ಪ್ರಮಾಣಪತ್ರ ಪಡೆಯದೇ ‘ಸತ್ಲುಜ್’ ಸಿನಿಮಾ ಬಿಡುಗಡೆ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆರೋಪ

ಜುಲೈ 5ರಂದು ZEE5 ಸಂಸ್ಥೆಯು ಭಾರತದಲ್ಲಿ ‘ಸತ್ಲುಜ್’ ಸಿನಿಮಾದ ಪ್ರಸಾರ ಸ್ಥಗಿತಗೊಳಿಸಿರುವುದನ್ನು ಖಚಿತಪಡಿಸಿದೆ. ಹನಿ ಟ್ರೆಹನ್ ನಿರ್ದೇಶನದ ಈ ಸಿನಿಮಾ ಬ್ಯಾನ್ ಆಗಿರುವ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಚಿತ್ರಕ್ಕೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಸಿನಿಮಾ ಪ್ರಸಾರಕ್ಕೆ ಮತ್ತೆ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಪ್ರಮಾಣಪತ್ರ ಪಡೆಯದೇ ‘ಸತ್ಲುಜ್’ ಸಿನಿಮಾ ಬಿಡುಗಡೆ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆರೋಪ
Satluj

Updated on: Jul 07, 2026 | 6:45 PM

ಮುಖ್ಯಾಂಶಗಳು

  • ಸೆನ್ಸಾರ್ ಪ್ರಮಾಣಪತ್ರ ಇಲ್ಲದೇ ಒಟಿಟಿಯಲ್ಲಿ ತೆರೆಕಂಡ ‘ಸತ್ಲುಜ್’.
  • 2022ರಲ್ಲಿ ಸೆನ್ಸಾರ್‌ಗೆ ಸಲ್ಲಿಸಿ, ಬಳಿಕ ಕೋರ್ಟ್ ಮೆಟ್ಟಿಲೇರಿದ್ದ ಚಿತ್ರತಂಡ.
  • ಒಟಿಟಿಯಲ್ಲಿ ನೇರವಾಗಿ ರಿಲೀಸ್ ಆದರೂ ಭಾರತದಲ್ಲಿ ಸ್ಟ್ರೀಮಿಂಗ್ ಸ್ಥಗಿತ.

ಖ್ಯಾತ ನಟ ದಿಲ್ಜಿತ್ ದೋಸಾಂಜ್ (Diljit Dosanjh) ಅಭಿನಯದ, ತೀವ್ರ ಕುತೂಹಲ ಮೂಡಿಸಿದ್ದ ‘ಸತ್ಲುಜ್’ (Satluj) ಸಿನಿಮಾ ವಿವಾದ ಈಗ ಹೊಸ ತಿರುವು ಪಡೆದುಕೊಂಡಿದೆ. ಅಗತ್ಯವಿರುವ ಸೆನ್ಸಾರ್ ಪ್ರಮಾಣಪತ್ರ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆಯೇ ಚಿತ್ರತಂಡ ಈ ಸಿನಿಮಾವನ್ನು ZEE5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (I&B Ministry) ಗಂಭೀರ ಆರೋಪ ಮಾಡಿದೆ. ಹನಿ ಟ್ರೆಹನ್ ನಿರ್ದೇಶನದ ಈ ಸಿನಿಮಾ ಜುಲೈ 3ರಂದು ಬಿಡುಗಡೆ ಆಗಿತ್ತು. ಆದರೆ ಆದಾದ ಕೇವಲ ಎರಡೇ ದಿನಗಳಲ್ಲಿ ಭಾರತದಲ್ಲಿ ಇದರ ಸ್ಟ್ರೀಮಿಂಗ್ ಸ್ಥಗಿತಗೊಳಿಸಲಾಗಿತ್ತು.

ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸೆನ್ಸಾರ್ ಮಂಡಳಿಯಿಂದ ತೊಂದರೆ ಎದುರಾದ ಕಾರಣ, ನಿಗದಿಪಡಿಸಿದ ನಿಯಮಗಳನ್ನು ಗಾಳಿಗೆ ತೂರಿ ಚಿತ್ರದ ನಿರ್ಮಾಪಕರು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ನಿಯಮ ಉಲ್ಲಂಘನೆ ಆರೋಪ

‘ಎಎನ್​ಐ’ ನ್ಯೂಸ್ ಏಜೆನ್ಸಿ ವರದಿಯ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಸತ್ಲುಜ್ ಸಿನಿಮಾಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಬೇಕಾದ ಯಾವುದೇ ಅಧಿಕೃತ ಪ್ರಮಾಣಪತ್ರ ಸಿಕ್ಕಿರಲಿಲ್ಲ. ಸೆನ್ಸಾರ್ ಪ್ರಕ್ರಿಯೆಗೆ ಒಳಪಡುವ ಬದಲು, ಚಿತ್ರದ ನಿರ್ಮಾಪಕರು ಸಿನಿಮಾದ ಹೆಸರನ್ನು ಬದಲಾಯಿಸಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಸರ್ಕಾರದಿಂದ ಯಾವುದೇ ಅನುಮತಿ ಪಡೆದಿಲ್ಲ:

ಈ ನಡೆ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಿಕೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳನ್ನು ಉಲ್ಲಂಘಿಸಿದೆ ಎಂದು ಸಚಿವಾಲಯ ಆರೋಪಿಸಿದೆ. ಆದರೆ ಯಾವ ನಿರ್ದಿಷ್ಟ ನಿಯಮ ಉಲ್ಲಂಘನೆಯಾಗಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಅಲ್ಲದೆ, ಒಟಿಟಿಯಲ್ಲಿ ಬಿಡುಗಡೆ ಮಾಡುವ ಮುನ್ನ ಸರ್ಕಾರದಿಂದ ಯಾವುದೇ ಅನುಮತಿ ಅಥವಾ ಮರುಪರಿಶೀಲನೆಗೆ ಚಿತ್ರತಂಡ ಅರ್ಜಿ ಸಲ್ಲಿಸಿರಲಿಲ್ಲ ಎಂದೂ ಸಚಿವಾಲಯ ಹೇಳಿದೆ.

‘ಪಂಜಾಬ್ 95’ ಹೆಸರಿನಿಂದ ‘ಸತ್ಲುಜ್’ವರೆಗಿನ ವಿವಾದ

ಈ ಸಿನಿಮಾ ಮೊದಲು ‘ಪಂಜಾಬ್ 95’ ಎಂಬ ಹೆಸರಿನಲ್ಲಿ ಸಿದ್ಧವಾಗಿತ್ತು. ಪಂಜಾಬ್‌ನ ಕರಾಳ ದಿನಗಳ ಅವಧಿಯಲ್ಲಿ ನಡೆದ ನಿಗೂಢ ನಾಪತ್ತೆ ಪ್ರಕರಣಗಳು ಮತ್ತು ಕಾನೂನುಬಾಹಿರ ಸಾಮೂಹಿಕ ಶವಸಂಸ್ಕಾರಗಳ ಬಗ್ಗೆ ತನಿಖೆ ನಡೆಸಿದ್ದ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಆಧಾರಿತ ಸಿನಿಮಾ ಇದಾಗಿದೆ.

ಭಾರತದಲ್ಲಿ ‘ಸತ್ಲುಜ್’ ಸಿನಿಮಾ ನಿಷೇಧ; ಡೌನ್‌ಲೋಡ್ ಕಾಪಿ ಹಂಚಿಕೊಳ್ಳಿ ಎಂದ ನಟ ದಿಲ್ಜಿತ್ ದೋಸಾಂಜ್

ಈ ಚಿತ್ರವನ್ನು 2022ರಲ್ಲೇ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್​ಗೆ ಸಲ್ಲಿಸಲಾಗಿತ್ತು. ಆಗ ಮಂಡಳಿಯು ಸಿನಿಮಾದ ಹೆಸರು ಬದಲಾವಣೆ ಸೇರಿ 27 ಕಟ್‌ಗಳನ್ನು ಸೂಚಿಸಿತ್ತು. ಮಂಡಳಿಯ ನಿರ್ಧಾರವನ್ನು ಚಿತ್ರತಂಡ ಕೋರ್ಟ್‌ನಲ್ಲಿ ಪ್ರಶ್ನಿಸಿತು. ತದನಂತರ ರಚನೆಯಾದ ಪರಿಶೀಲನಾ ಸಮಿತಿಯು ಬರೋಬ್ಬರಿ 120ಕ್ಕೂ ಹೆಚ್ಚು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. ವರ್ಷಗಳ ಕಾನೂನು ಹೋರಾಟದ ನಂತರ, ಚಿತ್ರತಂಡ ಯಾವುದೇ ಕಟ್‌ಗಳಿಲ್ಲದೆ ಮೂಲ ರೂಪದಲ್ಲೇ ಸಿನಿಮಾವನ್ನು ‘ಸತ್ಲುಜ್’ ಹೆಸರಿನಲ್ಲಿ ZEE5ನಲ್ಲಿ ಬಿಡುಗಡೆ ಮಾಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us