ಮುಂದಿನ ಹತ್ತು ವರ್ಷಗಳ ಯೋಜನೆ ತಿಳಿಸಿದ ಆಮಿರ್ ಖಾನ್
Aamir Khan: ಟಿವಿ9 ಆಯೋಜಿಸಿದ್ದ ‘ವಾಟ್ ಇಂಡಿಯಾ ಥಿಂಕ್ ಟುಡೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಆಮಿರ್ ಖಾನ್, ತಮ್ಮ ವೃತ್ತಿ ಜೀವನದ ಮುಂದಿನ 10 ವರ್ಷಗಳ ಯೋಜನೆ ಬಗ್ಗೆ ಮಾತನಾಡಿದ್ದಾರೆ.
ಟಿವಿ9 ಆಯೋಜಿಸಿದ್ದ ‘ವಾಟ್ ಇಂಡಿಯಾ ಥಿಂಕ್ ಟುಡೆ’ ಕಾರ್ಯಕ್ರಮದಲ್ಲಿ ಮಂಗಳವಾರ ಆಮಿರ್ ಖಾನ್ (Aamir Khan) ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಭಾಗಿಯಾಗಿ ಹಲವು ವಿಷಯಗಳನ್ನು ಮಾತನಾಡಿದರು. ತಮ್ಮ ವಿಚ್ಛೇದನ, ವಿಚ್ಛೇದನದ ಬಳಿಕವೂ ಒಟ್ಟಿಗೆ ಕೆಲಸ ಮಾಡುತ್ತಿರುವುದು, ತಮ್ಮ ಗೆಳೆತನ, ಮಕ್ಕಳು ಇನ್ನಿತರೆ ವಿಷಯಗಳ ಜೊತೆಗೆ ಆಮಿರ್ ಖಾನ್ ತಮ್ಮ ವೃತ್ತಿ ಜೀವನದ ಭವಿಷ್ಯದ ಬಗ್ಗೆಯೂ ಕೆಲವು ವಿಷಯಗಳನ್ನು ಹಂಚಿಕೊಂಡರು.
ಆಮಿರ್ ಖಾನ್ ಸಿನಿಮಾ ಮಾಡಲು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಆಮಿರ್ ನಟಿಸಿದ ಕಳೆದ ಸಿನಿಮಾ ‘ಲಾಲ್ ಸಿಂಗ್ ಚಡ್ಡ’ ಧಾರುಣ ಸೋಲು ಕಂಡಿದೆ. ಈ ಧಾರುಣ ಸೋಲಿನಿಂದ ಆಮಿರ್ ಖಾನ್ ಕೆಲವು ಪಾಠಗಳನ್ನು ಕಲಿತಂತಿದ್ದಾರೆ. ತಮ್ಮ ವೃತ್ತಿ ಜೀವನದ ಯೋಜನೆಗಳ ಬಗ್ಗೆ ಟಿವಿ9 ‘ವಾಟ್ ಇಂಡಿಯಾ ಥಿಂಕ್ ಟುಡೆ’ ಕಾರ್ಯಕ್ರಮದಲ್ಲಿ ಮಾತನಾಡಿರುವ ಆಮಿರ್ ಖಾನ್, ‘ಇನ್ನು ಮುಂದೆ ವರ್ಷಕ್ಕೆ ಒಂದು ಸಿನಿಮಾ ಮಾಡುವ ಯೋಜನೆ ಹಾಕಿಕೊಂಡಿದ್ದೇನೆ’ ಎಂದಿದ್ದಾರೆ.
ಮಾತ್ರವಲ್ಲದೆ ತಮ್ಮ ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಸಿನಿಮಾ ನಿರ್ಮಾಣ ಸಂಸ್ಥೆಯ ಮೂಲಕ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡಲು ಉದ್ದೇಶಿಸಿರುವುದಾಗಿಯೂ ಹೇಳಿದ್ದಾರೆ. ಅದರಲ್ಲಿಯೂ ತಮ್ಮ ನಿರ್ಮಾಣ ಸಂಸ್ಥೆಯು ಹೊಸ ಪ್ರತಿಭಾವಂತ ನಟ-ನಟಿಯರಿಗೆ ಹಾಗೂ ತಂತ್ರಜ್ಞರಿಗೆ ವೇದಿಕೆ ಕಲ್ಪಿಸುವಂತೆ ನೋಡಿಕೊಳ್ಳುವ ಇರಾದೆ ಹೊಂದಿರುವುದಾಗಿಯೂ ಆಮಿರ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ:ಆಮಿರ್ ಖಾನ್ ಸಿನಿಮಾ ನಿರ್ಮಾಪಕನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಆಮಿರ್ ಖಾನ್ ನಿರ್ಮಾಣ ಸಂಸ್ಥೆಯಿಂದ ‘ಲಾಪತಾ ಲೇಡೀಸ್’ ಸಿನಿಮಾ ನಿರ್ಮಿಸಲಾಗಿದೆ. ಸಿನಿಮಾವನ್ನು ಕಿರಣ್ ರಾವ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಐಐಎಂನ ವಿದ್ಯಾರ್ಥಿಗಳೊಟ್ಟಿಗೆ ಸಿನಿಮಾವನ್ನು ಆಮಿರ್ ಖಾನ್ ವೀಕ್ಷಿಸಿದರು. ಸಿನಿಮಾ ನೋಡಿದ ಹಲವರು ಸಿನಿಮಾ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಇನ್ನು ಆಮಿರ್ ಖಾನ್ ‘ಸಿತಾರೆ ಜಮೀನ್ ಪರ್’ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಜೆನಿಲಿಯಾ ನಾಯಕಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಇದರ ಹೊರತಾಗಿ ಹೊಸ ಕತೆಯೊಂದನ್ನು ಆಮಿರ್ ಖಾನ್ ಕೇಳುತ್ತಿದ್ದು, ಅದು ರೆಟ್ರೊ ಸಿನಿಮಾ ಆಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ