ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ನಟಿಸಿರುವ ‘ಸಲಾರ್’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಡಿಸೆಂಬರ್ 22ರಂದು ಈ ಚಿತ್ರ ತೆರೆಕಾಣುತ್ತಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ದಕ್ಷಿಣ ಭಾರತದಲ್ಲಿ ಈ ಸಿನಿಮಾ ಅಬ್ಬರಿಸಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಹಿಂದಿ ಭಾಷೆಯ ಪ್ರಾಬಲ್ಯ ಇರುವ ಉತ್ತರ ಭಾರತದಲ್ಲಿ ‘ಸಲಾರ್’ (Salaar Movie) ಸದ್ದು ಕಡಿಮೆ ಆಗಬಹುದು ಎಂಬ ಗುಮಾನಿ ಮೂಡಿದೆ. ಅದಕ್ಕೆ ಕಾರಣ ಕೂಡ ಇದೆ. ಈ ಸಿನಿಮಾದಲ್ಲಿ ಹಿಂದಿ ಚಿತ್ರರಂಗದ ಯಾವುದೇ ಸ್ಟಾರ್ ಕಲಾವಿದರು ನಟಿಸಿಲ್ಲ. ಅಲ್ಲದೇ ‘ಡಂಕಿ’ (Dunki) ಸಿನಿಮಾದ ಪೈಪೋಟಿ ಕೂಡ ಜೋರಾಗಿ ಇರಲಿದೆ.
ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದಾಗ ಎಲ್ಲ ಭಾಷೆಯ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ತಂತ್ರಗಾರಿಕೆ ನಡೆಯುತ್ತದೆ. ಉತ್ತರ ಭಾರತದ ಪ್ರೇಕ್ಷಕರನ್ನು ಸೆಳೆಯಲು ಬಾಲಿವುಡ್ ನಟ-ನಟಿಯರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ರವೀನಾ ಟಂಡನ್, ಸಂಜಯ್ ದತ್ ನಟಿಸಿದ್ದರು. ‘ಆರ್ಆರ್ಆರ್’ ಸಿನಿಮಾದಲ್ಲಿ ಅಜಯ್ ದೇವಗನ್, ಆಲಿಯಾ ಭಟ್ ಅಭಿನಯಿಸಿದ್ದರು. ಆದರೆ ‘ಸಲಾರ್’ ವಿಚಾರದಲ್ಲಿ ಆ ರೀತಿ ಆಗಿಲ್ಲ.
‘ಸಲಾರ್’ ಸಿನಿಮಾದಲ್ಲಿ ಟಿನು ಆನಂದ್ ಹೊರತು ಪಡಿಸಿ ಬಾಲಿವುಡ್ನ ಬೇರೆ ಯಾವುದೇ ಕಲಾವಿದರು ನಟಿಸಿಲ್ಲ. ಹಾಗಾಗಿ ಹಿಂದಿ ಪ್ರೇಕ್ಷಕರು ಈ ಸಿನಿಮಾ ಮೇಲೆ ಎಷ್ಟರಮಟ್ಟಿಗೆ ಆಸಕ್ತಿ ತೋರಿಸುತ್ತಾರೆ ಎಂಬದನ್ನು ಕಾದುನೋಡಬೇಕು. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಕಲಾವಿದರೇ ತುಂಬಿಕೊಂಡಿದ್ದಾರೆ. ಪ್ರಭಾಸ್ ಜೊತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಮುಂತಾದವರು ನಟಿಸಿದ್ದಾರೆ.
Salaar Release Trailer: ‘ಸಲಾರ್’ 2ನೇ ಟ್ರೇಲರ್ನಿಂದ ಕುತೂಹಲ ಹೆಚ್ಚಿಸಿದ ಪ್ರಶಾಂತ್ ನೀಲ್, ಪ್ರಭಾಸ್
ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಡಿಸೆಂಬರ್ 21ರಂದು ಬಿಡಗಡೆ ಆಗಲಿದೆ. ಅದರ ಮರುದಿನವೇ ‘ಸಲಾರ್’ ತೆರೆಕಾಣಲಿದೆ. ಹಾಗಾಗಿ ಈ ಸಿನಿಮಾಗಳ ನಡುವೆ ದೊಡ್ಡ ಪೈಪೋಟಿ ಏರ್ಪಡಲಿದೆ. ‘ಡಂಕಿ’ ಸಿನಿಮಾಗೆ ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದಾರೆ. ಉತ್ತರ ಭಾರತದಲ್ಲಿ ಈ ಚಿತ್ರದ ಹವಾ ಹೆಚ್ಚಿದೆ. ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.