‘ಅವತಾರ ಪುರುಷ 2’ ವಿಮರ್ಶೆ: ಓವರ್ ಆ್ಯಕ್ಟಿಂಗ್ ಅನಿಲನ ವಾಮಾಚಾರದ ಅಧ್ಯಾಯ
ಮೊದಲ ಪಾರ್ಟ್‌ನಲ್ಲಿ ಓವರ್ ಆ್ಯಕ್ಟಿಂಗ್ ಅನಿಲನಾಗಿ ಕಾಣಿಸಿಕೊಂಡಿದ್ದ ಶರಣ್ ಅವರು ‘ಅವತಾರ ಪುರುಷ ಪಾರ್ಟ್2’ ಸಿನಿಮಾದಲ್ಲಿ ಮಂತ್ರವಾದಿಯಾಗಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಆಶಿಕಾ ರಂಗನಾಥ್ ಅವರ ಪಾತ್ರಕ್ಕೆ ಈ ಚಿತ್ರದಲ್ಲಿ ಹೆಚ್ಚಿನ ಸ್ಕೋಪ್ ಇಲ್ಲ. ಅಶುತೋಷ್ ರಾಣಾ, ಬಾಲಾಜಿ ಮನೋಹರ್ ಅವರು ವಾಮಾಚಾರಿಗಳ ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಚಿತ್ರ: ಅವತಾರ ಪುರುಷ 2. ನಿರ್ಮಾಣ: ಪುಷ್ಕರ ಮಲ್ಲಿಕಾರ್ಜುನಯ್ಯ. ನಿರ್ದೇಶನ: ಸಿಂಪಲ್ ಸುನಿ. ಪಾತ್ರವರ್ಗ: ಶರಣ್, ಆಶಿಕಾ ರಂಗನಾಥ್, ಸಾಯಿಕುಮಾರ್, ಭವ್ಯ, ಸುಧಾರಾಣಿ, ಅಶುತೋಷ್ ರಾಣಾ, ಬಾಲಾಜಿ ಮನೋಹರ್, ಸಾಧುಕೋಕಿಲ ಮುಂತಾದವರು. ಸ್ಟಾರ್: 2.5/5
2022ರಲ್ಲಿ ‘ಅವತಾರ ಪುರುಷ ಪಾರ್ಟ್ 1’ ಸಿನಿಮಾ ತೆರೆಕಂಡಿತ್ತು. ವಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಆ ಚಿತ್ರದ ಎರಡನೇ ಪಾರ್ಟ್ (Avatara Purusha part 2) ಈಗ ಬಿಡುಗಡೆ ಆಗಿದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳಿಂದ ಖ್ಯಾತಿ ಪಡೆದ ಸಿಂಪಲ್ ಸುನಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮೊದಲ ಪಾರ್ಟ್‌ನಲ್ಲಿ ಅರ್ಧ ಹೇಳಿದ್ದ ಕಥೆಯನ್ನು ಅವರು ಎರಡನೇ ಪಾರ್ಟ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ನಟ ಶರಣ್ (Sharan) ಅವರ ವೃತ್ತಿ ಜೀವನದಲ್ಲಿ ಇದು ಡಿಫರೆಂಟ್ ಸಿನಿಮಾ. ‘ಅವತಾರ ಪುರುಷ 2’ ಸಿನಿಮಾದ ವಿಮರ್ಶೆ (Avatara Purusha 2 Review) ಇಲ್ಲಿದೆ..
‘ಅವತಾರ ಪುರುಷ’ ಮೊದಲ ಪಾರ್ಟ್ ನೋಡದೇ ಇದ್ದರೂ ಕೂಡ ಎರಡನೇ ಪಾರ್ಟ್ ಅರ್ಥ ಆಗುತ್ತದೆ. ಯಾಕೆಂದರೆ ಮೊದಲ ಭಾಗದಲ್ಲಿ ಏನಾಗಿತ್ತು ಎಂಬುದನ್ನು ಪ್ರೇಕ್ಷಕರಿಗೆ ಮತ್ತೊಮ್ಮೆ ನೆನಪಿಸುವ ರೀತಿಯಲ್ಲಿ ದೃಶ್ಯಗಳನ್ನು ಹೆಣೆಯಲಾಗಿದೆ. ಮೊದಲ ಪಾರ್ಟ್‌ನಲ್ಲಿ ಓವರ್ ಆ್ಯಕ್ಟಿಂಗ್ ಅನಿಲನಾಗಿ ಕಾಣಿಸಿಕೊಂಡಿದ್ದ ಶರಣ್ ಅವರು ಎರಡನೇ ಪಾರ್ಟ್‌ನಲ್ಲಿ ಮಂತ್ರವಾದಿಯಾಗಿ ಪ್ರೇಕ್ಷಕರ ಎದುರು ಬರುತ್ತಾರೆ. ಆ ಮೂಲಕ ಅಭಿಮಾನಿಗಳಿಗೆ ಅವರು ಡಿಫರೆಂಟ್ ಫೀಲ್ ನೀಡಿದ್ದಾರೆ.
ಶರಣ್ ಸಿನಿಮಾ ಎಂದರೆ ಜನರು ಕಾಮಿಡಿ ನಿರೀಕ್ಷಿಸುತ್ತಾರೆ. ಅದರ ಕೊರತೆ ‘ಅವತಾರ ಪುರುಷ 2’ ಸಿನಿಮಾದಲ್ಲಿ ಕಾಣಿಸುತ್ತದೆ. ಕೆಲವೇ ದೃಶ್ಯಗಳು ಪ್ರೇಕ್ಷಕರನ್ನು ನಗಿಸುತ್ತವೆ. ಇನ್ನುಳಿದ ಸನ್ನಿವೇಶಗಳೆಲ್ಲ ವಾಮಾಚಾರಕ್ಕೆ ಸೀಮಿತ. ಸಾಧುಕೋಕಿಲ ಅವರಂತಹ ಅನುಭವಿ ಹಾಸ್ಯ ಕಲಾವಿದ ಈ ಸಿನಿಮಾದಲ್ಲಿ ಇದ್ದರೂ ಕೂಡ ನಿರೀಕ್ಷಿತ ಮಟ್ಟದಲ್ಲಿ ನಗು ಉಕ್ಕುವುದಿಲ್ಲ. ಸೂಪರ್ ನ್ಯಾಚುರಲ್ ಅಂಶಗಳಿಗೆ ಹೆಚ್ಚು ಒತ್ತು ನೀಡಿರುವ ನಿರ್ದೇಶಕರು ಕಾಮಿಡಿ ಬಗ್ಗೆ ಜಾಸ್ತಿ ಗಮನ ಹರಿಸಿಲ್ಲ.
ಇದನ್ನೂ ಓದಿ: Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ
ರಾಮಾಯಣದ ಬಾಲಕಾಂಡದಲ್ಲಿ ಬರುವ ತ್ರಿಶಂಕು ಪಾತ್ರದ ಎಳೆಯನ್ನೇ ಇಟ್ಟುಕೊಂಡು ‘ಅವತಾರ ಪುರುಷ’ ಕಥೆ ಹೆಣೆಯಲಾಗಿದೆ. ವಾಮಾಚಾರದ ಮಾರ್ಗದಿಂದ ಸ್ವರ್ಗಕ್ಕೆ ಹೋಗಲು ಯತ್ನಿಸುವ ಮಂತ್ರವಾದಿಗಳ ಪಾತ್ರಗಳ ಮೂಲಕ ಸುನಿ ಈ ಕಥೆ ಹೇಳಿದ್ದಾರೆ. ಇದು ಸಂಪೂರ್ಣ ಕಾಲ್ಪನಿಕ ಲೋಕ. ಸುನಿ ಏನು ಹೇಳಿದರೂ, ಏನು ತೋರಿಸಿದರು ಪ್ರೇಕ್ಷಕರು ನಂಬಬೇಕು. ಲಾಜಿಕ್ ಹುಡುಕುವಂತೆಯೇ ಇಲ್ಲ. ಇದು ಹಾಗಲ್ಲ ಹೀಗೆ ಅಂತ ವಾದ ಮಾಡಲು ಇದು ಪುರಾಣದ ಕಥೆಯಲ್ಲ. ಸಂಪೂರ್ಣ ಫ್ಯಾಂಟಸಿ ಭರಿತ ಈ ಕಥೆಯಲ್ಲಿ ನಿರ್ದೇಶಕರ ಕಲ್ಪನೆಗೆ ಹೇರಳ ಅವಕಾಶ ಇದೆ. ಆದರೂ ಕೂಡ ಆ ಕಲ್ಪನಾ ಲೋಕದಲ್ಲಿ ವಾವ್ ಎನ್ನುವಂಥದ್ದು ಹೆಚ್ಚೇನೂ ಕಾಣಿಸದು. ಹಾರರ್ ಅಂಶವನ್ನು ಬಯಸುವ ಪ್ರೇಕ್ಷಕರು ಕೂಡ ‘ಅವತಾರ ಪುರುಷ 2’ ಚಿತ್ರ ನೋಡಿ ಭಯಬೀಳುವ ಸಾಧ್ಯತೆ ಕಡಿಮೆ.
ಇದನ್ನೂ ಓದಿ: Blink Movie Review: ಟೈಮ್ ಟ್ರಾವೆಲ್ ಮೂಲಕ ಸ್ಯಾಂಡಲ್ವುಡ್ಗೆ ಬಂದ ಈಡಿಪಸ್
ನಟಿ ಆಶಿಕಾ ರಂಗನಾಥ್ ಅವರ ಪಾತ್ರಕ್ಕೆ ಈ ಸಿನಿಮಾದಲ್ಲಿ ಹೆಚ್ಚಿನ ಸ್ಕೋಪ್ ಇಲ್ಲ. ಸುಧಾರಾಣಿ, ಭವ್ಯ ಕೆಲವೇ ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ಸಾಯಿಕುಮಾರ್ ಪಾತ್ರಕ್ಕೆ ಟ್ವಿಸ್ಟ್ ಇದ್ದರೂ ಜಾಸ್ತಿ ಅಚ್ಚರಿ ಮೂಡಿಸುವುದಿಲ್ಲ. ಶ್ರೀನಗರ ಕಿಟ್ಟಿ ಅವರದ್ದು ಡೈಲಾಗ್ ಇತಮಿತವಾಗಿರುವ ಅತಿಥಿ ಪಾತ್ರ. ಬಾಲಾಜಿ ಮನೋಹರ್, ಅಶುತೋಷ್ ರಾಣಾ ಅವರು ವಾಮಾಚಾರಿಗಳ ಪಾತ್ರದಲ್ಲಿ ಅಬ್ಬರಿಸುತ್ತಾರೆ.
ಮೇಕಿಂಗ್ ಗುಣಮಟ್ಟದಲ್ಲಿ ನಿರ್ಮಾಪಕರು ರಾಜಿ ಆಗಿಲ್ಲ. ಛಾಯಾಗ್ರಹಣ, ಹಿನ್ನೆಲೆ ಸಂಗೀತ ಚೆನ್ನಾಗಿದೆ. ತಾಯಿ ಸೆಂಟಿಮೆಂಟ್, ಲವ್ ಸ್ಟೋರಿ, ಫ್ಯಾಮಿಲಿ ಡ್ರಾಮಾ ಎಲ್ಲವೂ ಈ ಸಿನಿಮಾದಲ್ಲಿದ್ದರೂ ಪ್ರೇಕ್ಷಕರಿಗೆ ಕನೆಕ್ಟ್ ಆಗುವಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ ಎನಿಸುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಕೆಲವು ಪ್ರಶ್ನೆಗಳನ್ನು ಪ್ರೇಕ್ಷಕರ ಮುಂದಿಡುವ ಮೂಲಕ ‘ಪಾರ್ಟ್ 3’ ಸುಳಿವು ನೀಡಲಾಗಿದೆ. ಸದ್ಯಕ್ಕಂತೂ ಕಥೆ ಪೂರ್ಣಗೊಂಡಿದೆ. ಅದು ಹೇಗೆ ಎಂಬುದನ್ನು ತಿಳಿಯುವ ಕುತೂಹಲ ಇದ್ದವರು ‘ಅವತಾರ ಪುರುಷ 2’ ಸಿನಿಮಾ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:24 am, Fri, 5 April 24