನಿಸಿಕೊಳ್ಳುವುದು ವೇಗವಾದ ನಿರೂಪಣೆಯ ಕಾರಣಕ್ಕೆ. ಹಾಡಿನ ನೆಪದಲ್ಲಿ ನಿರ್ದೇಶಕರು ಸಮಯ ಹಾಳು ಮಾಡಿಲ್ಲ. ದೀರ್ಘವಾದ ಸಂಭಾಷಣೆಗಳು ಇದರಲ್ಲಿ ಇಲ್ಲ. ಎಲ್ಲವನ್ನೂ ತುಂಬ ಚುರುಕಾಗಿ ಮತ್ತು ಚುಟುಕಾಗಿ ಮುಗಿಸಬೇಕು ಎಂಬುದು ನಿರ್ದೇಶಕರ ಗುರಿ. ಆ ಪ್ರಯತ್ನಕ್ಕೆ ಸಂಕಲನಕಾರ ದೀಪು ಎಸ್​. ಕುಮಾರ್​ ಅವರು ಸಾಥ್​ ನೀಡಿದ್ದಾರೆ. ಹಾಗಾಗಿ ಈ ಸಿನಿಮಾ ಆರಂಭದಿಂದ ಕೊನೆವರೆಗೆ ಪಟಪಟನೆ ಸಾಗುತ್ತದೆ. ಕಾಮಿಡಿ ಇದ್ದರೂ ಕೂಡ ಅದು ತುಂಬ ಕಡಿಮೆ ಪ್ರಮಾಣದಲ್ಲಿದೆ. ಕಾಮಿಡಿ ಸಲುವಾಗಿ ಪ್ರತ್ಯೇಕ ದೃಶ್ಯಗಳನ್ನು ಸೇರಿಸಿಲ್ಲ. ಕಥೆಯಲ್ಲಿ ಹೀರೋಯಿನ್​ ಪಾತ್ರವೇ ಇಲ್ಲ. ಒಟ್ಟಾರೆ ಕಥೆಯ ವಿಸ್ತಾರ ದೊಡ್ಡದಾಗಿದ್ದರೂ ಕೂಡ 2 ಗಂಟೆ 14 ನಿಮಿಷದ ಅವಧಿಯಲ್ಲಿ ಎಲ್ಲವನ್ನೂ ಹೇಳಿಮುಗಿಸಲು ಸಾಧ್ಯವಾಗಿದ್ದು ಈ ಎಲ್ಲ ಕಾರಣಗಳಿಂದ.

ಇದನ್ನೂ ಓದಿ: Abhiramachandra Review: ಮೊದಲ ಪ್ರೇಮಕ್ಕಾಗಿ ಎಮೋಷನಲ್​ ಜರ್ನಿ; ಮಿಕ್ಕಿದ್ದೆಲ್ಲ ಫನ್ನಿ

ಆ್ಯಕ್ಷನ್​ಪ್ರಿಯರಿಗೆ ಮಾಸ್​ ಸಿನಿಮಾ:

ಶಿವರಾಜ್​ಕುಮಾರ್​ ಅವರನ್ನು ತುಂಬ ಮಾಸ್​ ಆಗಿ ತೋರಿಸಲು ಶ್ರೀನಿ ಪ್ರಯತ್ನಿಸಿದ್ದಾರೆ. ಅದಕ್ಕೆ ತಕ್ಕಂತೆಯೇ ಫೈಟಿಂಗ್​ ದೃಶ್ಯಗಳನ್ನು ಕಂಪೋಸ್​ ಮಾಡಲಾಗಿದೆ. ಶಿವರಾಜ್​ಕುಮಾರ್​ ಅವರ ಅಭಿಮಾನಿಗಳಿಗೆ ಇದು ಹೆಚ್ಚು ಇಷ್ಟ ಆಗುತ್ತದೆ. ಗನ್​ಗಳನ್ನು ಬಳಸಿಕೊಂಡ ರೀತಿಯೇ ಶಿವಣ್ಣನ ಕಣ್ಣನ್ನೂ ಬಳಸಿಕೊಂಡಿದ್ದಾರೆ ನಿರ್ದೇಶಕರು. ಮಾಸ್​ ಸಿನಿಮಾ ಎಂದಮಾತ್ರಕ್ಕೆ ಮಾರುದ್ದದ ಡೈಲಾಗ್​ಗಳನ್ನೂ ಹೇಳಿಸಲಾಗಿಲ್ಲ. ಅಗತ್ಯ ಇರುವ ಕಡೆ ಮಾತ್ರ ಚುಟುಕಾದ ಪಂಚ್​ ಡೈಲಾಗ್​ಗಳು ಕೇಳಿಸಿವೆ. ಚಿತ್ರದ ಮಾಸ್​ ಗುಣ ಜಾಸ್ತಿ ಆಗಿರುವುದು ಅರ್ಜುನ್​ ಜನ್ಯ ಅವರ ಹಿನ್ನೆಲೆ ಸಂಗೀತದ ಮೂಲಕ. ಹಾಡುಗಳಿಲ್ಲದ ಕಾರಣ ಹಿನ್ನೆಲೆ ಸಂಗೀತದಲ್ಲೇ ಅವರು ಭರ್ಜರಿ ಸ್ಕೋರ್​ ಮಾಡಿದ್ದಾರೆ. ಮಹೇನ್​ ಸಿಂಹ ಅವರ ಛಾಯಾಗ್ರಹಣ ಮೆಚ್ಚುವಂತಿದೆ.

ಲಾಜಿಕ್​ ಕೇಳುವಂತಿಲ್ಲ:

‘ಘೋಸ್ಟ್​’ ಕಥೆ ಚೆನ್ನಾಗಿದೆ. ಆದರೆ ಅದರಲ್ಲಿ ಲಾಜಿಕ್​ ಹುಡುಕೋದು ಕಷ್ಟ. ಯಾವುದೇ ಪ್ರಶ್ನೆಗಳನ್ನು ಕೇಳದೇ ತೆರೆಮೇಲೆ ಕಂಡಿದ್ದನ್ನೆಲ್ಲ ಒಪ್ಪಿಕೊಂಡರೆ ಮಾತ್ರ ‘ಘೋಸ್ಟ್​’ ಸಿನಿಮಾ ಸೂಪರ್​ ಎನಿಸುತ್ತದೆ. ಇದೇಕೆ ಹೀಗಾಯಿತು? ಅದೇಕೆ ಹಾಗಾಯಿತು ಅಂತ ಲಾಜಿಕಲ್​ ಪ್ರಶ್ನೆ ಕೇಳಿದರೆ ​ಚಿತ್ರದ ಮ್ಯಾಜಿಕಲ್​ ಗುಣ ಮಾಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶಕ ಶ್ರೀನಿ ಅವರು ಪ್ರೇಕ್ಷಕರಿಗೆ ಯಾವುದನ್ನೂ ಯೋಚಿಸಲು ಸಮಯಾವಕಾಶವನ್ನೇ ನೀಡಿಲ್ಲ. ಒಂದರಹಿಂದೊಂದು ದೃಶ್ಯಗಳು ಪಟಪಟನೆ ಸಾಗುತ್ತವೆ. ಸ್ವಲ್ಪ ಗಮನ ಅತ್ತಿತ್ತ ಹರಿದರೂ ಏನೋ ಒಂದನ್ನು ಮಿಸ್​ ಮಾಡಿಕೊಂಡಂತೆ ಅನಿಸುತ್ತದೆ. ಇಂಥ ಹರಿಬರಿಯ ನಿರೂಪಣೆಯು ಒಮ್ಮೆ ಪ್ಲಸ್​ ಆದರೆ, ಕೆಲವೊಮ್ಮೆ ಮೈನಸ್​ ಎನಿಸಿಕೊಳ್ಳುತ್ತದೆ. ವಾವ್​ ಎನಿಸುವಂತಹ ಕೆಲವು ದೃಶ್ಯಗಳನ್ನು ಶ್ರೀನಿ ಹೆಣೆದಿದ್ದಾರೆ. ಆದರೆ ಮುಖ್ಯ ಕಥೆಯ ಜೊತೆ ಆ ದೃಶ್ಯಗಳಿಗೆ ಇರುವ ನಂಟನ್ನು ನಂಬಲಾರ್ಹ ರೀತಿಯಲ್ಲಿ ಕಟ್ಟಿಕೊಡುವಲ್ಲಿ ಎಡವಿದಂತಿದೆ.

ಇದನ್ನೂ ಓದಿ: The Vaccine War Review: ಕೊವಿಡ್​ಗೆ ಲಸಿಕೆ ಕಂಡುಹಿಡಿದ ವಿಜ್ಞಾನಿಗಳ ಏಕಪಕ್ಷೀಯ ಸಂವಾದ

ಹೇಗಿದೆ ಶಿವಣ್ಣನ ಯಂಗ್​ ಲುಕ್​?

ಈ ಸಿನಿಮಾದ ಟ್ರೇಲರ್​ನಲ್ಲಿ ಹೆಚ್ಚು ಹೈಲೈಟ್​ ಆಗಿದ್ದು ಶಿವರಾಜ್​ಕುಮಾರ್​ ಅವರ ಯಂಗ್​ ಲುಕ್​. ದೊಡ್ಡ ಪರದೆಯಲ್ಲಿ ಅದನ್ನು ನೋಡಿ ಆಸ್ವಾದಿಸಬೇಕು ಎಂದುಕೊಂಡ ಪ್ರೇಕ್ಷಕರು ಕ್ಲೈಮ್ಯಾಕ್ಸ್​ವರೆಗೂ ಕಾಯಬೇಕು. ಈ ಸನ್ನಿವೇಶಗಳಲ್ಲೇ ಅನುಪಮ್​ ಖೇರ್​ ಅವರ ಪಾತ್ರ ಬರುತ್ತದೆ. ಕೆಲವೇ ಹೊತ್ತು ಕಾಣಿಸಿಕೊಂಡರೂ ಕಥೆಯ ಆಳವನ್ನು ವಿವರಿಸುವ ಪಾತ್ರವಾಗಿ ಅದು ಸ್ಥಾನ ಪಡೆದುಕೊಂಡಿದೆ. ಅಭಿಜಿತ್​ ಕೂಡ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ. ಟಿವಿ ವರದಿಗಾರ್ತಿ ಪಾತ್ರ ಮಾಡಿರುವ ಅರ್ಚನಾ ಜೋಯಿಸ್​ ಕೂಡ ಕೆಲವು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.