Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ
‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ಮ್ಯೂಸಿಕಲ್ ಲವ್ಸ್ಟೋರಿ ಇದೆ. ನಿರ್ದೇಶಕ ಸಿಂಪಲ್ ಸುನಿ ಅವರು ಎಂದಿನಂತೆ ಲವಲವಿಕೆಯ ಶೈಲಿಯಲ್ಲಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ನಮ್ಮ ನಡುವಿನ ಒಬ್ಬ ಹುಡುಗ ಎಂಬಂತಹ ಫೀಲ್ ಕೊಡುವ ರೀತಿಯಲ್ಲಿ ವಿನಯ್ ರಾಜ್ಕುಮಾರ್ ಅವರ ಪಾತ್ರ ಮೂಡಿಬಂದಿದೆ. ಒಟ್ಟಾರೆ ವಿಮರ್ಶೆ ಇಲ್ಲಿದೆ..
ಸಿನಿಮಾ: ಒಂದು ಸರಳ ಪ್ರೇಮಕಥೆ. ನಿರ್ಮಾಣ: ಮೈಸೂರು ರಮೇಶ್. ನಿರ್ದೇಶನ: ಸಿಂಪಲ್ ಸುನಿ. ಪಾತ್ರವರ್ಗ: ವಿನಯ್ ರಾಜ್ಕುಮಾರ್, ಮಲ್ಲಿಕಾ ಸಿಂಗ್, ಸ್ವಾದಿಷ್ಟಾ, ರಾಜೇಶ್ ನಟರಂಗ, ಸಾಧು ಕೋಕಿಲ, ಕಾರ್ತಿಕ್ ಮಹೇಶ್ ಮುಂತಾದವರು. ಸ್ಟಾರ್: 3.5/5
ನಿರ್ದೇಶಕ ಸಿಂಪಲ್ ಸುನಿ (Simple Suni) ಅವರು ಮಾಡುವ ಸಿನಿಮಾಗಳಲ್ಲಿ ಒಂದು ನವಿರಾದ ಪ್ರೇಮಕಥೆ ಇರುತ್ತದೆ. ಅದರಲ್ಲಿ ತಿಳಿಯಾದ ಹಾಸ್ಯವೂ ಬೆರೆತಿರುತ್ತದೆ. ಚಿನಕುರುಳಿ ರೀತಿಯ ಡೈಲಾಗ್ಗಳು ಮನರಂಜನೆ ನೀಡುತ್ತವೆ. ಅಂಥ ಅಂಶಗಳನ್ನು ಅವರ ಸಿನಿಮಾಗಳಿಂದ ಪ್ರೇಕ್ಷಕರು ನಿರೀಕ್ಷಿಸುತ್ತಾರೆ. ಆ ನಿರೀಕ್ಷೆಗೆ ತಕ್ಕಂತೆಯೇ ‘ಒಂದು ಸರಳ ಪ್ರೇಮಕಥೆ’ (Ondu Sarala Prema Kathe) ಸಿನಿಮಾ ಮೂಡಿಬಂದಿದೆ. ಈ ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ (Vinay Rajkumar), ಸ್ವಾದಿಷ್ಟಾ, ಮಲ್ಲಿಕಾ ಸಿಂಗ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಂದು ಅತಿಥಿ ಪಾತ್ರದಲ್ಲಿ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಕೂಡ ಅಭಿನಯಿಸಿದ್ದಾರೆ. ಸಾಧು ಕೋಕಿಲ, ರಾಜೇಶ್ ನಟರಂಗ ಅವರಂತಹ ಪ್ರತಿಭಾವಂತ ಹಿರಿಯ ಕಲಾವಿದರು ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಅಂದ ಹೆಚ್ಚಿಸಿದ್ದಾರೆ.
‘ಒಂದು ಸರಳ ಪ್ರೇಮಕಥೆ’ ಎಂದು ಶೀರ್ಷಿಕೆಯನ್ನು ‘ಒಂದು ವಿರಳ ಪ್ರೇಮಕಥೆ’ ಎಂದು ಕಾಣುವ ರೀತಿಯಲ್ಲೂ ಪೋಸ್ಟರ್ ವಿನ್ಯಾಸ ಮಾಡಲಾಗಿದೆ. ಹೆಸರಿಗೆ ತಕ್ಕಂತೆಯೇ ಈ ಸಿನಿಮಾ ಮೂಡಿಬಂದಿದೆ ಎನ್ನಬಹುದು. ಮೇಲ್ನೋಟಕ್ಕೆ ನೋಡಿದರೆ ಇದು ಸರಳವಾದ ಪ್ರೇಮಕಥೆ. ಆದರೆ ಅದನ್ನು ಕಟ್ಟಿಕೊಟ್ಟ ರೀತಿ ಗಮನಿಸಿದರೆ ಇದು ಖಂಡಿತವಾಗಿಯೂ ವಿರಳವಾದ ಪ್ರೇಮಕಥೆ. ಇದರಲ್ಲಿ ಮ್ಯೂಸಿಕಲ್ ಗುಣ ಇದೆ. ಸಂಗೀತದ ಹಿನ್ನೆಲೆಯಲ್ಲಿ ಇಡೀ ಸಿನಿಮಾದ ಕಥೆಯನ್ನು ಹೇಳಲಾಗಿದೆ. ಆ ನಿಟ್ಟಿನಲ್ಲಿ ನಿರ್ದೇಶಕ ಸಿಂಪಲ್ ಸುನಿ ಅವರ ಖಾತೆಯಲ್ಲಿ ಇದೊಂದು ಡಿಫರೆಂಟ್ ಪ್ರಯತ್ನ.
ವಿನಯ್ ರಾಜ್ಕುಮಾರ್ ಅವರು ಈ ಸಿನಿಮಾದಲ್ಲಿ ಅತಿಶಯ್ ಎಂಬ ಪಾತ್ರ ಮಾಡಿದ್ದಾರೆ. ಸಂಗೀತದಲ್ಲಿ ಅಪಾರ ಆಸಕ್ತಿ ಇರುವ ಯುವಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ತಾನೊಬ್ಬ ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಮತ್ತು ತನ್ನ ಹೃದಯದಲ್ಲಿ ಇರುವ ಸಂಗೀತಕ್ಕೆ ಹೊಂದಿಕೊಳ್ಳುವಂತಹ ಧ್ವನಿ ಇರುವ ಹುಡುಗಿಯನ್ನು ಮದುವೆ ಆಗಬೇಕು ಎಂಬುದು ಅತಿಶಯ್ ಆಸೆ. ಎಲ್ಲೋ ಕೇಳಿದ ಒಂದು ಹುಡುಗಿಯ ಧ್ವನಿಯ ಜಾಡು ಹಿಡಿದು ಆತ ಹೊರಡುತ್ತಾನೆ. ಆದರೆ ಆಕೆಯ ಮುಖ ಕಾಣಿಸುವುದಿಲ್ಲ. ಧ್ವನಿಯನ್ನೇ ಪ್ರೀತಿಸುವ ಅವನಿಗೆ ಹಲವು ಅಚ್ಚರಿಗಳು ಎದುರಾಗುತ್ತವೆ. ಆತ ಪ್ರೀತಿಸಿದ ಧ್ವನಿ ಯಾವ ಹುಡುಗಿಯದ್ದು ಎಂಬುದು ತಿಳಿಯಬೇಕಿದ್ದರೆ ಕ್ಲೈಮ್ಯಾಕ್ಸ್ ತನಕ ಕಾಯಬೇಕು.
ಇದನ್ನೂ ಓದಿ: Captain Miller Review: ಮದ್ದು-ಗುಂಡುಗಳ ಸದ್ದಿನಲ್ಲಿ ಮಸುಕಾಯ್ತಾ ‘ಕ್ಯಾಪ್ಟನ್ ಮಿಲ್ಲರ್’ ಆಶಯ?
ಹಿಂದಿ ಕಿರುತೆರೆಯಲ್ಲಿ ಫೇಮಸ್ ಆದವರು ಮಲ್ಲಿಕಾ ಸಿಂಗ್. ‘ರಾಧಾಕೃಷ್ಣ’ ಸೀರಿಯಲ್ನಲ್ಲಿ ರಾಧೆಯ ಪಾತ್ರ ಮಾಡಿದ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ಅವರೊಂದು ಪಾತ್ರ ಮಾಡಿದ್ದಾರೆ. ಮಧುರಾ ಎಂಬ ಗಾಯಕಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಈ ಸಿನಿಮಾದಲ್ಲಿ ಹೆಚ್ಚು ತೂಕ ಇದೆ. ಅದೇ ರೀತಿ, ಮತ್ತೋರ್ವ ನಟಿ ಸ್ವಾದಿಷ್ಟ ಪಾತ್ರ ಕೂಡ ಹೈಲೈಟ್ ಆಗಿದೆ. ತ್ರಿಕೋನ ಪ್ರೇಮಕಥೆಯಲ್ಲಿ ಇಬ್ಬರು ನಾಯಕಿಯರು ಹಾಗೂ ಕಥಾನಾಯಕನ ಪಾತ್ರಗಳಿಗೆ ಸೂಕ್ತವಾದ ಸ್ಕ್ರೀನ್ ಸ್ಪೇಸ್ ನೀಡಲಾಗಿದೆ. ಸೀರಿಯಲ್ನಲ್ಲಿ ರಾಧೆಯಾಗಿ ಇಷ್ಟವಾಗಿದ್ದ ಮಲ್ಲಿಕಾ ಸಿಂಗ್ ಅವರು ಈ ಸಿನಿಮಾದಲ್ಲಿ ಸಿಂಪಲ್ ಹುಡುಗಿಯಾಗಿ ಇಷ್ಟವಾಗುತ್ತಾರೆ. ಸೂಕ್ಷ್ಮ ಅಭಿನಯದ ಮೂಲಕ ನಟಿ ಸ್ವಾದಿಷ್ಟ ಕೂಡ ಗಮನ ಸೆಳೆಯುತ್ತಾರೆ.
ಇದನ್ನೂ ಓದಿ: Kaatera Movie Review: ಸಂಘರ್ಷದ ಕಥೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವ ‘ಕಾಟೇರ’
ಸ್ಟಾರ್ ನಟನ ಕುಟುಂಬದಿಂದ ಬಂದ ಹೀರೋ ಎಂಬ ಇಮೇಜ್ ಬದಿಗಿಟ್ಟು ವಿನಯ್ ರಾಜ್ಕುಮಾರ್ ಅವರು ಮಧ್ಯಮವರ್ಗದ ಸಾಮಾನ್ಯ ಹುಡುಗನಾಗಿ ‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ನಟಿಸಿದ್ದಾರೆ. ನಮ್ಮ ನಡುವಿನ ಒಬ್ಬ ಹುಡುಗ ಎಂಬಂತಹ ಫೀಲ್ ಕೊಡುವ ರೀತಿಯಲ್ಲಿ ಅವರ ಪಾತ್ರ ಮೂಡಿಬಂದಿದೆ. ಅನಗತ್ಯ ಹೀರೋಯಿಸಂ ಈ ಸಿನಿಮಾದಲ್ಲಿ ಇಲ್ಲ. ಅಷ್ಟರಮಟ್ಟಿಗೆ, ಪಾತ್ರಕ್ಕೆ, ಕಥೆಗೆ ನಿರ್ದೇಶಕರು ಮಹತ್ವ ನೀಡಿದ್ದಾರೆ. ಸಾಧು ಕೋಕಿಲ ಅವರು ಈ ಸಿನಿಮಾದಲ್ಲಿ ಕಾಮಿಡಿಯ ಜವಾಬ್ದಾರಿ ಹೊತ್ತಿಲ್ಲ. ಬದಲಿಗೆ, ಓರ್ವ ಸಂಗೀತ ನಿರ್ದೇಶಕನ ಪಾತ್ರವನ್ನು ಅವರು ಮಾಡಿದ್ದಾರೆ. ಕಥೆಯಲ್ಲಿ ರಿಯಾಲಿಟಿ ಶೋ ಜಡ್ಜ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಹಾಗಂತ ಇದು ಸೀರಿಯಸ್ ಆದ ಪಾತ್ರ ಕೂಡ ಅಲ್ಲ. ಅವರು ತೆರೆಮೇಲೆ ಬಂದಾಗಲೆಲ್ಲ ಪ್ರೇಕ್ಷಕರ ಮುಖದಲ್ಲಿ ಮಂದಹಾಸ ಮೂಡಿಸುತ್ತಾರೆ. ಕಥಾನಾಯಕನ ತಂದೆಯ ಪಾತ್ರದಲ್ಲಿ ರಾಜೇಶ್ ನಟರಂಗ ಅವರು ಎಂದಿನಂತೆ ಪ್ರಬುದ್ಧ ಅಭಿನಯ ನೀಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿರುವ ಕಾರ್ತಿಕ್ ಮಹೇಶ್ ಅವರು ಕೆಲವೇ ಹೊತ್ತು ಕಾಣಿಸಿಕೊಂಡರೂ ಕೂಡ ಸಿನಿಮಾದ ಸಸ್ಪೆನ್ಸ್ ಹೆಚ್ಚಿಸುತ್ತಾರೆ.
ಇದನ್ನೂ ಓದಿ: Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್ ರಾಜ್ಕುಮಾರ್ ಹಿರಾನಿ ಸಿನಿಮಾ ‘ಡಂಕಿ’
ಇದು ಮ್ಯೂಸಿಕಲ್ ಲವ್ಸ್ಟೋರಿ ಇರುವಂತಹ ಸಿನಿಮಾ. ಇಂಥ ಚಿತ್ರದ ಸಂಗೀತ ನಿರ್ದೇಶಕರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದನ್ನು ವೀರ್ ಸಮರ್ಥ್ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಎಲ್ಲ ಹಾಡುಗಳಲ್ಲೂ ಕಾಡುವ ಗುಣ ಇದೆ. ಪ್ರೀತಿ, ಎಮೋಷನಲ್ ಸಂದರ್ಭಗಳಿಗೆ ಅವರು ಸಂಗೀತದ ಮೂಲಕ ಜೀವ ತುಂಬಿದ್ದಾರೆ. ಇಡೀ ಸಿನಿಮಾದಲ್ಲಿ ‘ಮೂಕನಾಗಬೇಕು.. ಜಗದೊಳು ಜ್ವಾಕ್ಯಾಕಿಗಿರಬೇಕು..’ ಎಂಬ ಹಾಡನ್ನು ಒಂದು ಪಾತ್ರದ ರೀತಿಯಲ್ಲೇ ಬಳಸಲಾಗಿದೆ. ಚಿತ್ರದ ಕಥೆಗೆ ಈ ಹಾಡು ದೊಡ್ಡ ಟ್ವಿಸ್ಟ್ ನೀಡುವ ರೀತಿಯಲ್ಲಿ ಬಳಕೆ ಆಗಿದೆ. ಇದು ಮ್ಯೂಸಿಕಲ್ ಹಿನ್ನೆಲೆಯಲ್ಲಿ ಇರುವ ತ್ರಿಕೋನ ಪ್ರೇಮಕಥೆಯ ಸಿನಿಮಾ ಆದ್ದರಿಂದ ‘ಎಕ್ಸ್ಕ್ಯೂಸ್ ಮೀ’ ಸಿನಿಮಾದ ಫೀಲ್ ನೀಡುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ