Love You Abhi Review: ಫ್ಯಾಮಿಲಿ ಪ್ರೇಕ್ಷಕರಿಗೊಂದು​ ವೆಬ್​ ಸಿರೀಸ್​ ‘ಲವ್​ ಯೂ ಅಭಿ’; ಈ ಶಿವ ಕೆಟ್ಟವನೋ? ಒಳ್ಳೆಯವನೋ?

|

Updated on: May 21, 2023 | 3:05 PM

Jio Cinema: ನಟ ವಿಕ್ರಮ್​ ರವಿಚಂದ್ರನ್​ ಅವರು ಈಗತಾನೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಅವರು ವೆಬ್​ ಸರಣಿ ಲೋಕಕ್ಕೂ ಎಂಟ್ರಿ ನೀಡಿದ್ದಾರೆ.

Love You Abhi Review: ಫ್ಯಾಮಿಲಿ ಪ್ರೇಕ್ಷಕರಿಗೊಂದು​ ವೆಬ್​ ಸಿರೀಸ್​ ‘ಲವ್​ ಯೂ ಅಭಿ’; ಈ ಶಿವ ಕೆಟ್ಟವನೋ? ಒಳ್ಳೆಯವನೋ?
ವಿಕ್ರಮ್ ರವಿಚಂದ್ರನ್, ಅದಿತಿ ಪ್ರಭುದೇವ
Follow us on

ವೆಬ್​ ಸಿರೀಸ್​: ‘ಲವ್​ ಯೂ ಅಭಿ’

ನಿರ್ಮಾಣ: ಜಿಯೋ ಸಿನಿಮಾಸ್​

ನಿರ್ದೇಶನ: ಕಾಳಿ ವೇಲಾಯುಧಂ

ಪಾತ್ರವರ್ಗ: ವಿಕ್ರಮ್​ ರವಿಚಂದ್ರನ್​, ಅದಿತಿ ಪ್ರಭುದೇವ, ಪಿ. ರವಿಶಂಕರ್​, ವಿನಯಾ ಪ್ರಸಾದ್​, ಕೆಂಪೇಗೌಡ, ಸುಂದರ್​ ರಾಜ್​, ಅಂಬಿಕಾ, ಶ್ರೀನಾಥ್​ ಮುಂತಾದವರು.

ವೆಬ್​ ಸಿರೀಸ್​ಗಳ ಬಗ್ಗೆ ಪ್ರೇಕ್ಷಕರಿಗೆ ಒಂದು ಭಾವನೆ ಇದೆ. ಸಾಮಾನ್ಯವಾಗಿ ವೆಬ್​ ಸರಣಿಯಲ್ಲಿ ಲೈಂಗಿಕತೆ ಮತ್ತು ಕ್ರೈಮ್​ ಸಂಬಂಧಿತ ಕಥೆಗಳೇ ರಾರಾಜಿಸುತ್ತವೆ. ಹಾಗಾಗಿ ಕೌಟುಂಬಿಕ ಪ್ರೇಕ್ಷಕರು ವೆಬ್​ ಸಿರೀಸ್​ಗಳಿಂದ ಕೊಂಚ ದೂರವೇ ಉಳಿಯುವುದುಂಟು. ಕನ್ನಡದ ಮಟ್ಟಿಗೆ ವೆಬ್​ ಸಿರೀಸ್​ಗಳ (Kannada Web Series) ಸಂಖ್ಯೆ ಕಡಿಮೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಒಂದು ಹೊಸ ವೆಬ್​ ಸಿರೀಸ್​ ಬಿಡುಗಡೆ ಆಗಿದೆ. ಇದರ ಹೆಸರು ‘ಲವ್​ ಯೂ ಅಭಿ’. ಅದಿತಿ ಪ್ರಭುದೇವ (Aditi Prabhudeva) ಮತ್ತು ವಿಕ್ರಮ್​ ರವಿಚಂದ್ರನ್ ಅವರು ಇದರಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಸದ್ಯಕ್ಕೆ ಪ್ರೇಕ್ಷಕರು ಇದನ್ನು ಉಚಿತವಾಗಿ ವೀಕ್ಷಿಸಬಹುದು. ಪಕ್ಕಾ ಫ್ಯಾಮಿಲಿ ಪ್ರೇಕ್ಷಕರನ್ನೇ ಗಮನದಲ್ಲಿ ಇಟ್ಟುಕೊಂಡು ಈ ವೆಬ್​ ಸರಣಿ ಸಿದ್ಧವಾದಂತಿದೆ. ಒಟ್ಟಾರೆಯಾಗಿ ‘ಲವ್​ ಯೂ ಅಭಿ’ (Love You Abhi) ಹೇಗಿದೆ ಅಂತ ತಿಳಿಯಲು ಈ ವಿಮರ್ಶೆ ಓದಿ.

ಮಾಮೂಲಿ ವೆಬ್​ ಸಿರೀಸ್​ಗಳಲ್ಲಿ ಕಂಡುಬರುವ ಅಂಶಗಳು ‘ಲವ್​ ಯೂ ಅಭಿ’ ದೃಶ್ಯಗಳಲ್ಲಿ ಇಲ್ಲ. ಇದರಲ್ಲಿ ಯಾವ ಪಾತ್ರವೂ ಅಸಭ್ಯ ಮಾತುಗಳನ್ನು ಆಡುವುದಿಲ್ಲ. ಯಾರೂ ಕೂಡ ಅಶ್ಲೀಲವಾಗಿ ನಡೆದುಕೊಳ್ಳುವುದಿಲ್ಲ. ಸ್ವಲ್ಪ ಬೋಲ್ಡ್​ ಎನಿಸುವ ದೃಶ್ಯಗಳು ಇದ್ದರೂ ಕೂಡ ಫ್ಯಾಮಿಲಿ ಪ್ರೇಕ್ಷಕರಿಗೆ ಮುಜುಗರ ಆಗದ ರೀತಿಯಲ್ಲಿ ಅದನ್ನು ಕಟ್ಟಿಕೊಡಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ‘ಲವ್​ ಯೂ ಅಭಿ’ ಡಿಫರೆಂಟ್​ ಎನಿಸಿಕೊಳ್ಳುತ್ತದೆ.

ನಟ ವಿಕ್ರಮ್​ ರವಿಚಂದ್ರನ್​ ಅವರು ಈಗತಾನೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಅವರು ವೆಬ್​ ಸರಣಿ ಲೋಕಕ್ಕೂ ಎಂಟ್ರಿ ನೀಡಿದ್ದಾರೆ. ‘ಲವ್​ ಯೂ ಅಭಿ’ ವೆಬ್​ ಸಿರೀಸ್​ನಲ್ಲಿ ಅವರದ್ದೇ ಮುಖ್ಯ ಪಾತ್ರ. ಶಿವ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ನೆಗೆಟಿವ್​ ಶೇಡ್​ ಕೂಡ ಇದೆ. ಶಿವ ಕೆಟ್ಟವನೋ ಒಳ್ಳೆಯವನೋ ಎಂಬ ಗೊಂದಲ ಪ್ರೇಕ್ಷಕರ ಮನದಲ್ಲಿ ಮೂಡುತ್ತದೆ. ಆ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ ಪೂರ್ತಿ ಎಪಿಸೋಡ್​ ನೋಡಬೇಕು. ಸಿಕ್ಕ ಅವಕಾಶವನ್ನು ವಿಕ್ರಮ್​ ಅವರು ಚೆನ್ನಾಗಿ ಬಳಸಿಕೊಂಡಿದ್ದಾರೆ. ನಟನೆಯಲ್ಲಿ ಅವರಿನ್ನೂ ಮಾಗಬೇಕಿದೆ.

ಇದನ್ನೂ ಓದಿ: ರವಿಚಂದ್ರನ್​ ಪುತ್ರರ ಬಗ್ಗೆ ಕಾಕ್ರೋಚ್​ ಸುಧಿ ವಿಶೇಷ ಮಾತು; ‘ಕನಸುಗಾರ’ ನೆನಪಿಸಿದ ಮನು-ವಿಕ್ರಮ್​

ಗಂಡನನ್ನು ಕಳೆದುಕೊಂಡ ಅಭಿ ಎಂಬ ಯುವತಿಯ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಶಿವನ ಜೊತೆ ಅಭಿ ಮರು ಮದುವೆ ಆಗುತ್ತದೆ. ಆದರೆ ಅಭಿಯ ಮೊದಲ ಗಂಡ ಸತ್ತಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವ ಆಗುತ್ತದೆ. ಅಲ್ಲಿಂದಲೇ ಶುರುವಾಗುವುದು ಇದರ ಅಸಲಿ ಕಥೆ. ಆ ಸಾವು ಹೇಗೆ ನಡೆಯಿತು? ಅದರ ಹಿಂದಿನ ರೂವಾರಿ ಯಾರು ಎಂಬ ಕೌತುಕದ ಪ್ರಶ್ನೆಯೊಂದಿಗೆ ಸಾಗುತ್ತದೆ ‘ಲವ್​ ಯೂ ಅಭಿ’ ನಿರೂಪಣೆ. ಅದಿತಿ ಪ್ರಭುದೇವ ಅವರ ನಟನೆ ಗಮನ ಸೆಳೆಯುತ್ತದೆ.

ಈ ವೆಬ್​ ಸರಣಿಯಲ್ಲಿ ಅನೇಕ ಜನಪ್ರಿಯ ಕಲಾವಿದರು ಇದ್ದಾರೆ. ಪೊಲೀಸ್​ ಅಧಿಕಾರಿಯಾಗಿ ಪಿ. ರವಿಶಂಕರ್​ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ವಿನಯಾ ಪ್ರಸಾದ್​, ಸುಂದರ್​ ರಾಜ್​, ಅಂಬಿಕಾ, ಶ್ರೀನಾಥ್​, ಕೆಂಪೇಗೌಡ, ರಚಿತಾ ಮಹಾಲಕ್ಷ್ಮಿ, ಶ್ರೀನಿವಾಸ ಮೂರ್ತಿ ಮುಂತಾದವರು ಅಭಿನಯಿಸಿದ್ದಾರೆ. ಇಂಥ ಪ್ರತಿಭಾವಂತ ಕಲಾವಿದರಿಂದಾಗಿ ‘ಲವ್​ ಯೂ ಅಭಿ’ ಮೆರುಗು ಹೆಚ್ಚಿದೆ.

ಇದನ್ನೂ ಓದಿ: ‘ಹುಡುಗಿಯರನ್ನು ಮುಟ್ಟದೇ ನಿಂಗೆ ಸಿನಿಮಾ ಮಾಡೋಕೆ ಬರಲ್ವಾ?’: ರವಿಚಂದ್ರನ್​ಗೆ ನೇರ ಪ್ರಶ್ನೆ ಕೇಳಿದ್ದ ಪತ್ನಿ

ಈ ಕಥಾಹಂದರದಲ್ಲಿ ಒಂದಷ್ಟು ಕೊರತೆ ಕೂಡ ಕಾಣುತ್ತದೆ. ಅನೇಕ ಕಡೆಗಳಲ್ಲಿ ಇದು ಟಿವಿ ಸೀರಿಯಲ್​ ರೀತಿ ಫೀಲ್​ ನೀಡುತ್ತದೆ. ಪಾತ್ರಗಳ ಸಂಭಾಷಣೆ, ಎದುರಾಗುವ ಸನ್ನಿವೇಶಗಳು, ಇಡೀ ಕಥೆಯನ್ನು ಕಟ್ಟಿಕೊಟ್ಟ ರೀತಿ ಗಮನಿಸಿದಾಗ ಕಿರಿತೆರೆ ಧಾರಾವಾಹಿಗಳ ಛಾಯೆ ಕಾಣಿಸುತ್ತದೆ. ಕಥೆಗೆ ಬೇರೆ ಫ್ಲೇವರ್​ ನೀಡುವಲ್ಲಿ ನಿರ್ದೇಶಕರು ಗಮನ ಹರಿಸಬಹುದಿತ್ತು. ಇನ್ನಷ್ಟು ವಿವರಗಳ ಅಗತ್ಯವಿತ್ತು ಎನಿಸುತ್ತದೆ.

ಇದೊಂದು ಶ್ರೀಮಂತ ಕುಟುಂಬದ ಕಥೆ. ಹಾಗಾಗಿ ಐಷಾರಾಮಿ ಬಂಗಲೆ, ಕಾರು ಮುಂತಾದನ್ನು ತೋರಿಸುವುದರತ್ತ ಹೆಚ್ಚು ಗಮನ ಹರಿಸಲಾಗಿದೆ. ಮೇಕಿಂಗ್​ ವಿಚಾರದಲ್ಲಿ ಎಲ್ಲಿಯೂ ರಾಜಿ ಆಗಿಲ್ಲ. ಆದರೆ ಸ್ಕ್ರಿಪ್ಟ್​ನಲ್ಲಿ ಒಂದಷ್ಟು ಹೊಸತನವನ್ನು ತುಂಬಿದ್ದರೆ ‘ಲವ್​ ಯೂ ಅಭಿ’ ಹೆಚ್ಚು ಆಪ್ತವಾಗುತ್ತಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.