Blink Movie Review: ಟೈಮ್ ಟ್ರಾವೆಲ್ ಮೂಲಕ ಸ್ಯಾಂಡಲ್ವುಡ್ಗೆ ಬಂದ ಈಡಿಪಸ್
‘ಬ್ಲಿಂಕ್’ ಸಿನಿಮಾದಲ್ಲಿ ಟೈಮ್ ಟ್ರಾವೆಲ್ ಕಥೆ ಇದೆ. ಗಮನ ಎಲ್ಲೋ ಇಟ್ಟುಕೊಂಡು ನೋಡುವಂತಹ ಸಿನಿಮಾ ಇದಲ್ಲ. ಆರಂಭದಿಂದ ಕೊನೆಯ ತನಕ ಪ್ರೇಕ್ಷಕರ ಗಮನವನ್ನು ಸಂಪೂರ್ಣ ಬೇಡುವ ಸಿನಿಮಾವಿದು. ತಲೆಗೆ ಕೆಲಸ ಕೊಡುವ ಸಿನಿಮಾಗಳನ್ನು ಬಯಸುವವರಿಗೆ ‘ಬ್ಲಿಂಕ್’ ಚಿತ್ರ ಇಷ್ಟವಾಗುತ್ತಿದೆ. ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..
ಸಿನಿಮಾ: ಬ್ಲಿಂಕ್. ನಿರ್ಮಾಣ: ರವಿಚಂದ್ರ ಎ.ಜೆ. ನಿರ್ದೇಶನ: ಶ್ರೀನಿಧಿ ಬೆಂಗಳೂರು. ಪಾತ್ರವರ್ಗ: ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ, ವಜ್ರಧೀರ್ ಜೈನ್, ಸುರೇಶ ಅನಗಳ್ಳಿ, ಮಂದಾರ ಬಟ್ಟಲಹಳ್ಳಿ ಮುಂತಾದವರು. ಸ್ಟಾರ್: 3.5/5
ಹೊಸಬರು ಚಿತ್ರರಂಗಕ್ಕೆ ಬಂದಾಗ ಹೊಸತನವನ್ನು ತರುತ್ತಾರೆ ಎಂಬ ನಂಬಿಕೆ ಇದೆ. ಅದು ‘ಬ್ಲಿಂಕ್’ (Blink) ಸಿನಿಮಾತಂಡದ ವಿಚಾರದಲ್ಲಿ ನಿಜವಾಗಿದೆ. ಮಾಮೂಲಿ ಶೈಲಿಯ ಸಿನಿಮಾಗಳನ್ನು ನೋಡಿ ಬೇಜಾರಾಗಿದ್ದರೆ, ಏನಾದರೂ ಹೊಸ ರೀತಿಯ ಸಿನಿಮಾ ನೋಡಬೇಕು ಎಂದುಕೊಂಡರೆ ‘ಬ್ಲಿಂಕ್’ ಅತ್ಯುತ್ತಮ ಆಯ್ಕೆ. ಈ ಸಿನಿಮಾದಲ್ಲಿ ಟೈಮ್ ಟ್ರಾವೆಲಿಂಗ್ನ (Time Travel) ಕಹಾನಿಯನ್ನು ಹೇಳಲಾಗಿದೆ. ಕನ್ನಡದಲ್ಲಿ ಈ ರೀತಿಯ ಪ್ರಯೋಗ ಆಗಿದ್ದು ವಿರಳ. ಹಾಗಾಗಿ ಸ್ಯಾಂಡಲ್ವುಡ್ ಪ್ರೇಕ್ಷಕರಿಗೆ ಇದು ಸಂಪೂರ್ಣವಾಗಿ ಭಿನ್ನ ಅನುಭವನ್ನು ನೀಡುತ್ತದೆ. ‘ಬ್ಲಿಂಕ್’ ಸಿನಿಮಾ ವಿಮರ್ಶೆ (Blink Kannada Movie Review) ಇಲ್ಲಿದೆ..
ರಂಗಭೂಮಿಯ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ಸಿನಿಮಾ ‘ಬ್ಲಿಂಕ್’. ಹಾಗಾಗಿ ಈ ಸಿನಿಮಾದಲ್ಲಿ ನಾಟಕದ ಶೈಲಿ ಬೆರೆತಿದೆ. ಕಥೆಯ ಒಳಗಡೆಯೂ ನಾಟಕದ ತಾಲೀಮಿನ ದೃಶ್ಯಗಳ ಹೇರಳವಾಗಿವೆ. ಜೊತೆಗೆ ‘ಈಡಿಪಸ್ ರೆಕ್ಸ್’ ಗ್ರೀಕ್ ನಾಟಕದ ಕಥಾಹಂದರವನ್ನು ಬಹಳ ಚೆನ್ನಾಗಿ ಸಿನಿಮಾದಲ್ಲಿ ಅಳವಡಿಸಿಕೊಳ್ಳಲಾಗಿದೆ. ಆರಂಭದಿಂದ ಕೊನೆಯ ತನಕ ಈ ಸಿನಿಮಾ ಕಿಂಚಿತ್ತೂ ಬೋರು ಹೊಡೆಸುವುದಿಲ್ಲ. ಆರಂಭದಲ್ಲಿ ಸ್ವಲ್ಪ ಗೊಂದಲ ಎನಿಸಬಹುದು. ಆದರೆ ಕಥೆ ಸಾಗಿದಂತೆಲ್ಲ ಸಿನಿಮಾದಲ್ಲಿನ ಸಸ್ಪೆನ್ಸ್ ಹೆಚ್ಚುತ್ತದೆ.
ಟೈಮ್ ಟ್ರಾವೆಲ್ ವಿಷಯವನ್ನು ಇಟ್ಟುಕೊಂಡು ಬೇರೆ ಬೇರೆ ಭಾಷೆಯಲ್ಲಿ ಹಲವು ಸಿನಿಮಾಗಳು ಬಂದಿದೆ. ಯಾವುದೋ ಒಂದು ಯಂತ್ರದ ಸಹಾಯದಿಂದ ಭೂತಕಾಲ ಮತ್ತು ಭವಿಷ್ಯ ಕಾಲಕ್ಕೆ ಪಯಣ ಬೆಳೆಸುವ ಪಾತ್ರಗಳು ಇಂಥ ಸಿನಿಮಾಗಳಲ್ಲಿ ಇರುತ್ತದೆ. ಆ ರೀತಿ, ಟೈಮ್ ಟ್ರಾವೆಲ್ನಿಂದ ಭೂತ ಅಥವಾ ಭವಿಷ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲಾಗುತ್ತದೆ. ಈ ರೀತಿಯ ಒಂದು ಕಾಲ್ಪನಿಕ ಜಗತ್ತಿನ ಬಗ್ಗೆ ಆಸಕ್ತಿ ಇರುವವರಿಗೆ ‘ಬ್ಲಿಂಕ್’ ಸಿನಿಮಾ ತುಂಬ ಇಷ್ಟವಾಗುತ್ತದೆ. ಬೇರೆ ಭಾಷೆಯಲ್ಲಿ ಈ ರೀತಿಯ ಸಿನಿಮಾಗಳನ್ನು ನೋಡಿರದೇ, ಮೊದಲ ಬಾರಿಗೆ ‘ಬ್ಲಿಂಕ್’ ನೋಡುವ ಪ್ರೇಕ್ಷಕರಿಗಂತೂ ಬೇರೆಯದೇ ಥ್ರಿಲ್ ಸಿಗುತ್ತದೆ.
ನಟ ದೀಕ್ಷಿತ್ ಶೆಟ್ಟಿ ಅವರು ‘ಬ್ಲಿಂಕ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈಡಿಪಸ್ ರೀತಿಯ ಆ ಪಾತ್ರದಲ್ಲಿ ನಟಿಸುವುದು ಒಂದು ಸವಾಲು. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ನಟನೆಗೆ ಈ ಸಿನಿಮಾದಲ್ಲಿ ಹೆಚ್ಚು ಸ್ಕೋಪ್ ಸಿಕ್ಕಿದೆ. ಅವರಿಗೆ ಜೋಡಿಯಾಗಿ ನಟಿಸಿರುವ ಮಂದಾರ ಬಟ್ಟಲಹಳ್ಳಿ ಅವರು ಗಮನ ಸೆಳೆಯುತ್ತಾರೆ. ಫ್ಲ್ಯಾಶ್ ಬ್ಯಾಕ್ ಕಹಾನಿಯಲ್ಲಿ ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ವಜ್ರಧೀರ್ ಜೈನ್ ಅವರ ಪಾತ್ರಗಳು ಹೈಲೈಟ್ ಆಗಿವೆ. ಕಥಾನಾಯಕನ ಎದುರು ಆಗಾಗ ಕಾಣಿಸಿಕೊಳ್ಳುವ ಸುರೇಶ ಅನಗಳ್ಳಿ ಅವರು ಕೂಡ ಸಸ್ಪೆನ್ಸ್ ಹೆಚ್ಚಿಸುತ್ತಾರೆ. ಈ ಎಲ್ಲ ಪ್ರತಿಭಾವಂತ ಕಲಾವಿದರ ಬಳಗ ಕೂಡ ಈ ಸಿನಿಮಾದ ದೊಡ್ಡ ಶಕ್ತಿ.
ಇದನ್ನೂ ಓದಿ: Laapataa Ladies Review: ಈ ಕಾಲಕ್ಕೆ ಬೇಕಾದ ಮಹತ್ವಪೂರ್ಣ ಸಿನಿಮಾ ‘ಲಾಪತಾ ಲೇಡೀಸ್’
ಇದು ಟೈಮ್ ಟ್ರಾವೆಲ್ ಕಹಾನಿ ಆದ್ದರಿಂದ ವಿವಿಧ ಕಾಲಘಟ್ಟದ ದೃಶ್ಯಗಳು ಬರುತ್ತವೆ. ರೆಟ್ರೋ ಸನ್ನಿವೇಶಗಳಿಗೆ ಬೇರೆಯದೇ ಶೇಡ್ ಬಳಸಲಾಗಿದೆ. ರಂಗಭೂಮಿ ಪ್ರತಿಭೆಗಳಿಂದ ನಿರ್ಮಿತವಾದ ಸಿನಿಮಾ ಆದ್ದರಿಂದ ಈ ಚಿತ್ರದ ಎಷ್ಟೋ ದೃಶ್ಯಗಳು ಒಂದು ರಂಗಪ್ರಯೋಗದ ರೀತಿಯೇ ಮೂಡಿಬಂದಿವೆ. ಜೊತೆಗೆ ಸೂಕ್ಷ್ಮವಾಗಿ ಫಿಲಾಸಫಿ ಹೇಳುತ್ತಲೂ ಸಾಗುತ್ತದೆ ‘ಬ್ಲಿಂಕ್’ ಸಿನಿಮಾದ ಕಥೆ. ಸಿನಿಮಾಟೋಗ್ರಾಫರ್ ಅವಿನಾಶ್ ಶಾಸ್ತ್ರಿ, ಸಂಕಲನಕಾರ ಸಂಜೀವ್ ಜಾಗಿರ್ದಾರ್, ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್ ಎಂ.ಎಸ್. ಅವರ ಕೆಲಸ ಎದ್ದು ಕಾಣುತ್ತದೆ. ಎಲ್ಲರ ಶ್ರಮದಿಂದ ‘ಬ್ಲಿಂಕ್’ ಚಿತ್ರ ಉತ್ತಮವಾಗಿ ಮೂಡಿಬಂದಿದೆ.
ಇದನ್ನೂ ಓದಿ: Karataka Damanaka review: ಹುಟ್ಟಿದೂರಿನ ಮಹತ್ವ ಸಾರುವ ಸಿನಿಮಾದಲ್ಲಿ ಏನಿದೆ? ಏನಿಲ್ಲ?
ಮೊದಲೇ ಹೇಳಿದಂತೆ ‘ಈಡಿಪಸ್ ರೆಕ್ಸ್’ ನಾಟಕದ ಕಥಾಹಂದರ ‘ಬ್ಲಿಂಕ್’ ಸಿನಿಮಾದಲ್ಲಿದೆ. ಬೇರೆ ಬೇರೆ ಭಾಷೆಯಲ್ಲಿ ಈ ನಾಟಕ ಪ್ರದರ್ಶನ ಆಗಿದೆ. ರಂಗಭೂಮಿಯಲ್ಲಿ ಕೂಡ ಹಲವು ರೀತಿಯ ಪ್ರಯೋಗಗಳು ಆಗಿವೆ. ಅದೇ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹೊಸ ರೀತಿಯಲ್ಲಿ ಕನ್ನಡ ಚಿತ್ರರಂಗಕ್ಕೂ ಈಡಿಪಸ್ನ ಪರಿಚಯ ಮಾಡಿಸುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ. ‘ಬ್ಲಿಂಕ್’ ನೋಡುವಾಗ ‘ಪ್ರೀ ಡೆಸ್ಟಿನೇಷನ್’, ‘ರಂಗನಾಯಕಿ’, ‘ಪಲ್ಪ್ ಫಿಕ್ಷನ್’ ಮುಂತಾದ ಸಿನಿಮಾಗಳು ಖಂಡಿತವಾಗಿಯೂ ನೆನಪಾಗುತ್ತವೆ. ನಿರ್ದೇಶಕರು ಆ ಸಿನಿಮಾಗಳಿಂದ ಸ್ಫೂರ್ತಿ ಪಡೆದಿದ್ದನ್ನು ಮರೆಮಾಚಿಲ್ಲ. ಅವುಗಳ ಪೋಸ್ಟರ್ಗಳನ್ನು ‘ಬ್ಲಿಂಕ್’ ಕಥೆಯ ನಡುನಡುವೆ ಗೋಚರವಾಗುವಂತೆ ಮಾಡಿದ್ದಾರೆ. ಒಟ್ಟಾರೆಯಾಗಿ ಈ ಸಿನಿಮಾ ಒಂದು ವಿಶೇಷ ಅನುಭವ ನೀಡುವುದು ಖಂಡಿತ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.