ಮಗನಿಗೆ ನೋವಾಗದ ರೀತಿಯಲ್ಲಿ ಸಂಸಾರದ ಸಮಸ್ಯೆ ಪರಿಹರಿಸಿಕೊಂಡ ಆಮಿರ್ ಖಾನ್-ಕಿರಣ್ ರಾವ್
ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದಾನೆ. ಆತನಿಗೆ ಈಗ 12 ವರ್ಷ ವಯಸ್ಸು. ಪುತ್ರನ ಮನಸ್ಸಿಗೆ ನೋವು ಆಗಬಾರದು ಎಂಬ ಕಾರಣದಿಂದ ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ತಮ್ಮ ವಿಚ್ಛೇದನ ವಿಚಾರವನ್ನು ರಂಪಾಟ ಮಾಡಿಲ್ಲ. ‘ಲಾಪತಾ ಲೇಡೀಸ್’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಈ ಕುರಿತು ಮಾಜಿ ದಂಪತಿ ಮಾತನಾಡಿದ್ದಾರೆ.
ನಟ ಆಮಿರ್ ಖಾನ್ (Aamir Khan) ಮತ್ತು ನಿರ್ದೇಶಕಿ ಕಿರಣ್ ರಾವ್ ಅವರು ವಿಚ್ಛೇದನ ಪಡೆದಾಗ ಅವರ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಯಾಕೆಂದರೆ, ಬಹಳ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದ ಅವರು ಹೀಗೆ ಡಿವೋರ್ಸ್ ಪಡೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸಾಮಾನ್ಯವಾಗಿ ಡಿವೋರ್ಸ್ ವಿಚಾರ ಬಂದಾಗ ಪತಿ-ಪತ್ನಿ ಸಾಕಷ್ಟು ಕಿತ್ತಾಟ ನಡೆಸುತ್ತಾರೆ. ಪರಸ್ಪರ ಮುಖ ನೋಡಿಕೊಳ್ಳಲಾಗದ ಸ್ಥಿತಿಗೆ ಅವರ ಜಗಳ ತಲುಪುತ್ತದೆ. ಆದರೆ ಕಿರಣ್ ರಾವ್ (Kiran Rao) ಮತ್ತು ಆಮಿರ್ ಖಾನ್ ಅವರು ಆ ರೀತಿ ಕಿತ್ತಾಡಿಲ್ಲ. ಸಂಸಾರದ ಸಮಸ್ಯೆಯನ್ನು ಅವರು ತುಂಬ ಕೂಲ್ ಆಗಿ ಬಗೆಹರಿಸಿಕೊಂಡಿದ್ದು ಪುತ್ರ ಆಜಾದ್ ರಾವ್ ಖಾನ್ (Azaad Rao Khan) ಸಲುವಾಗಿ!
ದಂಪತಿ ಡಿವೋರ್ಸ್ ಪಡೆದಾಗ ಅದರಿಂದ ಹೆಚ್ಚು ಸಮಸ್ಯೆ ಆಗುವುದು ಮಕ್ಕಳಿಗೆ. ಅಪ್ಪ-ಅಮ್ಮ ಬೇರಾಗಿದ್ದಕ್ಕೆ ಮಕ್ಕಳಿಗೆ ಏಕಾಏಕಿ ಅನಾಥ ಪ್ರಜ್ಞೆ ಕಾಡುತ್ತದೆ. ಇನ್ನೂ ಆ ವಿಚ್ಛೇದನದ ನಡುವೆ ಜಗಳ ನಡೆದರೆ ಮಕ್ಕಳ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆ ರೀತಿ ಆಗಬಾರದು ಎಂದು ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ತಮ್ಮ ನಡುವಿನ ಮನಸ್ತಾಪಗಳನ್ನು ಇಟ್ಟುಕೊಂಡು ರಂಪಾಟ ಮಾಡಿಲ್ಲ.
ಇದನ್ನೂ ಓದಿ: ‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು?’: ಮಾಜಿ ಪತ್ನಿಯ ಪ್ರತಿಕ್ರಿಯೆ ಕೇಳಿದ ಆಮಿರ್ ಖಾನ್
ವಿಚ್ಛೇದನ ಪಡೆದ ಸಂದರ್ಭದಲ್ಲಿ ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಅಚ್ಚರಿ ಏನೆಂದರೆ, ಈಗ ಇಬ್ಬರೂ ಒಟ್ಟೊಟ್ಟಿಗೆ ಮಾಧ್ಯಮಗಳು ಎದುರು ಕುಳಿತು ತಮ್ಮ ಡಿವೋರ್ಸ್ ವಿಚಾರವನ್ನು ಚರ್ಚೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ‘ಲಾಪತಾ ಲೇಡೀಸ್’ ಸಿನಿಮಾ. ಮಾರ್ಚ್ 1ರಂದು ಬಿಡುಗಡೆ ಆಗಲಿರುವ ಈ ಸಿನಿಮಾಗೆ ಕಿರಣ್ ರಾವ್ ನಿರ್ದೇಶನ ಮಾಡಿದ್ದಾರೆ. ಆಮಿರ್ ಖಾನ್ ಬಂಡವಾಳ ಹೂಡಿದ್ದಾರೆ. ಸಿನಿಮಾದ ಪ್ರಚಾರದಲ್ಲಿ ಇಬ್ಬರೂ ಒಟ್ಟಿಗೆ ಭಾಗಿ ಆಗುತ್ತಿದ್ದಾರೆ.
‘ನಮ್ಮಿಬ್ಬರ ವಿಚ್ಛೇದನದಿಂದ ಮಗನಿಗೆ ಯಾವುದೇ ರೀತಿಯಲ್ಲೂ ನೋವಾಗಬಾರದು ಎಂದು ನಾವು ನಿರ್ಧರಿಸಿದ್ದೆವು. ನಮ್ಮ ಡಿವೋರ್ಸ್ ಆಗಿದ್ದು ಕೊವಿಡ್ ಸಂದರ್ಭದಲ್ಲಿ. ಅದರಿಂದ ನಮಗೆ ಸಹಾಯ ಆಯಿತು. ಯಾಕೆಂದರೆ, ತುಂಬ ದಿನಗಳ ಕಾಲ ನಾವು ಒಂದೇ ಮನೆಯಲ್ಲಿ ಇದ್ದೆವು. ಹಾಗಾಗಿ ವಿಚ್ಛೇದನದ ಬಳಿಕವೂ ಹೆಚ್ಚೇನೂ ಬದಲಾವಣೆ ಎನಿಸಲಿಲ್ಲ. ಈಗಲೂ ಒಟ್ಟಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ’ ಎಂದು ಕಿರಣ್ ರಾವ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.