Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್​ ರಾಜ್​ಕುಮಾರ್ ಹಿರಾನಿ ಸಿನಿಮಾ ‘ಡಂಕಿ’

Shah Rukh Khan: ಈ ವರ್ಷ ಶಾರುಖ್​ ಖಾನ್​ ಅವರು ‘ಜವಾನ್​’, ‘ಪಠಾಣ್’ ಸಿನಿಮಾ ಮೂಲಕ ಮಾಸ್​ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಹಾಗಂತ ಒಂದೇ ಮಾದರಿಯ ಸಿನಿಮಾಗೆ ಅವರು ಗಂಟು ಬಿದ್ದಿಲ್ಲ. ಈಗ ತೆರೆಕಂಡಿರುವ ‘ಡಂಕಿ’ ಚಿತ್ರ ಸಖತ್​ ಕ್ಲಾಸ್​ ಆಗಿದೆ. ಇದರ ಕಥಾನಾಯಕ ಒಬ್ಬ ಸೂಪರ್​ ಹೀರೋ ಅಲ್ಲ. ಜನಸಾಮಾನ್ಯರ ನಡುವಿನ ವ್ಯಕ್ತಿಯ ರೀತಿ ಆ ಪಾತ್ರ ಇದೆ.

Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್​ ರಾಜ್​ಕುಮಾರ್ ಹಿರಾನಿ ಸಿನಿಮಾ ‘ಡಂಕಿ’
‘ಡಂಕಿ’ ಸಿನಿಮಾ ಪೋಸ್ಟರ್​
Follow us
|

Updated on:Dec 21, 2023 | 3:15 PM

ಸಿನಿಮಾ: ಡಂಕಿ. ನಿರ್ಮಾಣ: ಗೌರಿ ಖಾನ್​, ರಾಜ್​ಕುಮಾರ್​ ಹಿರಾನಿ. ನಿರ್ದೇಶನ: ರಾಜ್​ಕುಮಾರ್ ಹಿರಾನಿ. ಪಾತ್ರವರ್ಗ: ಶಾರುಖ್​ ಖಾನ್​, ತಾಪ್ಸಿ ಪನ್ನು, ವಿಕ್ಕಿ ಕೌಶಲ್​, ಬೊಮನ್​ ಇರಾನಿ, ಅನಿಲ್​ ಗ್ರೋವರ್, ವಿಕ್ರಮ್​ ಕೊಚ್ಚರ್​ ಮುಂತಾದವರು. ಸ್ಟಾರ್​: 3.5/5

ನಟ ಶಾರುಖ್​ ಖಾನ್​ (Shah Rukh Khan) ಅವರು ಮೊದಲ ಬಾರಿಗೆ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಜೊತೆ ಕೈ ಜೋಡಿಸಿದ ಕಾರಣದಿಂದ ಡಂಕಿಸಿನಿಮಾ ನಿರೀಕ್ಷೆ ಮೂಡಿಸಿತ್ತು. ಇಂದು (ಡಿ.21) ಈ ಸಿನಿಮಾ ಬಿಡುಗಡೆ ಆಗಿದೆ. ಕ್ಲಾಸ್​ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಹೆಚ್ಚಿನ ಮಸಾಲೆ ಅಂಶಗಳನ್ನು ಬಳಸಿಕೊಳ್ಳದೇ ಒಂದು ಕ್ಲಾಸ್​ ಸಿನಿಮಾ ನೀಡುವಲ್ಲಿ ನಿರ್ದೇಶಕ ರಾಜ್​ಕುಮಾರ್​ ಹಿರಾನಿ (Rajkumar Hirani) ಅವರು ಯಶಸ್ವಿ ಆಗಿದ್ದಾರೆ. ಶಾರುಖ್ ಖಾನ್​ ಮಾತ್ರವಲ್ಲದೇ ಇತರೆ ಪಾತ್ರಧಾರಿಗಳೂ ‘ಡಂಕಿ’ ಸಿನಿಮಾದಲ್ಲಿ ಮಿಂಚಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ (Dunki Review) ಓದಿ..

ಶಾರುಖ್​ ಖಾನ್​ ಅವರು ‘ಜವಾನ್​’ ಮತ್ತು ‘ಪಠಾಣ್’ ಸಿನಿಮಾ ಮೂಲಕ ಅಪ್ಪಟ ಮಾಸ್​ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಹಾಗಂತ ಒಂದೇ ಮಾದರಿಯ ಸಿನಿಮಾಗೆ ಅವರು ಗಂಟು ಬಿದ್ದಿಲ್ಲ. ಈಗ ‘ಡಂಕಿ’ ಸಿನಿಮಾ ಸಖತ್​ ಕ್ಲಾಸ್​ ಆಗಿದೆ. ಎಷ್ಟರಮಟ್ಟಿಗೆಂದರೆ ಈ ಚಿತ್ರದಲ್ಲಿ ಯಾವುದೇ ಫೈಟಿಂಗ್​ ದೃಶ್ಯ ಇಲ್ಲ. ಸಂದರ್ಭಕ್ಕೆ ತಕ್ಕಂತೆ ಒಂದೆರಡು ಬಾರಿ ಗುಂಡಿನ ಶಬ್ದ ಕೇಳುತ್ತದೆ ಅಷ್ಟೇ. ‘ಡಂಕಿ’ ಚಿತ್ರದ ಕಥಾನಾಯಕ ಒಬ್ಬ ಸೂಪರ್​ ಹೀರೋ ಅಲ್ಲ. ಜನಸಾಮಾನ್ಯರ ನಡುವಿನ ಒಬ್ಬ ವ್ಯಕ್ತಿಯ ರೀತಿ ಆ ಪಾತ್ರ ಇದೆ.

ಹಾರ್ಡಿ ಸಿಂಗ್ ದಿಲೋನ್​ ಎಂಬ ಮಾಜಿ ಸೈನಿಕನ ಪಾತ್ರದಲ್ಲಿ ಶಾರುಖ್​ ಖಾನ್​ ನಟಿಸಿದ್ದಾರೆ. ಅಚಾನಕ್​ ಆಗಿ ಅವರಿಗೆ ಒಂದು ಗೆಳೆಯರ ಗುಂಪು ಸಿಗುತ್ತದೆ. ಹೇಗಾದರೂ ಮಾಡಿ ಲಂಡನ್​ಗೆ ಹೋಗಬೇಕು ಎಂಬುದು ಅವರೆಲ್ಲರ ಕನಸು. ಆದರೆ ವೀಸಾ ಸಿಗುವುದು ಕಷ್ಟ. ಹಾಗಾಗಿ ಕಳ್ಳದಾರಿಯ ಮೂಲಕ ದೇಶದ ಗಡಿದಾಟುವ ಸಾಹಸಕ್ಕೆ ಅವರೆಲ್ಲ ಮುಂದಾಗುತ್ತಾರೆ. ಅಂತಿಮವಾಗಿ ಅವರು ಲಂಡನ್​ಗೆ ತೆರಳುತ್ತಾರಾ? ಅಲ್ಲಿ ಅವರು ಅಂದುಕೊಂಡಿದ್ದು ಈಡೇರುತ್ತೋ ಅಥವಾ ಇಲ್ಲವೋ ಎಂಬುದು ‘ಡಂಕಿ’ ಸಿನಿಮಾದ ಕಥೆ. ಇದರೊಳಗೆ ಸ್ನೇಹದ ಕಹಾನಿಯೂ ಇದೆ. ಮನಸ್ಸಿಗೆ ಇಷ್ಟವಾಗುವಂತಹ ಒಂದು ಲವ್​ಸ್ಟೋರಿಯೂ ಇದೆ.

ಇದನ್ನೂ ಓದಿ: Bad Manners Review: ಸಿಂಪಲ್​ ಕಥೆಯನ್ನು ಸುತ್ತಿ ಬಳಸಿ ಹೇಳಿ ‘ಬ್ಯಾಡ್​ ಮ್ಯಾನರ್ಸ್​’ ತೋರಿಸಿದ ಸೂರಿ, ಅಭಿಷೇಕ್​

ರಾಜ್​ಕುಮಾರ್​ ಹಿರಾನಿ ಅವರು ಪ್ರತಿ ಬಾರಿಯೂ ಒಂದು ಗಂಭೀರವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಂತ ಅದನ್ನು ಪ್ರೇಕ್ಷಕರ ಎದುರಿಗೆ ಇಡುವಾಗ ಅವರ ನಿರೂಪಣಾ ಶೈಲಿ ಗಂಭೀರವಾಗಿ ಇರುವುದಿಲ್ಲ. ಎಂಥ ಸೀರಿಯಸ್​ ವಿಷಯವನ್ನೇ ಆದರೂ ಪಕ್ಕಾ ಹಾಸ್ಯದ ಶೈಲಿಯಲ್ಲಿ ಹೇಳಬಲ್ಲಂತಹ ಕಲೆ ಅವರಿಗೆ ಸಿದ್ಧಿಸಿದೆ. ಕಾಮಿಡಿಯ ನಡುವೆಯೇ ಪ್ರೇಕ್ಷಕರನ್ನು ಭಾವುಕರನ್ನಾಗಿಸುವ ಗುಣ ಕೂಡ ಅವರ ಸ್ಕ್ರಿಪ್ಟ್​ನಲ್ಲಿ ಇರುತ್ತದೆ. ಅದನ್ನೇ ಅವರು ‘ಡಂಕಿ’ ಸಿನಿಮಾದಲ್ಲೂ ಮುಂದುವರಿಸಿದ್ದಾರೆ. ಈ ಸಿನಿಮಾದಲ್ಲಿನ ಪ್ರತಿ ಪಾತ್ರಗಳ ಹಿನ್ನೆಲೆಯೂ ಕಷ್ಟದಿಂದ ಕೂಡಿದೆ. ಅದನ್ನು ಹಾಸ್ಯದ ಶೈಲಿಯಲ್ಲಿ ರಾಜ್​ಕುಮಾರ್​ ಹಿರಾನಿ ಪ್ರಸ್ತುತಪಡಿಸಿದ್ದಾರೆ. ಆ ಮೂಲಕ ತಮ್ಮ ಛಾಪನ್ನು ಅವರು ಮತ್ತೊಮ್ಮೆ ಮೂಡಿಸಿದ್ದಾರೆ. ‘ಮುನ್ನಭಾಯ್​ ಎಂಬಿಬಿಎಸ್​’, ‘ಪಿಕೆ’, ‘3 ಈಡಿಯಟ್ಸ್​’ ರೀತಿಯೇ ಒಂದು ಮುಖ್ಯವಾದ ಸಂದೇಶವನ್ನು ನೀಡುವಲ್ಲಿ ‘ಡಂಕಿ’ ಸಿನಿಮಾ ಯಶಸ್ವಿ ಆಗುತ್ತದೆ.

ಇದನ್ನೂ ಓದಿ: SSE Side B Review: ‘ಸೈಡ್​ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್​ ಬಿ’ ಲಯ ಬದಲಾಗಿಲ್ಲ

‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ ಅವರು ಯಾವುದೇ ಹೀರೋಗಿರಿಯನ್ನು ವಿಜೃಂಭಿಸಿಲ್ಲ. ಸಿಂಪಲ್​ ವ್ಯಕ್ತಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಆ ಪಾತ್ರ ವಿಶೇಷ ಎನಿಸುವುದು ಆತ ತೆಗೆದುಕೊಳ್ಳುವ ನಿರ್ಧಾರಗಳಿಂದ. ಎಂತಹ ಪರಿಸ್ಥಿತಿಯಲ್ಲೂ ತನ್ನ ದೇಶಪ್ರೇಮವನ್ನು ಮೆರೆಯುವ ಹಾರ್ಡಿ ಸಿಂಗ್​ ಪಾತ್ರಕ್ಕೆ ಶಾರುಖ್​ ಖಾನ್​ ಜೀವ ತುಂಬಿದ್ದಾರೆ. ಅವರಿಗೆ ಸೂಕ್ತ ಜೋಡಿಯಾಗಿ ತಾಪ್ಸಿ ಪನ್ನು ನಟಿಸಿದ್ದಾರೆ. ಅವರ ಪಾತ್ರಕ್ಕೆ ಈ ಸಿನಿಮಾದಲ್ಲಿ ಒಳ್ಳೆಯ ಸ್ಕೋಪ್​ ಸಿಕ್ಕಿದೆ. ವಿಕ್ರಮ್​ ಕೊಚ್ಚರ್​, ಅನಿಲ್​ ಗ್ರೋವರ್​ ಹಾಗೂ ಬೊಮನ್​ ಇರಾನಿ ಅವರು ನಗಿಸುವ ಜವಾಬ್ದಾರಿಯನ್ನು ಹೆಚ್ಚಾಗಿ ನಿಭಾಯಿಸಿದ್ದಾರೆ. ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ವಿಕ್ಕಿ ಕೌಶಲ್​ ಅವರು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ.

ಇದನ್ನೂ ಓದಿ: Ghost Review: ಮಾಸ್​ ಪ್ರೇಕ್ಷಕರಿಗಾಗಿ ಅವಸರದಲ್ಲಿ ಹೇಳಿಮುಗಿಸಿದ ‘ಘೋಸ್ಟ್​’ ಕಹಾನಿ

ಈ ಸಿನಿಮಾದಲ್ಲಿ ಒಂದಷ್ಟು ಮೈನಸ್​ ಅಂಶಗಳೂ ಇವೆ. ಚಿತ್ರದ ಕೆಲವು ದೃಶ್ಯಗಳು ಬಾಲಿಶ ಎನಿಸುತ್ತವೆ. ಕೆಲವು ಸಿದ್ಧ ಸೂತ್ರಗಳಿಂದಾಗಿ ‘ಡಂಕಿ’ ಪೇಲವ ಎನಿಸಿಕೊಳ್ಳುತ್ತದೆ. ಹಾಸ್ಯವನ್ನೇ ಹೈಲೈಟ್​ ಮಾಡುವ ಪ್ರಯತ್ನದಲ್ಲಿ ನಿರ್ದೇಶಕರು ಕೆಲವು ಮುಖ್ಯ ವಿಚಾರವನ್ನು ಕಡೆಗಣಿಸಿದಂತೆ ಅನಿಸುತ್ತದೆ. ಯಾವುದೇ ಅನುಮತಿ ಇಲ್ಲದೇ ಕಳ್ಳದಾರಿಯ ಮೂಲಕ ದೇಶದ ಗಡಿ ದಾಡುವುದನ್ನು ‘ಡಾಂಕಿ ಜರ್ನಿ’ ಅಥವಾ ‘ಡಾಂಕಿ ರೂಟ್​’ ಎನ್ನುತ್ತಾರೆ. ಅದು ತುಂಬ ರಿಸ್ಕಿ ಮತ್ತು ಅಪಾಯಕಾರಿಯಾದ ಪ್ರಯತ್ನ. ನಿಜ ಜೀವನದಲ್ಲಿ ಡಾಂಕಿ ಜರ್ನಿ ಮಾಡಿದ ಎಷ್ಟೋ ಜನರು ಅರ್ಧ ದಾರಿಯಲ್ಲೇ ಜೀವ ಕಳೆದುಕೊಂಡಿದ್ದಾರೆ. ಎಷ್ಟೋ ಹೆಣಗಳು ಅಂತ್ಯ ಸಂಸ್ಕಾರಕ್ಕೂ ಒಳಗಾಗದೇ ಕೊಳೆತು ಹೋಗಿವೆ. ತಮ್ಮವರನ್ನು ಕಳೆದುಕೊಂಡ ಅನೇಕ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆದಿದ್ದಾರೆ. ಈ ರೀತಿಯ ವಿವರಗಳನ್ನು ರಾಜ್​ಕುಮಾರ್​ ಹಿರಾನಿ ಅವರು ಈ ಸಿನಿಮಾದಲ್ಲಿ ಹೆಚ್ಚು ತೋರಿಸಿಲ್ಲ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:28 pm, Thu, 21 December 23