Laapataa Ladies Review: ಈ ಕಾಲಕ್ಕೆ ಬೇಕಾದ ಮಹತ್ವಪೂರ್ಣ ಸಿನಿಮಾ ‘ಲಾಪತಾ ಲೇಡೀಸ್’

‘ಲಾಪತಾ ಲೇಡೀಸ್​’ ಸಿನಿಮಾದಲ್ಲಿ ಇರುವ ವಿಷಯ ಗಂಭೀರವಾಗಿದ್ದರೂ ಕೂಡ ಅದನ್ನು ನಿರೂಪಿಸಿರುವ ಶೈಲಿ ತುಂಬ ರಂಜನೀಯವಾಗಿದೆ. ಒಂದು ಭಾವನಾತ್ಮಕ ಕಥೆ ಈ ಸಿನಿಮಾದಲ್ಲಿದೆ. ಪ್ರತಿ ವಿಭಾಗವನ್ನು ನಿರ್ದೇಶಕಿ ಕಿರಣ್​ ರಾವ್​ ಅವರು ಅತ್ಯುತ್ತಮವಾಗಿ ದುಡಿಸಿಕೊಂಡಿದ್ದಾರೆ. ಸಮಾಜದಲ್ಲಿ ತುಂಬ ಅಗತ್ಯವಾದ ಪರಿವರ್ತನೆಗೆ ಪ್ರೇರಣೆ ನೀಡುವಂತಹ ಸಿನಿಮಾ ಇದು.

Laapataa Ladies Review: ಈ ಕಾಲಕ್ಕೆ ಬೇಕಾದ ಮಹತ್ವಪೂರ್ಣ ಸಿನಿಮಾ ‘ಲಾಪತಾ ಲೇಡೀಸ್’
ನಿತಾಂಶಿ ಗೋಯಲ್​, ಸ್ಪರ್ಶ್​ ಶ್ರೀವಾಸ್ತವ, ಪ್ರತಿಭಾ ರಂಟಾ
Follow us
ಮದನ್​ ಕುಮಾರ್​
|

Updated on: Mar 01, 2024 | 11:15 AM

ಚಿತ್ರ: ಲಾಪತಾ ಲೇಡೀಸ್​. ನಿರ್ಮಾಣ: ಆಮಿರ್​ ಖಾನ್​. ನಿರ್ದೇಶನ: ಕಿರಣ್​ ರಾವ್​. ಪಾತ್ರವರ್ಗ: ಸ್ಪರ್ಶ್ ಶ್ರೀವಾಸ್ತವ, ನಿತಾಂಶಿ ಗೋಯಲ್, ಪ್ರತಿಭಾ ರಂಟಾ, ರವಿ ಕಿಶನ್, ಛಾಯಾ ಕದಂ ಮುಂತಾದವರು. ಸ್ಟಾರ್​: 4.5/5

ಬಹಳ ವರ್ಷಗಳ ಬಳಿಕ ಕಿರಣ್ ರಾವ್ (Kiran Rao) ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. 2011ರಲ್ಲಿ ಅವರು ‘ಧೋಬಿ ಘಾಟ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದರು. ಈಗ 13 ವರ್ಷಗಳ ಬಳಿಕ ಅವರ ನಿರ್ದೇಶನದಲ್ಲಿ ‘ಲಾಪತಾ ಲೇಡೀಸ್’ ಸಿನಿಮಾ ಮೂಡಿಬಂದಿದೆ. ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಚಪ್ಪಾಳೆ ಗಿಟ್ಟಿಸಿಕೊಂಡಿರುವ ಈ ಸಿನಿಮಾ ಇಂದು (ಮಾರ್ಚ್ 1) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಹಲವು ಕಾರಣದಿಂದ ‘ಲಾಪತಾ ಲೇಡೀಸ್’ (Laapataa Ladies) ಸಿನಿಮಾ ತುಂಬ ಮಹತ್ವಪೂರ್ಣ ಎನಿಸಿಕೊಳ್ಳುತ್ತದೆ. ಸ್ಪರ್ಶ್ ಶ್ರೀವಾಸ್ತವ, ಪ್ರತಿಭಾ ರಂಟಾ, ನಿತಾಂಶಿ ಗೋಯಲ್, ರವಿ ಕಿಶನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ (Laapataa Ladies Review) ಓದಿ..

ಹಳೇ ಬೇರು-ಹೊಸ ಚಿಗುರು:

ಈ ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಹೊಸಬರು. ಮುಖ್ಯವಾದ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸ್ಪರ್ಶ್ ಶ್ರೀವಾಸ್ತವ, ಪ್ರತಿಭಾ ರಂಟಾ, ನಿತಾಂಶಿ ಗೋಯಲ್ ಅವರಿಗೆ ಇದು ಮೊದಲ ಸಿನಿಮಾ.‌ ಸೂಕ್ತ ತರಬೇತಿಯೊಂದಿಗೆ ಅವರು ಕ್ಯಾಮೆರಾ ಎದುರಿಸಿದ್ದಾರೆ. ಈ ಹೊಸ ತಲೆಮಾರಿನ ಕಲಾವಿದರಿಗೆ ಪರದೆಯ ಹಿಂದೆ ಸಾಥ್ ನೀಡಿರುವುದು ಅನುಭವಿಗಳಾದ ನಿರ್ದೇಶಕಿ ಕಿರಣ್ ರಾವ್ ಹಾಗೂ ನಿರ್ಮಾಪಕ ಆಮಿರ್ ಖಾನ್. ಹೀಗೆ ಹಳೇ ಬೇರು ಮತ್ತು ಹೊಸ ಚಿಗುರು ಸೇರಿ ಒಂದು ಸುಂದರವಾದ ಸಿನಿಮಾಮರ ಬೆಳೆದಿದೆ.

‘ಲಾಪತಾ ಲೇಡೀಸ್’ ಸಿನಿಮಾ ಕಥೆ:

ಈಗಷ್ಟೇ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಇಬ್ಬರು ಹುಡುಗಿಯರು ಕಾಣೆ ಆಗುತ್ತಾರೆ. ಹೆಂಡತಿಯರನ್ನು ಕಳೆದುಕೊಂಡ ಗಂಡಂದಿರಿಗೆ ಹುಡುಕುವುದೇ ದೊಡ್ಡ ಕಾಯಕ ಆಗುತ್ತದೆ. ಹೆಂಡತಿಯನ್ನು ಕಳೆದುಕೊಂಡವನು ಎಂಬ ಅವಮಾನ ಒಂದು ಕಡೆಯಾದರೆ, ಕಳೆದು ಹೋದ ಹೆಂಡತಿಯ ಪರಿಸ್ಥಿತಿ ಹೇಗಿದೆಯೋ ಎಂಬ ಚಿಂತೆ ಇನ್ನೊಂದು ಕಡೆ. ಇಂಥ ಸಂಕಟದ ಸಂದರ್ಭವನ್ನು ಬಹಳ ಅಚ್ಚುಕಟ್ಟಾಗಿ ವಿವರಿಸುತ್ತಲೇ ಹತ್ತಾರು ವಿಚಾರಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ ‘ಲಾತಪಾ ಲೇಡೀಸ್’ ಸಿನಿಮಾ. ಮೇಲ್ನೋಟಕ್ಕೆ ಇದು ಗೋಳಿನ ಕಥೆಯ ರೀತಿ ಕಾಣಿಸಿದರೂ ತುಂಬ ಹಾಸ್ಯಮಯವಾಗಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎಮೋಷನ್ಸ್​ಗೆ ಬಹಳ ಒತ್ತು ನೀಡಲಾಗಿದೆ.

ಆಶಯಕ್ಕೆ ತಕ್ಕ ಶೀರ್ಷಿಕೆ:

‘ಕಾಣೆಯಾದ ಮಹಿಳೆಯರು’ ಎಂಬುದು ಈ ಶೀರ್ಷಿಕೆಯ ಅರ್ಥ. ಇದು ಕೇವಲ ಕಥೆಗೆ ಸೂಕ್ತವಾದ ಟೈಟಲ್ ಅಷ್ಟೇ ಅಲ್ಲ. ಇಡೀ ಸಿನಿಮಾದ ಆಶಯಕ್ಕೆ ಹೊಂದಿಕೆ ಆಗುವ ಟೈಟಲ್. ಸಮಾಜದಲ್ಲಿ ಇದ್ದರೂ ಇಲ್ಲದಂತೆ ಕೆಲವು ಮಹಿಳೆಯರ ಅಸ್ತಿತ್ವವೇ ಕಾಣೆ ಆಗಿರುತ್ತದೆ. ಅವರ ಇಷ್ಟ-ಕಷ್ಟಗಳು ಕಾಣೆ ಆಗಿರುತ್ತವೆ. ಯಾರದ್ದೋ ಒತ್ತಡಗಳಿಗೆ ಸಿಲುಕಿ ಯುವತಿಯರ ಭವಿಷ್ಯವೇ ಕಾಣೆ ಆಗಿರುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಬಹುಪಾಲು ಗಂಡಸರ ಮನದೊಳಗೆ ಮಹಿಳೆಯ ಬಗೆಗಿನ ಸಹಾನುಭೂತಿ ಕಾಣೆ ಆಗಿರುತ್ತದೆ. ಹೀಗೆ ಕಾಣೆ ಆದ ಎಲ್ಲ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವೇ ‘ಲಾಪತಾ ಲೇಡೀಸ್’ ಸಿನಿಮಾ.

ಇದನ್ನೂ ಓದಿ: Saramsha Review: ಅವರವರ ಗ್ರಹಿಕೆಗೆ ತಕ್ಕಂತಿದೆ ಬದುಕಿನ ಫಿಲಾಸಫಿ ಹೇಳುವ ‘ಸಾರಾಂಶ’

ಅಪರೂಪದ ಲವ್​​ಸ್ಟೋರಿ:

ತುಂಬಾ ಗಂಭೀರವಾದ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಹಾಗಂತ ಎಲ್ಲಿಯೂ ಬೋರು ಹೊಡೆಸುವುದಿಲ್ಲ. ತುಂಬಾ ಹಾಸ್ಯಮಯವಾಗಿ, ಕೌತುಕಭರಿತವಾಗಿ ‘ಲಾಪತಾ ಲೇಡೀಸ್’ ಸಿನಿಮಾ ಸಾಗುತ್ತದೆ. ಮಾಮೂಲಿ ಸಿನಿಮಾಗಳಲ್ಲಿ ನೋಡಲು ಸಿಗದಂತಹ ಮುಗ್ಧವಾದ ಲವ್‌ಸ್ಟೋರಿ ಇದರಲ್ಲಿದೆ. ಮುಂದೇನಾಗುತ್ತದೆ ಎಂಬಂತಹ ಸಸ್ಪೆನ್ಸ್ ಕೊನೆಯ ಫ್ರೇಮ್ ತನಕ ಇದೆ. ತನ್ಮಯತೆಯಿಂದ ಸೆಳೆದುಕೊಳ್ಳುವಂತಹ ಹಿನ್ನೆಲೆ ಸಂಗೀತವಿದೆ. ಕಲಾವಿದರ ನಟನೆಗೆ ಫುಲ್ ಮಾರ್ಕ್ಸ್ ಸಿಗಬೇಕು. ಎಲ್ಲ ಕಲಾವಿದರು ತಮ್ಮ ಪಾತ್ರಗಳನ್ನು ಜೀವಿಸಿದ್ದಾರೆ.

ಸಂವೇದನಾಶೀಲ ಸಿನಿಮಾ:

ಇತ್ತೀಚಿನ ವರ್ಷಗಳಲ್ಲಿ ಹಿಂಸೆಯ ವೈಭವೀಕರಣದ ಜೊತೆ ಅಶ್ಲೀಲ ಸಂಭಾಷಣೆ ಮತ್ತು ಮಹಿಳೆಯರ ಅವಹೇಳನವೇ ತುಂಬಿರುವ ಕೀಳು ಅಭಿರುಚಿಯ ಸಿನಿಮಾಗಳು ಗೆದ್ದಿವೆ. ಆ ಮೂಲಕ ಒಂದು ಕೆಟ್ಟ ಉದಾಹರಣೆಯನ್ನು ಜನರ ಮುಂದಿಟ್ಟಿವೆ. ಇಂಥ ಸಂದರ್ಭದಲ್ಲಿ ನಿಜಕ್ಕೂ ಉತ್ತಮ ಮೌಲ್ಯಗಳು ಇರುವ ಸಿನಿಮಾಗಳು ಬೇಕಿವೆ. ‘ಲಾಪತಾ ಲೇಡೀಸ್’ ಸಿನಿಮಾ ಖಂಡಿತವಾಗಿಯೂ ಆ ಕೊರತೆಯನ್ನು ನೀಗಿಸುತ್ತದೆ. ಮಹಿಳೆಯರನ್ನು ತುಚ್ಛವಾಗಿ ಕಾಣುವ ಇತರೆ ಸಿನಿಮಾಗಳ ಎದುರಿನಲ್ಲಿ ‘ಲಾಪತಾ ಲೇಡೀಸ್’ ಸಿನಿಮಾ ‌ನಿಜವಾಗಿಯೂ ಮಹಿಳೆಯರ ಏಳಿಗೆಗಾಗಿ ಕೊಡುಗೆ ನೀಡುತ್ತದೆ. ಸ್ತ್ರೀಯರ ಮನಸ್ಸಿಗೆ ಒಂದು ಬಗೆಯ ಧೈರ್ಯ, ಆತ್ಮವಿಶ್ವಾಸವನ್ನು ತುಂಬುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ.

ಇದನ್ನೂ ಓದಿ: Shakhahaari Review: ‘ಶಾಖಾಹಾರಿ’ ಸಿನಿಮಾದಲ್ಲಿ ಹಲವು ಟ್ವಿಸ್ಟ್​; ರಂಗಾಯಣ ರಘು ಬೆಸ್ಟ್​

ಕಿರಣ್​ ರಾವ್​ಗೆ ಮೆಚ್ಚುಗೆ:

‘ಲಾಪತಾ ಲೇಡೀಸ್’ ಸಿನಿಮಾದಲ್ಲಿ ಉತ್ತರ ಭಾರತದ ಹಳ್ಳಿಯ ಕಹಾನಿ ಕಥೆ. ಅದಕ್ಕೆ ತಕ್ಕಂತೆಯೇ ರಿಯಲ್​ ಲೊಕೇಷನ್​ಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಇಡೀ ಸಿನಿಮಾ ತುಂಬ ರಿಯಲಿಸ್ಟಿಕ್​ ಆಗಿ ಮೂಡಿಬಂದಿದೆ. ಮೆಲೋಡ್ರಾಮಾ ಇದ್ದರೂ ಅತಿರೇಕ ಕಾಣಿಸುವುದಿಲ್ಲ. ರಾಮ್​ ಸಂಪತ್​ ಅವರ ಸಂಗೀತದಿಂದ ಸಿನಿಮಾದ ತೂಕ ಹೆಚ್ಚಿದೆ. ‘ಸಜನಿ..’ ಹಾಡಿನಲ್ಲಿ ಕಾಡುವ ಗುಣ ಇದೆ. ಮಹಿಳಾಪ್ರಧಾನವಾದ ಸಂವೇದನಾಶೀಲ ಕಥೆ ಈ ಸಿನಿಮಾದಲ್ಲಿ ಇದ್ದರೂ ಕೂಡ ಮನರಂಜನೆಯ ಗುಣವನ್ನು ಈ ಸಿನಿಮಾ ಕಳೆದುಕೊಂಡಿಲ್ಲ. ನಗಿಸಿ, ಅಳಿಸಿ, ಆಲೋಚನೆಗೆ ಪ್ರೇರಣೆ ನೀಡಿ ಆವರಿಸಿಕೊಳ್ಳುವಂತಹ ಸಿನಿಮಾವನ್ನು ನಿರ್ದೇಶಕಿ ಕಿರಣ್​ ರಾವ್​ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್