ಶುರುವಿನಲ್ಲೇ ಅನೇಕ ಟ್ವಿಸ್ಟ್ಗಳನ್ನು ಪಡೆದುಕೊಳ್ಳುತ್ತ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಮೊದಲ ಸೀಸನ್ ಸಾಗುತ್ತಿದೆ. ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟು ಕೆಲವೇ ಗಂಟೆಗಳು ಕಳೆಯುತ್ತಿದ್ದಂತೆಯೇ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಮೊದಲ ವಾರ ಯಾರು ಹೊರಗೆ ಹೋಗಬೇಕು ಎಂಬ ಚರ್ಚೆ ಆರಂಭ ಆಗಿದೆ. ವಾಡಿಕೆಯಂತೆ ಸ್ಪರ್ಧಿಗಳೆಲ್ಲರೂ ಒಂದಷ್ಟು ಹೆಸರನ್ನು ಗೌಪ್ಯವಾಗಿ ಬಿಗ್ ಬಾಸ್ಗೆ ಸೂಚಿಸಿದ್ದಾರೆ. ಆ ಪೈಕಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಹೆಸರು ಕೂಡ ಇದೆ. ಹಾಗಾದರೆ ಅವರು ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರ ನಡೆಯುತ್ತಾರಾ ಎಂಬ ಕೌತುಕ ಮೂಡಿದೆ. ಸೋನು ಆಯ್ಕೆ ಆಗಿರುವ ಬಗ್ಗೆ ನೆಟ್ಟಿಗರಿಗೆ ಅಸಮಾಧಾನ ಇದೆ. ಅವರು ಬೇಗ ಎಲಿಮಿನೇಟ್ ಆಗಲಿ ಎಂದು ತುಂಬ ಜನರು ಕಮೆಂಟ್ ಮಾಡುತ್ತಿದ್ದಾರೆ. ಈಗ ಅವರು ನಾಮಿನೇಟ್ ಆಗಿರುವುದರಿಂದ ಬಿಗ್ ಬಾಸ್ (Bigg Boss) ಒಟಿಟಿ ಮೊದಲ ವಾರದ ಎಪಿಸೋಡ್ಗಳು ಬಹಳ ಕುತೂಹಲ ಹುಟ್ಟುಹಾಕಿವೆ.
ಸೋನು ಶ್ರೀನಿವಾಸ್ ಗೌಡ ಸೇರಿದಂತೆ ಒಟ್ಟು 8 ಜನರು ಮೊದಲ ವಾರವೇ ನಾಮಿನೇಟ್ ಆಗಿದ್ದಾರೆ. ಸ್ಫೂರ್ತಿ ಗೌಡ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯಾ, ನಂದಿನಿ, ಜಶ್ವಂತ್, ಕಿರಣ್ ಯೋಗೇಶ್ವರ್ ಮತ್ತು ಅಕ್ಷತಾ ಕುಕ್ಕಿ ಅವರ ಮೇಲೆ ಎಲಿಮಿನೇಷನ್ ಕತ್ತಿ ತೂಗುತ್ತಿದೆ. ಈ ಪೈಕಿ ಯಾರು ಬಿಗ್ ಬಾಸ್ ಮನೆಯಿಂದ ಮೊದಲು ಹೊರಬರುತ್ತಾರೆ ಎಂದು ತಿಳಿಯಲು ವೀಕೆಂಡ್ ಎಪಿಸೋಡ್ ನೋಡಬೇಕು.
ಇನ್ನುಳಿದ ಸ್ಪರ್ಧಿಗಳಾದ ಚೈತ್ರಾ ಹಳ್ಳಿಕೇರಿ, ಅರ್ಜುನ್ ರಮೇಶ್, ಲೋಕೇಶ್, ಸೋಮಣ್ಣ ಮಾಚಿಮಾಡ, ರಾಕೇಶ್ ಅಡಿಗ, ಸಾನ್ಯಾ ಐಯ್ಯರ್, ಉದಯ್ ಸೂರ್ಯ, ರೂಪೇಶ್ ಶೆಟ್ಟಿ ಸದ್ಯಕ್ಕೆ ಸೇಫ್ ಆಗಿದ್ದಾರೆ. ನಾಮಿನೇಟ್ ಆಗಿರುವವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಚ್ಚು ಶ್ರಮ ಹಾಕಬೇಕು. ಕಡಿಮೆ ಸಮಯದಲ್ಲಿಯೇ ವೀಕ್ಷಕರಿಂದ ಹೆಚ್ಚ ವೋಟ್ ಪಡೆಯಲು ಪ್ರಯತ್ನಿಸಬೇಕು.
ಕನ್ನಡದಲ್ಲಿ ಇದೇ ಮೊದಲ ಸಲ ‘ಬಿಗ್ ಬಾಸ್ ಒಟಿಟಿ’ ಶುರುವಾಗಿದೆ. ‘ವೂಟ್ ಸೆಲೆಕ್ಟ್’ ಮೂಲಕ ಈ ಶೋ ಪ್ರಸಾರ ಆಗುತ್ತಿದೆ. ಇದು ವೀಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ. ಟಿವಿಗೆ ಹೋಲಿಸಿದರೆ ಇಲ್ಲಿ ಒಂದಷ್ಟು ಬದಲಾವಣೆಗಳು ಎದುರಾಗುವ ಸಾಧ್ಯತೆ ಇದೆ. ದಿನ 24 ಗಂಟೆಯೂ ಸ್ಪರ್ಧಿಗಳ ಚಟುವಟಿಕೆಯನ್ನು ವೀಕ್ಷಿಸಲು ‘ವೂಟ್ ಸೆಲೆಕ್ಟ್’ ಚಂದಾದಾರರಿಗೆ ಅವಕಾಶ ಇದೆ. ಪ್ರತಿದಿನ ಸಂಜೆ 7 ಗಂಟೆಗೆ ಹೈಲೈಟ್ಸ್ ಎಪಿಸೋಡ್ ಪ್ರಸಾರ ಆಗಲಿದೆ.