
ಇಂದಿನ ಕಾಲದಲ್ಲಿ ಜಗತ್ತು ಯಾವ ವೇಗದಲ್ಲಿ ಸಾಗುತ್ತಿದೆ ಎಂಬುದುನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಒಂದುಕಡೆ ತಂತ್ರಜ್ಞಾನದಲ್ಲಿ ಮುಂದೆ ಹೋಗುತ್ತಿದ್ದೇವೆ ಎಂಬ ಖುಷಿಯಾದರೆ, ಮತ್ತೊಂದು ಕಡೆ ಇದೇ ತಂತ್ರಜ್ಞಾನ ಎಲ್ಲರನ್ನೂ ನುಂಗಿ ಬಿಡಬಹುದು ಎಂಬ ಆತಂಕ. ಇದೇ ಆತಂಕವನ್ನು ಇಟ್ಟುಕೊಂಡು ‘ಲಂಬೋದರ 2.O’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾ ಹೇಗಿದೆ ಎಂಬುದರ ವಿಮರ್ಶೆ ಇಲ್ಲಿದೆ.
ಅವ್ಯಕ್ತ (ಅನಿಲ್ ಶೆಟ್ಟಿ) ಓರ್ವ ಹ್ಯಾಕರ್. ಹಾಗಂತ ದೊಡ್ಡ ದೊಡ್ಡ ಬ್ಯಾಂಕ್ಗಳಿಗಾಗಲಿ, ಬಿಸ್ನೆಸ್ಮೆನ್ ಅಕೌಂಟ್ ದೋಚೋದಾಗಲಿ ಅವನ ಪ್ಲ್ಯಾನ್ ಅಲ್ಲವೇ ಅಲ್ಲ. ಯಾರ ಖಾತೆಯಲ್ಲಿ ಎಷ್ಟೇ ಹಣ ಇದ್ದರೂ ಆತ ದೋಚೋದು 1180 ರೂಪಾಯಿ ಮಾತ್ರ. ದೊಡ್ಡ ಮೊತ್ತ ಕದ್ದರೆ ಸುಲಭದಲ್ಲಿ ಸಿಕ್ಕಿ ಬೀಳಬಹುದು ಎಂಬ ಭಯ ಒಂದು ಕಡೆಯಾದರೆ, ಇಷ್ಟು ಸಣ್ಣ ಮೊತ್ತ ಕದ್ದರೆ ಹಣ ಕಳೆದುಕೊಂಡವರು ಎಚ್ಚೆತ್ತುಕೊಳ್ಳುತ್ತಾರೆ ಎಂಬ ಕಾಳಜಿ ಮತ್ತೊಂದು ಕಡೆ. ಎಲ್ಲವೂ ಹ್ಯಾಪಿಯಾಗಿದೆ ಎಂದಾಗಲೇ ಆತ ಬಾಳಲ್ಲಿ ಸಮಯ (ಸಾಚಿ ಬಿಂದ್ರಾ) ಹಾಗೂ ಹ್ಯಾಪಿನೆಸ್ ಬ್ಯಾಂಡ್ ಬರುತ್ತದೆ. ಅಲ್ಲಿಂದ ಈತನ ಟೈಮ್ ಚೇಂಜ್ ಆಗುತ್ತದೆ. ಎಲ್ಲರ ಜೇಬಿಗೆ ಕನ್ನ ಹಾಕುತ್ತಿದ್ದ ಕಥಾ ನಾಯಕನೇ ನಂತರ ಹ್ಯಾಕಿಂಗ್ ಜಾಲದಲ್ಲಿ ಸಿಲುಕುತ್ತಾನೆ. ಇದರಿಂದ ಆತ ಹೇಗೆ ಹೊರ ಬರುತ್ತಾನೆ ಎಂಬುದನ್ನು ಸಿನಿಮಾದಲ್ಲಿ ನೋಡಿ ತಿಳಿದುಕೊಳ್ಳಬೇಕು.
ಇಂದಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮೀಡಿಯಾ ಎನ್ನುವುದು ಕೇವಲ ಸಂಪರ್ಕ ಸಾಧನವಾಗಿ ಉಳಿಯದೆ ಜನರ ಮನಸ್ಸನ್ನು ನಿಯಂತ್ರಿಸುವ ಅಗೋಚರ ಶಕ್ತಿಯಾಗಿ ಬದಲಾಗಿದೆ. ಲೈಕ್ಸ್, ಕಾಮೆಂಟ್ಸ್ ಮತ್ತು ಶೇರ್‌ಗಳ ವ್ಯಾಮೋಹಕ್ಕೆ ಬಿದ್ದಿರುವ ಜನರು ತಮ್ಮ ಸ್ವಂತ ಆಲೋಚನಾ ಶಕ್ತಿಯನ್ನೇ ಕಳೆದುಕೊಂಡು ಅಲ್ಗಾರಿದಮ್‌ಗಳ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಯಾವುದನ್ನು ನೋಡಬೇಕು. ಏನನ್ನು ನಂಬಬೇಕು ಮತ್ತು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಸೋಶಿಯಲ್ ಮೀಡಿಯಾ ವೇದಿಕೆಗಳೇ ನಿರ್ಧರಿಸುತ್ತಿವೆ. ಇದರಿಂದಾಗಿ ವಾಸ್ತವ ಬದುಕಿಗಿಂತ ವರ್ಚುವಲ್ ಪ್ರಪಂಚವೇ ಮುಖ್ಯವೆನಿಸುವ ಪರಿಸ್ಥಿತಿ ಬಂದಿದೆ. ಇದನ್ನು ಸಿನಿಮಾದಲ್ಲಿ ಚೆನ್ನಾಗಿ ನಿರೂಪಿಸಲಾಗಿದೆ.
ಈ ಸಿನಿಮಾದಲ್ಲಿ ಕೃಷ್ಣ ಎಐ ಅಸಿಸ್ಟಂಟ್ ರೂಪದಲ್ಲಿದ್ದಾನೆ. ಇಡೀ ಕಥೆಗೆ ಈ ಕೃಷ್ಣ ತುಂಬಾನೇ ಮುಖ್ಯವಾಗುತ್ತದೆ ಎಂಬುದು ವಿಶೇಷ. ಜಿಯಾ ರೋಬೋ ಕಥೆಯಲ್ಲಿ ಎಷ್ಟು ಹೈಲೈಟ್ ಆಗಿದೆಯೋ ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಕೃಷ್ಣನ ಎಐ ರೂಪಕ್ಕೆ ಸಿಕ್ಕಿದೆ. ಅನಿಲ್ ಶೆಟ್ಟಿ ಹಾಗೂ ಅಭಿಜಿತ್ ಮಹೇಶ್ ಬರಹವನ್ನು ಈ ವಿಷಯದಲ್ಲಿ ಮೆಚ್ಚಲೇಬೇಕು. ಇನ್ನು, ಅನಿಲ್ ಶೆಟ್ಟಿ ಹಾಗೂ ಅಭಿಜಿತ್ ಅವರ ಕಥೆಯನ್ನು ಸುನಿ ಅವರು ತೆರೆಮೇಲೆ ತರುವ ಕೆಲಸವನ್ನು ಮಾಡಿದ್ದಾರೆ. ಅವರು ತಮ್ಮ ಸಿಗ್ನೇಚರ್ ಸ್ಟೈಲ್ನಲ್ಲೇ ಸಿನಿಮಾನ ಕಟ್ಟಿಕೊಟ್ಟಿದ್ದಾರೆ.
ಇದನ್ನೂ ಓದಿ: ‘ಲಂಬೋದರ 2.0’ ಅಡ್ವಾನ್ಸ್ ಬುಕಿಂಗ್ ಶುರು: ರೋಬೋ ಜೊತೆ ಸಿಂಪಲ್ ಸುನಿ ಸಿನಿಮಾ
ಹಾಗಾದರೆ, ಈ ಸಿನಿಮಾ ಪರ್ಫೆಕ್ಟಾ? ಇಲ್ಲ. ಈ ಚಿತ್ರದಲ್ಲಿ ಕೆಲವು ವಿಷಯಗಳು ಬದಲಾಗಿದ್ದರೆ ಸಿನಿಮಾ ಮತ್ತಷ್ಟು ಸುಂದರವಾಗಿ ಕಾಣುತ್ತಾ ಇತ್ತು. ಕೆಲವು ಕಡೆ ಲಾಜಿಕ್ ಸಂಪೂರ್ಣವಾಗಿ ಮಿಸ್ ಆಗಿದೆ. ಕೆಲವು ಕಡೆಗಳಲ್ಲಿ ನಿಧಾನಗತಿಯ ನಿರೂಪಣೆ ಇದೆ. ಕಥಾ ನಾಯಕ ಅನಿಲ್ ಶೆಟ್ಟಿ ಅವರ ನಟನೆ ಮತ್ತಷ್ಟು ಹರಿತವಾಗಿದ್ದರೆ ಸಿನಿಮಾದ ಅಂದ ಹೆಚ್ಚುತ್ತಿತ್ತು. ಕೆಲವು ಹಾಡುಗಳು ಅನಗತ್ಯವಾಗಿ ಸೇರಿಸಿದಂತೆ ಭಾಸಗವಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.