‘ವೂಟ್ ಸೆಲೆಕ್ಟ್’ ಮೂಲಕ ಪ್ರಸಾರ ಆಗುತ್ತಿರುವ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋ ಹಲವು ಕಾರಣಕ್ಕೆ ಸುದ್ದಿ ಆಗುತ್ತಿದೆ. ಎಲ್ಲ ಸ್ಪರ್ಧಿಗಳು ಒಂದೊಂದು ರೀತಿಯಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಒಬ್ಬೊಬ್ಬರ ತಂತ್ರಗಾರಿಕೆ ಒಂದೊಂದು ರೀತಿ ಇದೆ. ಸರಿ ತಪ್ಪು ಏನೇ ಇದ್ದರೂ ಅಂತಿಮವಾಗಿ ಜನರ ವೋಟ್ ಮುಖ್ಯವಾಗುತ್ತದೆ. ವೈರಲ್ ಹುಡುಗಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬಿಗ್ ಬಾಸ್ ಮನೆಯಲ್ಲಿ ಹವಾ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ ಎಂಬುದು ನಿಜ. ಆದರೆ ಮನೆಯೊಳಗೆ ಅವರ ಆಟದ ವೈಖರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆ ಕಾರಣದಿಂದಲೇ ಅವರಿಗೆ ಜನರು ವೋಟ್ ಮಾಡುತ್ತಿದ್ದಾರೆ. ಸೋನು ಶ್ರೀನಿವಾಸ್ ಗೌಡ ಮಸ್ತ್ ಮನರಂಜನೆ ನೀಡುತ್ತಾರೆ ಎಂಬುದನ್ನು ಬಿಗ್ ಬಾಸ್ (Bigg Boss Kannada) ಮನೆಯೊಳಗಿನ ಸ್ಪರ್ಧಿಗಳು ಕೂಡ ಒಪ್ಪಿಕೊಂಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋ ಮುಗಿದ ಬಳಿಕ ಟಿವಿಯಲ್ಲಿ ‘ಬಿಗ್ ಬಾಸ್ ಕನ್ನಡ’ 9ನೇ ಸೀಸನ್ ಆರಂಭ ಆಗಲಿದೆ. ಒಟಿಟಿಯಲ್ಲಿ ಇರುವ ಕೆಲವು ಸ್ಪರ್ಧಿಗಳು ಟಿವಿ ಆವೃತ್ತಿಗೂ ಎಂಟ್ರಿ ಪಡೆಯಲಿದ್ದಾರೆ. ಅಂಥ ಅರ್ಹತೆ ಯಾರಿಗೆಲ್ಲ ಇದೆ ಎಂದು ಈ ವಾರದ ಪಂಚಾಯಿತಿಯಲ್ಲಿ ಸುದೀಪ್ ಪ್ರಶ್ನಿಸಿದರು. ಆಗ ಬಹುತೇಕರು ಸೋನು ಶ್ರೀನಿವಾಸ್ ಗೌಡ ಹೆಸರನ್ನು ಹೇಳಿದರು.
‘ಸೋನು ಗೌಡ ಏನೂ ಮಾಡದಿದ್ದರೂ ಮನರಂಜನೆ ಸಿಗತ್ತೆ. ಅವಳು ಮಾತನಾಡಿದ್ರೇನೇ ಎಂಟರ್ಟೇನ್ಮೆಂಟ್ ಇರುತ್ತೆ’ ಎಂದು ರಾಕೇಶ್ ಅಡಿಗ ಹೇಳಿದರು. ‘ಊಟದಲ್ಲಿನ ಗರಂ ಮಸಾಲಾ ಥರ ಸೋನು’ ಎಂದಿದ್ದಾರೆ ಸೋಮಣ್ಣ ಮಾಚಿಮಾಡ. ‘ಸೋನುಗೆ ಎಲ್ಲಿ ಏನು ಮಾತನಾಡಬೇಕು ಅಂತ ಗೊತ್ತಾಗಲ್ಲ. ಅದೇ ಅವರಿಗೆ ಪ್ಲಸ್ ಆಗಿದೆ’ ಎಂಬುದು ಅಕ್ಷತಾ ಕುಕ್ಕಿ ಅಭಿಪ್ರಾಯ. ‘ಸೋನು ಆಲ್ ರೌಂಡರ್ ಇದ್ದಂತೆ. ಟಾಸ್ಕ್ ಮಾಡೋಕೂ ಸೈ, ಎಂಟರ್ಟೇನ್ಮೆಂಟ್ ನೀಡೋಕೂ ಜೈ. ಅವಳು ಇದ್ದ ಕಡೆ ಮಜಾ ಮತ್ತು ಒಳ್ಳೆಯ ಮಸಾಲಾ ಇರತ್ತೆ’ ಎಂದು ಸಾನ್ಯಾ ಅಯ್ಯರ್ ಹೇಳಿದ್ದಾರೆ.
‘ಸೋನು ಮನರಂಜನೆಯ ಪ್ಯಾಕೇಜ್ ಇದ್ದಂತೆ. ಅವಳ ವ್ಯಕ್ತಿತ್ವವೇ ಹಾಗಿದೆ. ಅವಳ ರೀತಿ ಯಾರೂ ಇರೋಕೆ ಆಗಲ್ಲ’ ಎಂದು ನಂದು ಹೇಳಿದ್ದಾರೆ. ‘ಸೋನು ಒಳಗಡೆ ಒಂದು ಹೋರಾಟ ಇದೆ’ ಎಂಬುದು ಜಶ್ವಂತ್ ಅನಿಸಿಕೆ. ಎಲ್ಲರಿಂದ ಈ ಪರಿ ಮೆಚ್ಚುಗೆ ಬಂದಿದ್ದಕ್ಕೆ ಸೋನು ಶ್ರೀನಿವಾಸ್ ಗೌಡ ಹಿರಿ ಹಿರಿ ಹಿಗ್ಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.