ದಿಢೀರ್ ಕುಸಿಯಿತು ‘ಆರ್ಟಿಕಲ್ 370’ ಸಿನಿಮಾ ಕಲೆಕ್ಷನ್; 4 ದಿನಕ್ಕೆ ಗಳಿಸಿದ್ದೆಷ್ಟು?
ಮೂರನೇ ದಿನ ‘ಆರ್ಟಿಕಲ್ 370’ ಸಿನಿಮಾ 10 ಕೋಟಿ ರೂಪಾಯಿ ಗಳಿಸಿತ್ತು. ಆದರೆ ನಾಲ್ಕನೇ ದಿನ ಕೇವಲ 3.25 ಕೋಟಿ ರೂಪಾಯಿಗೆ ಕಲೆಕ್ಷನ್ ಕುಸಿದಿದೆ. ಯಾಮಿ ಗೌತಮ್ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ರಾಜಕೀಯದ ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ಮೂಡಿಬಂದಿದೆ. ‘ಆರ್ಟಿಕಲ್ 370’ ಸಿನಿಮಾದ ಬಾಕ್ಸ್ ಆಫೀಸ್ ವಿವರ ಇಲ್ಲಿದೆ..
ಪ್ರಿಯಾಮಣಿ, ಯಾಮಿ ಗೌತಮ್ (Yami Gautam), ಅರುಣ್ ಗೋವಿಲ್ ಮೊದಲಾದವರು ನಟಿಸಿದ ‘ಆರ್ಟಿಕಲ್ 370’ ಸಿನಿಮಾದ ಕಲೆಕ್ಷನ್ (Article 370 Movie Collection) ನಾಲ್ಕನೇ ದಿನಕ್ಕೆ ಕುಸಿದಿದೆ. ಮೊದಲ ಮೂರು ದಿನ ಉತ್ತಮವಾಗಿ ಪ್ರದರ್ಶನ ಕಂಡ ಈ ಸಿನಿಮಾ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆಗಲು ಹೆಣಗಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ‘ಆರ್ಟಿಕಲ್ 370’ (Article 370 Movie) ಕಲೆಕ್ಷನ್ ಇನ್ನೂ ಕಡಿಮೆ ಆಗುವ ಸಾಧ್ಯತೆ ಕಾಣಿಸಿದೆ. ಈ ಸಿನಿಮಾಗೆ ಆದಿತ್ಯ ಸುಹಾನ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈವರೆಗೆ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಮಾಡಿದ ಕಲೆಕ್ಷನ್ ಬಗ್ಗೆ ಇಲ್ಲಿದೆ ಮಾಹಿತಿ…
‘ಆರ್ಟಿಕಲ್ 370’ ಸಿನಿಮಾದಲ್ಲಿ ದೇಶಭಕ್ತಿ ಕಥಾಹಂದರ ಇದೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ನೈಜ ಘಟನೆಗಳ ಆಧರಿತ ಸಿನಿಮಾ ಆದ್ದರಿಂದ ಪ್ರೇಕ್ಷಕರು ಆಸಕ್ತಿ ತೋರಿಸುತ್ತಾರೆ ಎಂಬುದು ಚಿತ್ರತಂಡದ ಭರವಸೆ ಆಗಿತ್ತು. ಅದಕ್ಕೆ ತಕ್ಕಂತೆಯೇ ಮೊದಲ ಮೂರು ದಿನ ಚೆನ್ನಾಗಿ ಕಲೆಕ್ಷನ್ ಆಯಿತು. ಆದರೆ ನಾಲ್ಕನೇ ದಿನದಿಂದ ಕುಸಿತ ಕಾಣಿಸಿದೆ.
ಇದನ್ನೂ ಓದಿ: ‘ಆರ್ಟಿಕಲ್ 370’ ಸಿನಿಮಾದಲ್ಲಿ ಮಿಂಚಿದ ನಟಿ ಯಾಮಿ ಗೌತಮ್
ಸಿನಿಮಾ ನೋಡಿದ ಒಂದು ವರ್ಗದ ಪ್ರೇಕ್ಷಕರು ಹಾಗೂ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 23ರಂದು ಈ ಸಿನಿಮಾ ಬಿಡುಗಡೆ ಆಯಿತು. ಅಂದು ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾಗೆ 6.12 ಕೋಟಿ ರೂಪಾಯಿ ಗಳಿಕೆ ಆಯಿತು. ಫೆ.24ರಂದು 9.08 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. 3ನೇ ದಿನವಾದ ಫೆ.25ರಂದು ಭರ್ಜರಿ ಏರಿಕೆ ಆಯಿತು. ಅಂದು 10.25 ಕೋಟಿ ರೂಪಾಯಿ ಹರಿದು ಬಂತು. ಆದರೆ ಮರುದಿನ (ಫೆ.26) ಕೇವಲ 3.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಆ ಮೂಲಕ ಗಣನೀಯವಾಗಿ ಕಲೆಕ್ಷನ್ ಕುಸಿದಿದೆ. 4 ದಿನಕ್ಕೆ ಒಟ್ಟು 28 ಕೋಟಿ ರೂಪಾಯಿ ಆಗಿದೆ.
‘ರಾಮಾಯಣ’ ಸೀರಿಯಲ್ ಖ್ಯಾತಿಯ ನಟ ಅರುಣ್ ಗೋವಿಲ್ ಅವರು ಈ ಸಿನಿಮಾದಲ್ಲಿ ನರೇಂದ್ರ ಮೋದಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಲುಕ್ ನೋಡಿದ ಪ್ರೇಕ್ಷಕರಿಗೆ ಅಚ್ಚರಿ ಆಗಿದೆ. ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕೆಲವರು ಅಪಸ್ವರ ತೆಗೆದಿದ್ದರು. ಆದರೆ ಅಂಥವರ ಮಾತಿಗೆ ಕಿವಿಗೊಡದೇ ಸಿನಿಮಾ ಮುಗಿಸಿದ್ದಾಗಿ ಯಾಮಿ ಗೌತಮ್ ಅವರು ಹೇಳಿಕೊಂಡಿದ್ದರು. ಭಾನುವಾರದ ಕಲೆಕ್ಷನ್ ನೋಡಿ ಅವರು ಖುಷಿಪಟ್ಟಿದ್ದರು. ಆದರೆ ನಾಲ್ಕನೇ ದಿನಕ್ಕೆ ಕಲೆಕ್ಷನ್ ಕುಸಿದಿದ್ದು ಮುಂದೇನಾಗುತ್ತದೆ ಎಂಬ ಚಿಂತೆ ಚಿತ್ರತಂಡದವರಿಗೆ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.