ಒಂದಿಲ್ಲೊಂದು ಪ್ರಯೋಗಳನ್ನು ಮಾಡುವ ಮೂಲಕ ಮಲಯಾಳಂ ಸಿನಿಮಾ ಮಂದಿ ಗುರುತಿಸಿಕೊಂಡಿದ್ದಾರೆ. ಸ್ಟಾರ್ ಕಲಾವಿದರು ಕೂಡ ಇಂಥ ಪ್ರಯೋಗಗಳ ಭಾಗ ಆಗಿದ್ದಾರೆ. ಈಗ ‘ಮನೋರಥಂಗಳ್’ ವೆಬ್ ಸರಣಿಯಲ್ಲೂ ಅಂಥದ್ದೊಂದು ಪ್ರಯೋಗ ನಡೆದಿದೆ. ಇದೊಂದು ಕಥಾಸಂಕಲನದ ಸೀರಿಸ್ ಆಗಿದ್ದು, 9 ಕಥೆಗಳು ಇವೆ. ಇವುಗಳಿಗೆ 8 ಮಂದಿ ನಿರ್ದೇಶನ ಮಾಡಿದ್ದಾರೆ. ಮಲಯಾಳಂ ಚಿತ್ರರಂಗದ ಜನಪ್ರಿಯ ನಟ-ನಟಿಯರು ಈ ವೆಬ್ ಸಿರೀಸ್ನಲ್ಲಿ ಅಭಿನಯಿಸಿದ್ದಾರೆ. ಮೋಹನ್‌ಲಾಲ್, ಫಹಾದ್ ಫಾಸಿಲ್, ಮಮ್ಮುಟ್ಟಿ ಅವರಂತಹ ಖ್ಯಾತ ಕಲಾವಿದರು ಇದರಲ್ಲಿ ಇದ್ದಾರೆ.
ಇತ್ತೀಚೆಗೆ ನಿರ್ದೇಶಕ ಎಂ.ಟಿ. ವಾಸುದೇವನ್ ನಾಯರ್ ಜನ್ಮದಿನದ ಪ್ರಯುಕ್ತ ‘ಮನೋರಥಂಗಳ್’ ಟ್ರೇಲರ್ ಅನಾವರಣ ಮಾಡಲಾಯಿತು. ಈ ವೆಬ್ ಸರಣಿಯು ಆಗಸ್ಟ್ ತಿಂಗಳಲ್ಲಿ ಜೀ5 ಮೂಲಕ ರಿಲೀಸ್ ಆಗಲಿದೆ. ಇದರಲ್ಲಿ ನಟಿಸಿದ ಕಲಾವಿದರು ಮತ್ತು ಕಥೆಗಳ ಬಗ್ಗೆ ಮಾಹಿತಿ ಸಿಕ್ಕಿದೆ. ವಿಶೇಷ ಏನೆಂದರೆ, ಈ ಟ್ರೇಲರ್ನಲ್ಲಿ ಕಮಲ್ ಹಾಸನ್ ಕೂಡ ಕಾಣಿಸಿಕೊಂಡಿದ್ದಾರೆ. ಪಾರ್ವತಿ ತಿರುವೋತ್ತು, ಬಿಜು ಮೆನನ್, ಹರೀಶ್ ಉತ್ತಮನ್, ಶಾಂತಿ ಕೃಷ್ಣ, ಮಧು, ಜಾಯ್ ಮ್ಯಾಥ್ಯೂ, ಆಸಿಫ್ ಅಲಿ, ನದಿಯಾ, ಕೈಲಾಸ, ನೆಡುಮುಡಿ ವೇಣು, ಇಂದ್ರನ್ಸ್, ರಣಜಿ ಪಣಿಕ್ಕರ್, ಸಿದ್ದಿಕ್, ಇಂದ್ರಜಿತ್, ಇಶಿತ್ ಯಾಮಿನಿ, ನಾಸೀರ್, ಅಪರ್ಣಾ ಬಾಲಮುರಳಿ, ಸುರಭಿ ಲಕ್ಷ್ಮಿ ಅವರು ಇದರಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಅಣ್ಣಾವ್ರ ಹಾಡನ್ನು ಹಾಡಲು ಪ್ರಯತ್ನಿಸಿದ ಮಲಯಾಳಂ ನಟ ಮೋಹನ್‌ಲಾಲ್; ಇಲ್ಲಿದೆ ವಿಡಿಯೋ
ಈ ವೆಬ್ ಸರಣಿಯನ್ನು ‘ಜೀ5’ ನಿರ್ಮಾಣ ಮಾಡಿದೆ. ಆಗಸ್ಟ್ 15ರಂದು ಇದು ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಮಲಯಾಳಂ ಮಾತ್ರವಲ್ಲದೇ ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲೂ ಪ್ರಸಾರ ಆಗಲಿದೆ. ಮೋಹನ್‌ಲಾಲ್ ಅಭಿನಯಿಸಿರುವ, ಪ್ರಿಯದರ್ಶನ್ ನಿರ್ದೇಶನದ ‘ಒಲ್ಲವುಮ್ ತೀರವುಮ್’ ಕಥೆ ಕಪ್ಪು-ಬಿಳುಪಿನಲ್ಲಿ ಇರಲಿದೆ. ರಂಜಿತ್ ನಿರ್ದೇಶನದಲ್ಲಿ ‘ಕಾಡುಗನ್ನವ ಒರು ಯಾತ್ರೆ ಕುರಿಪ್ಪು’ ಕಥೆಯಲ್ಲಿ ಮಮ್ಮುಟ್ಟಿ ಅವರು ಅಭಿನಯಿಸಿದ್ದಾರೆ.
‘ಶಿಲಾಲಿಖಿತಂ’ ಕಥೆ ಕೂಡ ಪ್ರಿಯದರ್ಶನ್ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ಇದರಲ್ಲಿ ಬಿಜು ಮೆನನ್, ಶಾಂತಿಕೃಷ್ಣ ಹಾಗೂ ಜಾಯ್ ಮ್ಯಾಥ್ಯೂ ಅವರು ಅಭಿನಯಿಸಿದ್ದಾರೆ. ಶ್ಯಾಮಪ್ರಸಾದ್ ನಿರ್ದೇಶನ ಮಾಡಿರುವ ‘ಕಜ್ಚಾ’ ಕಥೆಯಲ್ಲಿ ಪಾರ್ವತಿ ತಿರುವೋತ್ತು ಹಾಗೂ ಹರೀಶ್ ಉತ್ತಮನ್ ಬಣ್ಣ ಹಚ್ಚಿದ್ದಾರೆ. ಮಾಧೂ ಹಾಗೂ ಆಸಿಫ್ ಅಲಿ ಅಭಿನಯಿಸಿರುವ ಕಥೆಗೆ ಅಶ್ವತಿ ನಾಯರ್ ಅವರ ನಿರ್ದೇಶನವಿದೆ.
ಫಹಾದ್ ಫಾಸಿಲ್ ಮತ್ತು ಜರೀನಾ ಜೋಡಿಯಾಗಿ ಕಾಣಿಸಿಕೊಂಡ ‘ಶರ್ಲಾಕ್’ ಕಥೆಗೆ ಅಭಿನವ ಮಹೇಶ್ ನಾರಾಯಣನ್ ಅವರು ನಿರ್ದೇಶನ ಮಾಡಿದ್ದಾರೆ. ಇಂದ್ರಜಿತ್ ಮತ್ತು ಅಪರ್ಣಾ ಬಾಲಮುರಳಿ ಅವರು ‘ಕಡಲ್‌ಕಾಟ್ಟು’ ಕಥೆಯಲ್ಲಿ ನಟಿಸಿದ್ದು, ರತೀಶ್ ಅಂಬಾಟ್ ನಿರ್ದೇಶಿಸಿದ್ದಾರೆ. ‘ಸ್ವರ್ಗಂ ತುರಕ್ಕುನ್ನ ಸಮಯ’ ಕಥೆಗೆ ಜಯರಾಜನ್ ನಾಯರ್ ನಿರ್ದೇಶನ ಮಾಡಿದ್ದಾರೆ. ಕೈಲಾಶ್, ನೆಡುಮುಡಿ ವೇಣು, ಇಂದ್ರನ್ಸ್, ಎಂ.ಜಿ. ಪಣಿಕ್ಕರ್, ಸುರಭಿ ಲಕ್ಷ್ಮಿ ಮುಂತಾದವರು ಇದರಲ್ಲಿ ನಟಿಸಿದ್ದಾರೆ. ಸಿದ್ಧಿಕ್, ಇಶಿತ್ ಯಾಮಿನಿ ಹಾಗೂ ನಜೀರ್ ಅವರು ‘ಅಭ್ಯಾಮ್ ತೀಡಿ ವೀಂದುಂ’ ಕಥೆಯಲ್ಲಿ ಅಭಿನಯಿಸಿದ್ದಾರೆ. ಸಂತೋಷ್ ಶಿವನ್ ಅವರು ನಿರ್ದೇಶನ ಈ ಕಥೆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.