ಸಿನಿಮಾ: ಸ್ಕ್ಯಾಮ್ 1770. ನಿರ್ಮಾಣ: ದೇವರಾಜ್ ಆರ್. ನಿರ್ದೇಶನ: ವಿಕಾಸ್ ಪುಷ್ಪಗಿರಿ. ಪಾತ್ರವರ್ಗ: ರಂಜನ್, ಬಿ. ಸುರೇಶ, ಶ್ರೀನಿವಾಸ್ ಪ್ರಭು, ನಿಶ್ಚಿತಾ, ರಾಘು ಶಿವಮೊಗ್ಗ, ಹರಿಣಿ, ಉಗ್ರಂ ಸಂದೀಪ್ ಮುಂತಾದವರು. ಸ್ಟಾರ್ 3/5
ನಟ ರಂಜನ್ ಅವರು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಸಿನಿಮಾದಲ್ಲಿ ದಡ್ಡ ಪ್ರವೀಣನಾಗಿ ನಟಿಸಿದ್ದರು. ಆ ಸಿನಿಮಾದಲ್ಲಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೇಳಲಾಗಿತ್ತು. ಈಗ ರಂಜನ್ ಅವರು ‘ಸ್ಕ್ಯಾಮ್ 1770’ (Scam 1770) ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲೂ ಶಿಕ್ಷಣದ ಕ್ಷೇತ್ರದ ಬಗ್ಗೆಯೇ ತೋರಿಸಲಾಗಿದೆ. ನಿರ್ದಿಷ್ಟವಾಗಿ ವೈದ್ಯಕೀಯ ಕಾಲೇಜುಗಳ ಸೀಟ್ (Medical Seat) ಹಂಚಿಕೆಯ ಹಿಂದೆ ಇರುವ ಕರಾಳ ವಿಚಾರಗಳನ್ನು ಬಿಚ್ಚಿಡಲಾಗಿದೆ. ಈ ಸಿನಿಮಾಗೆ ವಿಕಾಶ್ ಪುಷ್ಪಗಿರಿ ಅವರು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಆ್ಯಕ್ಟ್ 1978’, ‘19.21.21’ ರೀತಿಯ ಸಾಮಾಜಿಕ ಕಳಕಳಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ದೇವರಾಜ್ ಆರ್. ಅವರೇ ಈಗ ‘ಸ್ಕ್ಯಾಮ್ 1770’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಬಾರಿ ಕೂಡ ಅವರು ಒಂದು ಸಮಾಜಮುಖಿ ಕಥಾಹಂದರವನ್ನೇ ಜನರ ಎದುರು ತಂದಿದ್ದಾರೆ.
ಮಧ್ಯಮವರ್ಗದ ಹುಡುಗನೊಬ್ಬ ಡಾಕ್ಟರ್ ಆಗಬೇಕು ಎಂದು ಕನಸು ಕಾಣುತ್ತಾನೆ. ಅದಕ್ಕಾಗಿ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಳ್ಳುತ್ತಾನೆ. ಆದರೆ ಇನ್ನೇನು ಆತನಿಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗಬೇಕು ಎಂಬಷ್ಟರಲ್ಲಿ ಕನಸು ಭಗ್ನವಾಗುತ್ತದೆ. ಕಾರಣಾಂತರಗಳಿಂದ ಮೆಡಿಕಲ್ ಸೀಟ್ ಕೈ ತಪ್ಪುತ್ತದೆ. ಅದರ ಹಿಂದಿರುವ ಕಾರಣ ಏನು ಅಂತ ಹುಡುಕಿಕೊಂಡ ಹೊರಟ ಆತನಿಗೆ ದೊಡ್ಡ ಭ್ರಷ್ಟಾಚಾರದ ಜಾಲ ಕಾಣಿಸುತ್ತದೆ. ಅದರಲ್ಲಿ ವಿದ್ಯಾರ್ಥಿಗಳು, ಪೋಷಕರು, ಕಾಲೇಜು ಆಡಳಿತ ಮಂಡಳಿ, ಪೊಲೀಸರು, ವಕೀಲರು, ಅಧಿಕಾರಿಗಳು.. ಹೀಗೆ ಅನೇಕರು ಭಾಗಿ ಆಗಿರುತ್ತಾರೆ. ಮಡಿಕಲ್ ಕಾಲೇಜು ಸೀಟ್ ಮಾಫಿಯಾ ಎಷ್ಟು ದೊಡ್ಡದು ಎಂಬುದನ್ನು ಈ ಸಿನಿಮಾ ತೆರೆದಿಡುತ್ತದೆ.
ಚಿತ್ರತಂಡವೇ ಹೇಳಿಕೊಂಡಿರುವಂತೆ ಇದು ಪೋಷಕರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಮಾಡಿದ ವಿಶೇಷ ಸಿನಿಮಾ. ಹಾಗಂತ ಇದನ್ನು ತುಂಬ ಬೋರಿಂಗ್ ಎನಿಸುವ ರೀತಿಯಲ್ಲಿ ಕಟ್ಟಿಕೊಟ್ಟಿಲ್ಲ. ಬದಲಿಗೆ ಒಂದು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ನಿರ್ದೇಶಕರು ಕಥೆ ಹೇಳಿದ್ದಾರೆ. ಒಂದಷ್ಟು ಟ್ವಿಸ್ಟ್ಗಳ ಮೂಲಕ ಅಚ್ಚರಿ ಮೂಡಿಸುತ್ತಾರೆ. ಜೊತೆಗೆ ಹಾಸ್ಯವನ್ನೂ ಸೇರಿಸಿದ್ದಾರೆ. ಮೊದಲಾರ್ಧ ಲವಲವಿಕೆಯಿಂದ ಸಾಗುತ್ತದೆ. ದ್ವಿತೀಯಾರ್ಧ ಗಂಭೀರವಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆ ಎಷ್ಟು ಭ್ರಷ್ಟವಾಗಿದೆ ಎಂಬುದನ್ನು ತಿಳಿಸುವುದು ಹಾಗೂ ಆ ಮೂಲಕ ಪೋಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದೇ ‘ಸ್ಕ್ಯಾಮ್ 1770’ ಸಿನಿಮಾದ ಮುಖ್ಯ ಆಶಯ.
ಇದನ್ನೂ ಓದಿ: ‘ಅವತಾರ ಪುರುಷ 2’ ವಿಮರ್ಶೆ: ಓವರ್ ಆ್ಯಕ್ಟಿಂಗ್ ಅನಿಲನ ವಾಮಾಚಾರದ ಅಧ್ಯಾಯ
ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕಹಾನಿಗೆ ಒಂದಷ್ಟು ಸಿನಿಮೀಯ ಅಂಶಗಳನ್ನು ಸೇರಿಸಿ ‘ಸ್ಕ್ಯಾಮ್ 1770’ ಚಿತ್ರವನ್ನು ಮಾಡಲಾಗಿದೆ. ಹಣ ಇದೆ ಎಂದಮಾತ್ರಕ್ಕೆ ತಮ್ಮ ಮಕ್ಕಳಿಗೆ ಮೆಡಿಕಲ್ ಸೀಟ್ ಕೊಡಿಸಲು ಮುಂದಾಗುವ ಪೋಷಕರಿಗೆ ಈ ಸಿನಿಮಾದಲ್ಲಿ ಮುಖ್ಯವಾದ ಸಂದೇಶ ನೀಡಲಾಗಿದೆ. ತಮ್ಮ ಮಕ್ಕಳ ಭವಿಷ್ಯ ಕಟ್ಟಲು ಪ್ರಯತ್ನಿಸುವ ತಂದೆ-ತಾಯಿ ಇನ್ನೊಬ್ಬರ ಮಕ್ಕಳ ಜೀವನವನ್ನು ಹೇಗೆ ಹಾಳು ಮಾಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ವಿವರಿಸಲಾಗಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸೀಟು ಹಂಚಿಕೆಯ ಹಿಂದಿರುವ ಭ್ರಷ್ಟಾಚಾರವನ್ನು ತಡೆಯುವುದು ಪೋಷಕರು ಮತ್ತು ವಿದ್ಯಾರ್ಥಿಗಳ ಕೈಯಲ್ಲೇ ಇದೆ ಎಂಬುದನ್ನು ‘ಸ್ಕ್ಯಾಮ್ 1770’ ಸಿನಿಮಾ ಸ್ಪಷ್ಟವಾಗಿ ಹೇಳುತ್ತದೆ.
ಮೇಕಿಂಗ್ ದೃಷ್ಟಿಯಿಂದ ‘ಸ್ಕ್ಯಾಮ್ 1770’ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ. ಮೊದಲ ಹಾಡು ಚಿತ್ರಕ್ಕೇನೂ ಪೂರಕವಾಗಿಲ್ಲ. ಕೆಲವು ದೃಶ್ಯಗಳಲ್ಲಿ ಲಾಜಿಕ್ ಹುಡುಕುವುದು ಕಷ್ಟ. ಕಥೆಯ ಅಂತ್ಯ ಸ್ವಲ್ಪ ಬೇರೆ ರೀತಿಯಲ್ಲಿದೆ. ಹೀರೋ ಮೂಲಕ ಎಲ್ಲ ಸಮಸ್ಯೆಗೂ ಪರಿಹಾರ ಕೊಡಿಸುವ ಪ್ರಯತ್ನ ಈ ಚಿತ್ರದಲ್ಲಿ ಆಗಿಲ್ಲ. ಬದಲಿಗೆ, ಪ್ರೇಕ್ಷಕರಿಗೇ ಆ ಜವಾಬ್ದಾರಿಯನ್ನು ದಾಟಿಸುವ ಮೂಲಕ ಸಿನಿಮಾವನ್ನು ನಿರ್ದೇಶಕರು ಪೂರ್ಣಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.