‘ಬ್ಲಿಂಕ್’ ಸಿನಿಮಾ ಪೈರಸಿ ಕಾಪಿ ನೋಡಿದ್ರಾ? QR ಕೋಡ್ ಹಾಕಿ ವಿಶೇಷ ಮನವಿ ಮಾಡಿದ ನಿರ್ಮಾಪಕ

|

Updated on: May 11, 2024 | 5:44 PM

ಶ್ರೀನಿಧಿ ಬೆಂಗಳೂರು ‘ಬ್ಲಿಂಕ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರವಿಚಂದ್ರ ಎ.ಜೆ. ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ್ ದೇಶಪಾಂಡೆ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಲೀಕ್ ಆದ ಬಗ್ಗೆ ರವಿಚಂದ್ರ ಅವರು ವಿಡಿಯೋ ಮಾಡಿದ್ದಾರೆ. ಜೊತೆಗೆ ವಿಶೇಷ ಮನವಿ ಮಾಡಿದ್ದಾರೆ.

‘ಬ್ಲಿಂಕ್’ ಸಿನಿಮಾ ಪೈರಸಿ ಕಾಪಿ ನೋಡಿದ್ರಾ? QR ಕೋಡ್ ಹಾಕಿ ವಿಶೇಷ ಮನವಿ ಮಾಡಿದ ನಿರ್ಮಾಪಕ
ಬ್ಲಿಂಕ್
Follow us on

ಕನ್ನಡ ಸಿನಿಮಾಗಳನ್ನು ಪ್ರೇಕ್ಷಕರು ನೋಡುತ್ತಿಲ್ಲ ಎನ್ನುವ ಆರೋಪ ಇತ್ತೀಚೆಗೆ ಜೋರಾಗಿದೆ. ‘ಬ್ಲಿಂಕ್’ ಹೆಸರಿನ ಸಿನಿಮಾ ಮಾರ್ಚ್ 8ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ವಿಮರ್ಶಕರಿಂದ ಸಿನಿಮಾ ಮೆಚ್ಚಗೆ ಪಡೆಯಿತು. ಆದರೆ, ಅಂದುಕೊಂಡಷ್ಟು ಜನರು ಸಿನಿಮಾ ನೋಡಿಲ್ಲ. ಇದು ತಂಡದ ಬೇಸರಕ್ಕೆ ಕಾರಣ ಆಗಿತ್ತು. ಒಂದೊಳ್ಳೆಯ ಪ್ರಯತ್ನವನ್ನು ತಂಡ ಬೆಂಬಲಿಸಿಲ್ಲ ಎನ್ನುವ ಕೊರಗು ತಂಡಕ್ಕೆ ಇದೆ. ಈ ಸಿನಿಮಾ ಅಮೆರಿಕ ಹಾಗೂ ಇಂಗ್ಲೆಂಡ್​ನಲ್ಲಿ ಅಮೇಜಾನ್ ಪ್ರೈಮ್ ವಿಡಿಯೋ (Amazon Prime Video) ಒಟಿಟಿ ಮೂಲಕ ಪ್ರಸಾರ ಕಾಣುತ್ತಿದೆ. ಹೀಗಾಗಿ ಕೆಲವರು ಇದನ್ನು ಎಚ್​ಡಿ ಗುಣಮಟ್ಟದಲ್ಲಿ ಲೀಕ್ ಮಾಡಿದ್ದಾರೆ. ಈ ಬಗ್ಗೆ ತಂಡ ಬೇಸರ ಹೊರಹಾಕಿದೆ.

ಶ್ರೀನಿಧಿ ಬೆಂಗಳೂರು ‘ಬ್ಲಿಂಕ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರವಿಚಂದ್ರ ಎ.ಜೆ. ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಚೈತ್ರಾ ಆಚಾರ್, ಗೋಪಾಲ್ ದೇಶಪಾಂಡೆ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ಟೈಮ್ ಟ್ರಾವೆಲ್ ಕಾನ್ಸೆಪ್ಟ್​ನ ಸಿನಿಮಾ ಹೊಂದಿದೆ. ಸಿನಿಮಾ ಲೀಕ್ ಆದ ಬಗ್ಗೆ ರವಿಚಂದ್ರ ಅವರು ವಿಡಿಯೋ ಮಾಡಿದ್ದಾರೆ. ಜೊತೆಗೆ ವಿಶೇಷ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Blink Movie Review: ಟೈಮ್​ ಟ್ರಾವೆಲ್​ ಮೂಲಕ ಸ್ಯಾಂಡಲ್​ವುಡ್​ಗೆ ಬಂದ ಈಡಿಪಸ್​ 

‘ನಾನು ರವಿಚಂದ್ರ, ಬ್ಲಿಂಕ್ ಚಿತ್ರದ ನಿರ್ಮಾಪಕ. ಸತತ 56 ದಿನಗಳ ಕಾಲ ಈ ಸಿನಿಮಾ ಥಿಯೇಟರ್​ನಲ್ಲಿ ಪ್ರಸಾರ ಕಂಡಿದೆ. ಈ ಚಿತ್ರವನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ನಮ್ಮ ಮೊದಲ ಪ್ರಯತ್ನಕ್ಕೆ ನೀವು ತೋರಿಸಿದ ಪ್ರೀತಿಗೆ ಥ್ಯಾಂಕ್ಸ್. ನಮ್ಮ ಸಿನಿಮಾ ಶೀಘ್ರವೇ ಪ್ರೈಮ್​ನಲ್ಲಿ ರಿಲೀಸ್ ಆಗಲಿದೆ’ ಎಂದು ರವಿಚಂದ್ರ ಅವರು ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಒಂದು ಬೇಸರದ ವಿಚಾರ ಕೂಡ ಹೇಳಿಕೊಂಡಿದ್ದಾರೆ.

‘ನಮ್ಮ ಸಿನಿಮಾದ ಎಚ್​ಡಿ ಗುಣಮಟ್ಟದ ವಿಡಿಯೋ ಲೀಕ್ ಆಗುತ್ತಿದೆ. ಆನ್​​ಲೈನ್​ನಲ್ಲಿ ಎಲ್ಲರೂ ಇದನ್ನು ನೋಡುತ್ತಿದ್ದಾರೆ. ಸಾಕಷ್ಟು ಲಿಂಕ್​ಗಳನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸಿದೆವು. ಆದರೆ, ಎಲ್ಲಾ ಲಿಂಕ್ ತೆಗೆಯಲು ಸಾಧ್ಯವಾಗುತ್ತಿಲ್ಲ. ಅಷ್ಟು ಜನರಾದರೂ ನಮ್ಮ ಸಿನಿಮಾ ನೋಡುತ್ತಿದ್ದಾರಲ್ಲ ಅನ್ನೋದು ಖುಷಿ. ನಾನು ಕ್ಯುಆರ್​ ಕೋಡ್​ನ ಹಾಕಿದ್ದೇನೆ. ಪೈರಸಿ ಕಾಪಿ ನೋಡಿದ ನಿಮಗೆ ಎಷ್ಟು ಹಣ ಕೊಡಬೇಕು ಅನಿಸುತ್ತದೆಯೋ ಅಷ್ಟು ಹಣವನ್ನು ಪೇ ಮಾಡಿ. ಕಷ್ಟಪಟ್ಟು ಸಿನಿಮಾ ಮಾಡಿರುತ್ತೇವೆ. ಪ್ರೈಮ್​ನಲ್ಲಿ ನೋಡದೇ ಪೈರೇಟೆಡ್ ಕಾಪಿ ನೋಡಿದ್ರೆ ನಮಗೆ ಇನ್ನೊಂದು ಸಿನಿಮಾ ಮಾಡಲು ಧೈರ್ಯ ಬರಲ್ಲ. ಸ್ವಲ್ಪ ದಿನ ಪ್ರೈಮ್​ನಲ್ಲಿ ಬರುತ್ತದೆ, ಅಲ್ಲಿಯೇ ಸಿನಿಮಾ ನೋಡಿ’ ಎಂದು ಅವರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.