ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನಲ್ಲಿ ಹಲವು ಇಂಟರೆಸ್ಟಿಂಗ್ ಘಟನೆಗಳು ನಡೆಯುತ್ತಿವೆ. ಇಷ್ಟು ದಿನ ನಂದಿನಿ ಮತ್ತು ಜಶ್ವಂತ್ ಬೋಪಣ್ಣ (Jashwanth Bopanna) ಬಿಗ್ ಬಾಸ್ ಮನೆಯಲ್ಲಿ ಜೋಡಿಯಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಆದರೆ ಐದನೇ ವಾರದ ಎಲಿಮಿನೇಷನ್ನಲ್ಲಿ (Bigg Boss Elimination) ನಂದಿನಿ ಔಟ್ ಆದರು. ಆ ಬಳಿಕ ಜಶ್ವಂತ್ ಅವರು ಸಾನ್ಯಾ ಅಯ್ಯರ್ ಜತೆ ಹೆಚ್ಚು ಆಪ್ತತೆ ಬೆಳೆಸಿಕೊಂಡಿದ್ದಾರೆ. ಇದು ಮನೆಮಂದಿಯ ಗಮನಕ್ಕೆ ಬಂದಿದೆ. ವೀಕ್ಷಕರು ಕೂಡ ಇದನ್ನು ಗಮನಿಸಿದ್ದಾರೆ. ಅಷ್ಟೇ ಅಲ್ಲದೇ, ಬಿಗ್ ಬಾಸ್ ನಡೆಸಿಕೊಡುವ ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ಸೂಪರ್ ಸಂಡೇ ವಿತ್ ಸುದೀಪ್’ ಎಪಿಸೋಡ್ನಲ್ಲಿ ಇದರ ಬಗ್ಗೆ ಮಾತುಕತೆ ಆಗಿದೆ. ಜಶ್ವಂತ್ ಮತ್ತು ಸಾನ್ಯಾ (Sanya Iyer) ಹತ್ತಿರ ಆಗುತ್ತಿದ್ದಂತೆಯೇ ರೂಪೇಶ್ ಅವರು ಯಾಕೋ ಟೆನ್ಷನ್ ಮಾಡಿಕೊಂಡಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಜಶ್ವಂತ್ ಬೋಪಣ್ಣ ಮತ್ತು ನಂದಿನಿ ಅವರು ರಿಯಲ್ ಲೈಫ್ನಲ್ಲಿಯೂ ಪ್ರೇಮಿಗಳು. ಅವರು ಜೋಡಿ ಸ್ಪರ್ಧಿಗಳಾಗಿಯೇ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋಗೆ ಕಾಲಿಟ್ಟಿದ್ದರು. ಆದರೆ ಎರಡನೇ ವಾರದಿಂದ ಅವರಿಬ್ಬರು ಪ್ರತ್ಯೇಕ ಸ್ಪರ್ಧಿಗಳಾಗಿ ಮುಂದುವರಿಯಬೇಕು ಎಂದು ಬಿಗ್ ಬಾಸ್ ಕಡೆಯಿಂದ ಆದೇಶ ಬಂತು. ಹಾಗಿದ್ದರೂ ಕೂಡ ಪ್ರೇಮಿಗಳು ಎಂಬ ಕಾರಣಕ್ಕೆ ಹೆಚ್ಚಾಗಿ ಅವರಿಬ್ಬರು ಜೊತೆಯಲ್ಲೇ ಇರುತ್ತಿದ್ದರು.
ದಿನ ಕಳೆಯುತ್ತಿದ್ದಂತೆಯೇ ಜಶ್ವಂತ್ ಅವರು ಸಾನ್ಯಾ ಅಯ್ಯರ್ ಜೊತೆ ಹೆಚ್ಚು ಮಾತನಾಡಲು ಆರಂಭಿಸಿದರು. ಅದರಿಂದ ನಂದಿನಿಗೆ ಕಸಿವಿಸಿ ಆಗುತ್ತಿತ್ತು. ತಮಗೆ ಜಶ್ವಂತ್ ಹೆಚ್ಚು ಸಮಯ ನೀಡುತ್ತಿಲ್ಲ ಎಂದು ನಂದಿನಿ ಆಗಾಗ ತಕರಾರು ತೆಗೆಯಲು ಶುರುಮಾಡಿದ್ದರು. ಇದರಿಂದ ಇಬ್ಬರ ನಡುವೆ ಯಾವಾಗಲೂ ಜಗಳ ಆಗುತ್ತಲೇ ಇತ್ತು. ಬಾಯ್ಫ್ರೆಂಡ್ ಜಶ್ವಂತ್ ವಿಚಾರದಲ್ಲಿ ನಂದಿನಿ ಹೆಚ್ಚು ಪೊಸೆಸಿವ್ ಎಂಬುದು ಇಡೀ ಮನೆಗೆ ಗೊತ್ತಾಯಿತು. ಈಗ ನಂದಿನಿ ಔಟ್ ಆಗಿದ್ದು, ಜಶ್ವಂತ್ ಅವರು ಸಾನ್ಯಾ ಜೊತೆ ಸಲುಗೆ ಹೆಚ್ಚಿಸಿಕೊಂಡಿದ್ದಾರೆ.
ನಂದಿನಿ ಮನೆಯಲ್ಲಿ ಇದ್ದಷ್ಟು ದಿನ ಸಾನ್ಯಾ ಅವರು ಜಶ್ವಂತ್ಗಿಂತಲೂ ಹೆಚ್ಚಾಗಿ ರೂಪೇಶ್ ಶೆಟ್ಟಿ ಜೊತೆ ಇರುತ್ತಿದ್ದರು. ಆದರೆ ನಂದಿನಿ ಹೋದ ಬಳಿಕ ರೂಪೇಶ್ ಮತ್ತು ಸಾನ್ಯಾ ನಡುವೆ ಜಶ್ವಂತ್ ಬಂದಿದ್ದಾರೆ. ಇದರಿಂದ ರೂಪೇಶ್ಗೆ ಟೆನ್ಷನ್ ಹೆಚ್ಚಾಗಿದೆ ಎನಿಸುತ್ತಿದೆ. ಇಂಥ ಹಲವು ಸಂಗತಿಗಳ ನಡುವೆ, ಅಂತಿಮವಾಗಿ ಯಾರು ‘ಬಿಗ್ ಬಾಸ್ ಕನ್ನಡ ಒಟಿಟಿ’ ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.