‘ಹನುಮಾನ್ ಅಂಶ್’ ಸಿನಿಮಾಗೆ 100 ಕೋಟಿ ರೂ. ಒಟಿಟಿ ಆಫರ್ ಬಂದಿದ್ದು ನಿಜವೇ? ಇಲ್ಲಿದೆ ಸ್ಪಷ್ಟನೆ

ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 230 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ನಡುವೆ ಚಿತ್ರದ ಒಟಿಟಿ ವ್ಯವಹಾರದ ಬಗ್ಗೆ ಇಂಟರೆಸ್ಟಿಂಗ್ ವಿಷಯ ಕೇಳಿಬಂದಿದೆ. ಆ ಬಗ್ಗೆ ನಿರ್ಮಾಪಕಿ ರಾಗಿಣಿ ಸೋನಾ ಪ್ರತಿಕ್ರಿಯಿಸಿದ್ದಾರೆ.

‘ಹನುಮಾನ್ ಅಂಶ್’ ಸಿನಿಮಾಗೆ 100 ಕೋಟಿ ರೂ. ಒಟಿಟಿ ಆಫರ್ ಬಂದಿದ್ದು ನಿಜವೇ? ಇಲ್ಲಿದೆ ಸ್ಪಷ್ಟನೆ
Hanuman Ansh Still
Image Credit source: Swambhu Media Network

Updated on: Sep 14, 2026 | 7:16 AM

ಯಾವುದೇ ಸದ್ದಿಲ್ಲದೆ ಬಿಡುಗಡೆಯಾಗಿ, ಬಾಕ್ಸ್ ಆಫೀಸ್‌ನಲ್ಲಿ ಬಹುದೊಡ್ಡ ಇತಿಹಾಸ ಸೃಷ್ಟಿಸುತ್ತಿರುವ ‘ಹನುಮಾನ್ ಅಂಶ್’ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ವಿಶಾಲ್ ಚತುರ್ವೇದಿ ಅವರ ‘ಡಿವೈನ್ ಡಿಟೂರ್: ದಟ್ ಚೇಂಜ್ಡ್ ಮೈ ಲೈಫ್’ ಪುಸ್ತಕವನ್ನು ಆಧರಿಸಿ ತೆರೆಗೆ ತಂದಿರುವ ಈ ಚಿತ್ರವು ನೀಮ್ ಕರೋಲಿ ಬಾಬಾ ಅವರ ಪ್ರಭಾವ ಹಾಗೂ ಪವಾಡದ ಸುತ್ತ ಸಾಗುತ್ತದೆ. ಶೋಭಿನಾವ್ ಸತ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ, ಈಗ ದೇಶಾದ್ಯಂತ ಭಾರಿ ಚರ್ಚೆಯಲ್ಲಿದೆ. ಈ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಒಂದು ವದಂತಿ ಹಬ್ಬಿದೆ.

ಆಗಸ್ಟ್ 7ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟ ‘ಹನುಮಾನ್ ಅಂಶ್’ ಚಿತ್ರವು ಮೊದಲ ಎರಡು ವಾರಗಳ ಕಾಲ ತೀರಾ ಸಾಧಾರಣ ಪ್ರದರ್ಶನ ಕಂಡಿತ್ತು. ಆದರೆ, ಪ್ರೇಕ್ಷಕರ ಬಾಯಿ ಮಾತಿನ ಪ್ರಚಾರ ಹಾಗೂ ಸಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಚಿತ್ರದ ಕಲೆಕ್ಷನ್ ಹಠಾತ್ ಏರಿಕೆ ಕಂಡಿದೆ. ಇದರ ಬೆನ್ನಲ್ಲೇ, ಈ ಸಿನಿಮಾ ದೊಡ್ಡ ಮಟ್ಟದ ಒಟಿಟಿ ಡೀಲ್ ಪಡೆದುಕೊಂಡಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಲು ಪ್ರಾರಂಭಿಸಿದ್ದವು. ಪ್ರಮುಖ ಡಿಜಿಟಲ್ ಪ್ಲಾಟ್‌ಫಾರ್ಮ್‌ವೊಂದು ಈ ಚಿತ್ರಕ್ಕೆ 100 ಕೋಟಿ ರೂಪಾಯಿ ಆಫರ್ ನೀಡಿದೆ ಎಂಬ ವದಂತಿಗಳಿಗೆ ಈಗ ಚಿತ್ರದ ನಿರ್ಮಾಪಕಿ ರಾಗಿಣಿ ಸೋನಾ ಸ್ಪಷ್ಟನೆ ನೀಡಿದ್ದಾರೆ.

100 ಕೋಟಿ ರೂಪಾಯಿ ಒಟಿಟಿ ಡೀಲ್ ಕೇವಲ ವದಂತಿ:

ಒಟಿಟಿ ಒಪ್ಪಂದದ ಕುರಿತು ಹಬ್ಬಿರುವ ಸುದ್ದಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ನಿರ್ಮಾಪಕಿ ರಾಗಿಣಿ ಸೋನಾ, ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ‘ಇದೆಲ್ಲವೂ ಬರೀ ಸುಳ್ಳು ಸುದ್ದಿ. ದಯವಿಟ್ಟು ಇಂತಹ ವದಂತಿಗಳಿಗೆ ಕಿವಿಗೊಡಬೇಡಿ. ಇಂದಿನ ದಿನಗಳಲ್ಲಿ ಎಷ್ಟು ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ ಎಂಬುದು ಮುಖ್ಯವೇ ಹೊರತು, ನಮಗೆ ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ಎಷ್ಟು ದೊಡ್ಡ ಆಫರ್ ಬಂದಿದೆ ಎಂಬುದರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಪ್ರೇಕ್ಷಕರು ಚಿತ್ರಮಂದಿರಗಳಲ್ಲಿಯೇ ಸಿನಿಮಾ ನೋಡಿ ಹಾರೈಸಬೇಕು ಎಂಬುದು ನಮ್ಮ ಆಸೆ’ ಎಂದು ರಾಗಿಣಿ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ‘ಪ್ರೇಕ್ಷಕರೇ ಈ ಚಿತ್ರಕ್ಕೆ ನಿಜವಾದ ಪ್ರಚಾರಕರು. ನಾನು ನನ್ನ ಜೀವನದಲ್ಲೇ ಇಂತಹ ಪವಾಡವನ್ನು ಎಲ್ಲೂ ಕಂಡಿಲ್ಲ, ಕೇಳಿಲ್ಲ. ಇದೆಲ್ಲವೂ ನೀಮ್ ಕರೋಲಿ ಬಾಬಾ ಅವರ ಪವಾಡವೇ ಸರಿ’ ಎಂದು ಭಾವುಕರಾಗಿ ನುಡಿದರು. ಚಿತ್ರದ ಡಿಜಿಟಲ್ ಹಕ್ಕುಗಳ ಮಾರಾಟದ ಕುರಿತು ತಂಡವು ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಆಸ್ಕರ್ ರೇಸ್‌ನಿಂದ ‘ಹನುಮಾನ್ ಅಂಶ್’ ಹೊರಗೆ: ಅವಕಾಶ ತಪ್ಪಿದ್ದಕ್ಕೆ ಕಾರಣ ತಿಳಿಸಿದ ನಿರ್ಮಾಪಕಿ

ಹನುಮಾನ್ ಅಂಶ್ ಯಾವಾಗ ಒಟಿಟಿಗೆ ಬರಲಿದೆ?

‘ಬಾಕ್ಸ್ ಆಫೀಸ್ ಅಂಕಿ-ಅಂಶಗಳು ಬರುತ್ತವೆ ಮತ್ತು ಹೋಗುತ್ತವೆ. ನಮ್ಮ ತಂಡದ ಪರವಾಗಿ ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನಮಗೆ ಯಾವುದೇ 100 ಕೋಟಿಯ ಆಫರ್ ಬಂದಿಲ್ಲ. ಅಂತಹ ಆಫರ್‌ಗಳ ಅಗತ್ಯವೂ ನಮಗಿಲ್ಲ. ಮುಂದಿನ ದಿನಗಳಲ್ಲಿ ಒಟಿಟಿ ಬಿಡುಗಡೆ ಕುರಿತು ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ತಂಡದ ಜೊತೆ ಚರ್ಚಿಸಿ ಅಧಿಕೃತವಾಗಿ ತಿಳಿಸುತ್ತೇವೆ. ಸಿನಿಮಾ ಒಟಿಟಿಗೆ ಯಾವಾಗ ಬರಲಿದೆ ಎಂಬುದು ನಮಗೂ ತಿಳಿದಿಲ್ಲ. ಆದ್ದರಿಂದ ಎಲ್ಲರೂ ಚಿತ್ರಮಂದಿರಗಳಲ್ಲೇ ಬಂದು ಸಿನಿಮಾ ವೀಕ್ಷಿಸಿ’ ಎಂದು ನಿರ್ಮಾಪಕಿ ರಾಗಿಣಿ ಸೋನಾ ಅವರು ಮನವಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us