ಮುದ್ದುಲಕ್ಷ್ಮೀ ಧಾರಾವಾಹಿ ಕಡೆಯಿಂದ ಕಹಿಸುದ್ದಿಯೊಂದು ಹೊರಬಿದ್ದಿದೆ. ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದ ನಟ ಚರಿತ್ ಬಾಳಪ್ಪ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇದಕ್ಕೆ ಅವರು ಕೊವಿಡ್ ಕಾರಣ ನೀಡಿದ್ದಾರೆ. ಇತ್ತೀಚೆಗೆ ಈ ಧಾರಾವಾಹಿ 1000 ಕಂತುಗಳನ್ನು ಪೂರೈಸಿತ್ತು. ಹೀಗಿರುವಾಗಲೇ ಅವರು ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎನ್ನುವ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಕೊರೊನಾದಿಂದ ಪರಿಸ್ಥಿತಿ ತುಂಬಾನೇ ಕೆಟ್ಟದಾಗುತ್ತಿದೆ. ಹೀಗಾಗಿ ನಾನು ಮುದ್ದುಲಕ್ಷ್ಮೀ ಧಾರಾವಾಹಿಯಿಂದ ಹೊರ ಬರುತ್ತಿದ್ದೇನೆ. ಜಗತ್ತು ಮತ್ತೆ ಮೊದಲಿನಂತಾಗಲಿ. ನನಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ಎಂದು ಚರಿತ್ ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಮಂಗಳೂರು ಮೂಲದವರಾದ ಚರಿತ್ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದರು. ನಟನೆಯ ತುಡಿತ ಹೆಚ್ಚಿದ್ದರಿಂದ ಕೆಲಸವನ್ನು ತೊರೆದು ಅವರು ಬಣ್ಣದ ಲೋಕಕ್ಕೆ ಬಂದರು. ಮುದ್ದುಲಕ್ಷ್ಮೀ ಧಾರಾವಾಹಿಗೂ ಮೊದಲು ಅವರು ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು.
ಚರಿತ್ ಮುದ್ದುಲಕ್ಷ್ಮೀ ಧಾರಾವಾಹಿಯಲ್ಲಿ ನಾಯಕ ಧ್ರುವಂತ್ ಪಾತ್ರಕ್ಕೆ ಜೀವ ತುಂಬಿದ್ದರು. ಧ್ರುವಂತ್ ವೃತ್ತಿಯಲ್ಲಿ ವೈದ್ಯ. ಆತ ಸೌಂದರ್ಯವತಿ ಅಲ್ಲದ ಹೆಣ್ಣನ್ನು ಪ್ರೀತಿಸಿ ಮದುವೆ ಆಗುತ್ತಾನೆ. ನಂತರ ಅವರ ಜೀವನದಲ್ಲಿ ಏನೆಲ್ಲ ಆಗುತ್ತದೆ ಎಂಬುದು ಈ ಧಾರಾವಾಹಿಯ ಕಥೆ. ಹೀರೋ ಪಾತ್ರಕ್ಕೆ ನೆಗೆಟಿವ್ ಶೇಡ್ ಇತ್ತು. ಈ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು.
ಕೊರೊನಾ ವೈರಸ್ ದೇಶದಲ್ಲಿ ಮಿತಿಮೀರಿ ಹೆಚ್ಚುತ್ತಿದೆ. ಇಂದು ಒಂದೇ ದಿನ 4 ಲಕ್ಷ ಕೇಸ್ಗಳು ಭಾರತದಲ್ಲಿ ವರದಿಯಾಗಿದೆ. ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ಶೂಟಿಂಗ್ ನಿಲ್ಲಿಸಲಾಗಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅವರು ಧಾರಾವಾಹಿಯಿಂದ ಹೊರ ಬಂದಿರುವುದು ಅನೇಕರು ಸರಿ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹೊಸ ಮೈಲಿಗಲ್ಲು ಸೃಷ್ಟಿಸಿದ ಅನಿರುದ್ಧ-ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿ
ಬೀದಿಗೆ ಬಂತು ಶ್ರೀಕೃಷ್ಣ ಧಾರಾವಾಹಿ ನಟನ ಬದುಕು; ಕಣ್ಣೀರಿಟ್ಟ ಸುನಿಲ್ ನಗರ್