ಬಿಗ್ ಬಾಸ್ ರಿಯಾಲಿಟಿ ಶೋಗೆ ತನ್ನದೇ ಆದ ಪ್ರೇಕ್ಷಕರ ವರ್ಗ ಇದೆ. ಈ ಕಾರ್ಯಕ್ರಮ ಈಗ ಒಟಿಟಿಗೂ ಕಾಲಿಟ್ಟಿದೆ. ಕಳೆದ ವರ್ಷ ಮೊದಲ ಬಾರಿಗೆ ‘ಬಿಗ್ ಬಾಸ್ ಒಟಿಟಿ’ ಶೋ ಆರಂಭಿಸಲಾಯಿತು. ಈ ವರ್ಷ ಅದರ 2ನೇ ಸೀಸನ್ ಆರಂಭ ಆಗಿದೆ. ‘ಬಿಗ್ ಬಾಸ್ ಒಟಿಟಿ 2’ (Bigg Boss OTT 2) ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಅವರು ನಿರೂಪಣೆ ಮಾಡುತ್ತಿದ್ದಾರೆ. ಹಲವು ಸ್ಪರ್ಧಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಎರಡನೇ ವಾರದಲ್ಲಿ ಆಲಿಯಾ ಸಿದ್ಧಿಕಿ (Aaliya Siddiqui) ಅವರು ಔಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರ ಬಂದ ಬಳಿಕ ಈ ಕಾರ್ಯಕ್ರಮದ ನಿರೂಪಕರ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ. ನಿರೂಪಕ ಸಲ್ಮಾನ್ ಖಾನ್ (Salman Khan) ತುಂಬ ಪಕ್ಷಪಾತ ಮಾಡುತ್ತಾರೆ ಎಂದು ಆಲಿಯಾ ಸಿದ್ಧಿಕಿ ಆರೋಪಿಸಿದ್ದಾರೆ. ಇದೀಗ ಚರ್ಚೆಗೆ ಕಾರಣ ಆಗಿದೆ.
ಬಾಲಿವುಡ್ನ ಖ್ಯಾತ ನಟ ನವಾಜುದ್ದೀನ್ ಸಿದ್ಧಿಕಿ ಅವರ ಪತ್ನಿಯೇ ಆಲಿಯಾ ಸಿದ್ಧಿಕಿ. ಆದರೆ ಇಬ್ಬರ ನಡುವೆ ವೈಮನಸ್ಸು ಮೂಡಿದ್ದು, ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ. ಅವರಿಬ್ಬರ ಬಗ್ಗೆ ನೂರಾರು ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟ ಆಗಿವೆ. ತಮ್ಮ ನಿಜವಾದ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಜನರಿಗೆ ತಿಳಿಸುವ ಸಲುವಾಗಿ ಆಲಿಯಾ ಸಿದ್ಧಿಕಿ ಅವರು ಬಿಗ್ ಬಾಸ್ಗೆ ಹೋಗಿದ್ದರು. ಆದರೆ ಎರಡನೇ ವಾರದಲ್ಲೇ ಅವರನ್ನು ಎಲಿಮಿನೇಟ್ ಮಾಡಲಾಯಿತು. ಅದು ಆಲಿಯಾಗೆ ಸಖತ್ ಬೇಸರ ಮೂಡಿಸಿದೆ.
ಆಲಿಯಾ ಸಿದ್ಧಿಕಿ ಅವರು ತಮ್ಮ ಜೀವನದ ಘಟನೆಗಳ ಬಗ್ಗೆ ‘ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಮಾತನಾಡಲು ಆರಂಭಿಸಿದರು. ಆ ಮಾತುಕಥೆ ಮುಂದುವರಿದಿದ್ದರೆ ಹಲವು ಸತ್ಯಗಳು ಹೊರಬರುತ್ತಿದ್ದವು. ಅಷ್ಟರಲ್ಲಾಗಲೇ ಅವರನ್ನು ಎಲಿಮಿನೇಟ್ ಮಾಡಿ ಹೊರಗೆ ಕಳಿಸಲಾಗಿದೆ. ಇದರ ಹಿಂದೆ ಸಲ್ಮಾನ್ ಖಾನ್ ಅವರ ಪಕ್ಷಪಾತ ಇದೆ ಎಂಬುದು ಆಲಿಯಾ ಆರೋಪ. ‘ಸಲ್ಮಾನ್ ಖಾನ್ ಒಬ್ಬ ಸ್ಟಾರ್ ನಟನಾಗಿದ್ದು ತಮಗೆ ಆಪ್ತವಾಗಿರುವ ಸ್ಟಾರ್ಗಳನ್ನು ಅವರು ಬೆಂಬಲಿಸುತ್ತಾರೆ’ ಎಂದು ಆಲಿಯಾ ಹೇಳಿದ್ದಾರೆ.
ಇದನ್ನೂ ಓದಿ: Aaliya Siddiqui: ಹೊಸ ಬಾಯ್ಫ್ರೆಂಡ್ ಫೋಟೋ ಹಂಚಿಕೊಂಡ ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ; ಶೀಘ್ರದಲ್ಲೇ ಹೆಸರು ಬದಲಾವಣೆ
ನವಾಜುದ್ದೀನ್ ಸಿದ್ಧಿಕಿ ಮತ್ತು ಸಲ್ಮಾನ್ ಖಾನ್ ಅವರ ನಡುವೆ ಒಡನಾಟ ಇದೆ. ಆ ಕಾರಣದಿಂದಲೇ ಆಲಿಯಾ ಸಿದ್ಧಿಕಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ ಎಂದು ಒಂದು ವರ್ಗದ ನೆಟ್ಟಿಗರು ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಈ ಆರೋಪಗಳಿಗೆ ಸಲ್ಮಾನ್ ಖಾನ್ ಮತ್ತು ‘ಬಿಗ್ ಬಾಸ್ ಒಟಿಟಿ’ ಕಾರ್ಯಕ್ರಮದ ಆಯೋಜಕರು ಏನು ಹೇಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಈ ಶೋ ಪ್ರಸಾರ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.