ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ (Naga Chaitanya) ಅವರ ಜೀವನದ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಈಗಂತೂ ಅವರ ಖಾಸಗಿ ವಿಚಾರವೇ ಹೆಚ್ಚು ಚರ್ಚೆ ಆಗುತ್ತಿದೆ. ದಾಂಪತ್ಯ ಜೀವನಕ್ಕೆ ಅವರು ಅಂತ್ಯ ಹಾಡಿ ಹಲವು ತಿಂಗಳುಗಳೇ ಕಳೆದಿವೆ. ಸಮಂತಾ ರುತ್ ಪ್ರಭುಗೆ (Samantha Ruth Prabhu) ಅವರು ಡಿವೋರ್ಸ್ ನೀಡಿದ್ದು ಯಾಕೆ ಎಂಬುದು ಇನ್ನೂ ಗೌಪ್ಯವಾಗಿಯೇ ಉಳಿದಿದೆ. ಆ ಬಗ್ಗೆ ಅವರು ಸರಿಯಾಗಿ ಏನನ್ನೂ ಬಾಯಿ ಬಿಡುತ್ತಿಲ್ಲ. ಈಗ ನಾಗ ಚೈತನ್ಯ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ತುಂಟತನದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಹೈದರಾಬಾದ್ನಲ್ಲಿ ಹುಡುಗಿಯೊಬ್ಬಳಿಗೆ ಕದ್ದು ಮುಚ್ಚಿ ಕಿಸ್ (Kiss) ಮಾಡಲು ಹೋದಾಗ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದ ವಿಚಾರವನ್ನು ನಾಗ ಚೈತನ್ಯ ಒಪ್ಪಿಕೊಂಡಿದ್ದಾರೆ.
ಸಮಂತಾ ರುತ್ ಪ್ರಭು ಜೊತೆ ನಾಗ ಚೈತನ್ಯ ಪ್ರೀತಿಯಲ್ಲಿ ಬೀಳುವುದಕ್ಕೂ ಮುನ್ನವೇ ಈ ಥರ ಒಂದು ಘಟನೆ ನಡೆದಿತ್ತು. ಕಾರಿನ ಹಿಂಬದಿ ಸೀಟಿಯಲ್ಲಿ ನಾಗ ಚೈತನ್ಯ ಅವರು ಹುಡುಗಿ ಜೊತೆ ಕುಳಿತಿದ್ದರು. ಬಹಳ ರೊಮ್ಯಾಂಟಿಕ್ ಆದಂತಹ ಆ ಸಂದರ್ಭದಲ್ಲಿ ಇಬ್ಬರ ನಡುವೆ ಆತ್ಮೀಯತೆ ಹೆಚ್ಚುತ್ತಿತ್ತು. ಹುಡುಗಿಗೆ ನಾಗ ಚೈತನ್ಯ ಮುತ್ತುಗಳ ಮಳೆ ಸುರಿಸುತ್ತಿದ್ದರು. ಈ ವೇಳೆ ಅವರು ಪೊಲೀಸರ ಕಣ್ಣಿಗೆ ಬಿದ್ದಿದ್ದರು!
ಇಷ್ಟು ಮಾತ್ರ ಹೇಳಿ, ಇನ್ನುಳಿದ ವಿವರಗಳನ್ನು ನಾಗ ಚೈತನ್ಯ ಬಿಟ್ಟುಕೊಟ್ಟಿಲ್ಲ. ಆ ಹುಡುಗಿ ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿಯೇ ಉಳಿದಿದೆ. ಸಮಂತಾ ರುತ್ ಪ್ರಭು ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಬಳಿಕ ನಾಗ ಚೈತನ್ಯ ಬದುಕಿನಲ್ಲಿ ಮಹಿಳೆಯರ ಆಕರ್ಷಣೆ ಹೆಚ್ಚಿದೆಯೇ? ಈ ಪ್ರಶ್ನೆ ಕೂಡ ಸಂದರ್ಶನದಲ್ಲಿ ಎದುರಾಯಿತು. ಅದಕ್ಕೆ ಉತ್ತರಿಸಿದ ಅವರು, ‘ಒಳ್ಳೆಯ ರೀತಿಯಲ್ಲಿ ಯಾವಾಗಲೂ ಮಹಿಳೆಯರು ನನ್ನ ಕಡೆಗೆ ಆಕರ್ಷಿತರಾಗುತ್ತಾರೆ. ಈ ರೀತಿ ಇರುವುದು ಖುಷಿ ಆಗುತ್ತದೆ’ ಎಂದು ನಾಗ ಚೈತನ್ಯ ಹೇಳಿದ್ದಾರೆ.
ವಿಚ್ಛೇದನದ ಬಳಿಕ ನಾಗ ಚೈತನ್ಯ ಅವರ ವೃತ್ತಿ ಜೀವನ ಹೇಳಿಕೊಳ್ಳುವಷ್ಟು ಏಳಿಗೆ ಕಂಡಿಲ್ಲ. ಅವರು ನಟಿಸಿದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಆಗಸ್ಟ್ 11ರಂದು ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಆಮಿರ್ ಖಾನ್ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಲು ಈ ಚಿತ್ರ ವಿಫಲವಾಗಿದೆ. ಆ ಸೋಲಿನ ಬೇಸರವನ್ನು ಬದಿಗಿಟ್ಟು ಅವರು ಮುಂದಿನ ಚಿತ್ರಗಳ ಕಡೆಗೆ ಗಮನ ಹರಿಸಲು ಸಜ್ಜಾಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.