ಆನ್ಲೈನ್ ಪ್ಲಾಟ್ಫಾರಂ ವಿಚಾರಗಳ ಬಗ್ಗೆ ಕಳೆದ ಕೆಲವು ವಾರಗಳಿಂದ ಜೋರಾದ ಚರ್ಚೆಗಳು ನಡೆಯುತ್ತಿವೆ. ಅಶ್ಲೀಲತೆ, ಕ್ರೌರ್ಯ, ಕೆಟ್ಟ ಪದಬಳಕೆ ಇಂತಹ ವಿಷಯಗಳಿಂದ ಆಕ್ಷೇಪಾರ್ಹವಾಗಿ ಕಂಡಿರುವ ಆನ್ಲೈನ್ ವೇದಿಕೆಗಳಿಗೆ ಕೇಂದ್ರವು ನಿಬಂಧ ಹೇರುವ ಆಲೋಚನೆಯಲ್ಲಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಈ ಬಗ್ಗೆ ಹಲವು ಕೇಸ್ಗಳ ವಿಚಾರಣೆ ನಡೆಯುತ್ತಿದೆ. ಭಾರತದಲ್ಲಿ ಒಟ್ಟು ಸುಮಾರು ಹದಿನೈದು OTT ವೇದಿಕೆಗಳಿದ್ದು, ಈವರೆಗೆ ಯಾವುದೇ ನಿರ್ಬಂಧಗಳನ್ನು ಅವು ಹೊಂದಿಲ್ಲ.
ಪ್ರಸ್ತುತ A Suitable Boy ಎಂಬ ನೆಟ್ಫ್ಲಿಕ್ಸ್ ಸರಣಿಯ ಕಿಸ್ಸಿಂಗ್ ದೃಶ್ಯ ಹೊಸ ವಿವಾದ ಸೃಷ್ಟಿಸಿದ್ದು, ಬ್ಯಾನ್ ನೆಟ್ಫ್ಲಿಕ್ಸ್ ಎಂಬ ಅಭಿಯಾನವೇ ಶುರುವಾಗುವಂತೆ ಮಾಡಿದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಆನ್ಲೈನ್ ವೇದಿಕೆಗಳ ನಿರ್ಬಂಧ ವಿಚಾರಕ್ಕೆ ಇದೀಗ ತುಪ್ಪ ಸುರಿದಂತಾಗಿದೆ.
ತಜ್ಞರು ಏನು ಹೇಳುತ್ತಾರೆ?
ಈ ಬಗ್ಗೆ ಟಿವಿ9 ಫೇಸ್ಬುಕ್ ನೇರಪ್ರಸಾರ ಕಾಯರ್ಕ್ರಮದಲ್ಲಿ ಮಾತನಾಡಿರುವ ಬೆಂಗಳೂರು ಹೈಕೋರ್ಟ್ ನ್ಯಾಯವಾದಿ, ಅಜಿತ್ ಅಚ್ಚಪ್ಪ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಮೊದಲು ತಾವು ಸ್ವಯಂ ನಿರ್ಬಂಧ ಹೇರಿಕೊಳ್ಳುವ ಬಗ್ಗೆ ಇಂಟರ್ನೆಟ್ ಹಾಗೂ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಹೇಳಿತ್ತು.
ಆದರೆ ಸ್ವಯಂ ನಿಯಂತ್ರಣವನ್ನು ಅವುಗಳು ಕಳೆದುಕೊಂಡರೆ ಸರ್ಕಾರ ಮಧ್ಯಪ್ರವೇಶಿಸಿ ನಿರ್ಬಂಧ ಹೇರುವುದು ಅನಿವಾರ್ಯವಾಗುತ್ತದೆ ಎಂದ ಅವರು ಈಗೀಗ ಮಕ್ಕಳೂ ಮೊಬೈಲ್ ಹಿಡಿಯುತ್ತಿದ್ದಾರೆ, ಅವರನ್ನು ನಾವು ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಈ ಬಗ್ಗೆ ಸಚಿವರು, ಆಡಳಿತ ವರ್ಗದವರು ಚರ್ಚಿಸಿ ಕ್ರಮ ಕೈಗೊಳ್ಳಬೇಕು. ತಜ್ಞರ ಸಮಿತಿಯನ್ನು ರಚಿಸಬೇಕು ಎಂಬ ಆಶಯ ವ್ಯಕ್ತಪಡಿಸಿ, ಸರ್ಕಾರಕ್ಕೆ ಹೆಚ್ಚು ಅಧಿಕಾರ ಕೊಟ್ಟು ಪ್ರಜಾಪ್ರಭುತ್ವಕ್ಕೆ ತೊಂದರೆ ಆದಂತೆಯೂ ಆಗಬಾರದು ಎಂದಿದ್ದಾರೆ.
ಪರಿಣಾಮಕಾರಿ ನಿರ್ಬಂಧ ಬೇಕು
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ OTT ವೇದಿಕೆಗಳಿಗೆ ಪರಿಣಾಮಕಾರಿ ನಿರ್ಬಂಧಗಳನ್ನು ಅಳವಡಿಸಬೇಕೆಂದು ಹೇಳಿದ ಅಜಿತ್, ಸಿನಿಮಾಟೊಗ್ರಫಿ ಆಕ್ಟ್ ಅನ್ವಯ U, UA, A ಎಂಬ ಪ್ರಮಾಣ ಪತ್ರ ನೀಡಲಾಗುತ್ತದೆ. ಅದರಂತೆ OTT ವೇದಿಕೆಗೂ ನಿರ್ಬಂಧ ಬೇಕು ಎಂದಿದ್ದಾರೆ. OTT ವೇದಿಕೆಗಳಲ್ಲಿ 13+, 18+ ಎಂಬ ವಿಭಾಗ ಇದ್ದರೂ ಆ ನಿರ್ಬಂಧ ಪ್ರಾಯೋಗಿಕವಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ಪ್ರತಿಭೆಗಳಿಗೆ ವೇದಿಕೆ ಕೊಟ್ಟಿವೆ
OTT ಹೊಸ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ಒದಗಿಸಿಕೊಟ್ಟಿದೆ. ಆದರೆ ಅದನ್ನು ಹೇಗೆ ಉಪಯೋಗಿಸುತ್ತೇವೆ ಎಂಬುದು ನಮಗೆ ಬಿಟ್ಟ ವಿಚಾರ. ಸ್ವಾತಂತ್ರ್ಯ ಇದೆ ಎಂದು ದುರ್ಬಳಕೆ ಮಾಡಬಾರದು. ಮನರಂಜನೆಯ ಜೊತೆಗೆ ಜನರಿಗೆ ಒಳ್ಳೆಯ ಸಂದೇಶವನ್ನು ಕೊಡಬೇಕು ಎಂದು ಮತ್ತೋರ್ವ ಅತಿಥಿ ನಟಿ ಭವ್ಯಾ ತಿಳಿಸಿದ್ದಾರೆ.
Published On - 7:02 pm, Wed, 25 November 20