
ಮೋಹನ್ಲಾಲ್ ನಟನೆಯ ‘ದೃಶ್ಯಂ’ ಚಿತ್ರ ಭಾರತದ ಹಲವು ಭಾಷೆಗಳಿಗೆ ರಿಮೇಕ್ ಆಗಿ ಭರ್ಜರಿ ಯಶಸ್ಸು ಗಳಿಸಿತ್ತು. ಅದರ ಮುಂದುವರೆದ ಭಾಗವಾಗಿ ಈಗಾಗಲೇ ಮಲಯಾಳಂನಲ್ಲಿ ‘ದೃಶ್ಯಂ 2’ ಬಿಡುಗಡೆಯಾಗಿ ಯಶಸ್ಸು ಗಳಿಸಿದೆ. ಇದೀಗ ಭಾರತದ ಇತರ ಭಾಷೆಗಳಿಗೂ ಚಿತ್ರ ರಿಮೇಕ್ ಆಗುತ್ತಿದ್ದು, ತೆಲುಗಿನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರತಂಡ ಈ ನಿಟ್ಟಿನಲ್ಲಿ ಬಹುದೊಡ್ಡ ನಿರ್ಧಾರ ಕೈಗೊಂಡು ನೇರವಾಗಿ ಒಟಿಟಿ ಮೂಲಕ ತೆರೆಗೆ ತರಲು ಯೋಚಿಸಿದೆ. ಇದೀಗ ಚಿತ್ರದ ಬಿಡುಗಡೆಯ ದಿನಾಂಕವೂ ಘೋಷಣೆಯಾಗಿದ್ದು, ನವೆಂಬರ್ 25ರಂದು ಆಮೆಜಾನ್ ಪ್ರೈಮ್ ವಿಡಿಯೋ ಮೂಲಕ ತೆರೆಗೆ ಬರಲಿದೆ. ಮಲಯಾಳಂನಲ್ಲಿ ‘ದೃಶ್ಯಂ 2’ ನಿರ್ದೇಶಿಸಿದ ಜೀತು ಜೋಸೆಫ್ ತೆಲುಗಿಗೂ ಆಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಟ ವೆಂಕಟೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದು, ಎಲ್ಲರ ಕುತೂಹಲ ಕೆರಳಿಸಿದೆ.
ತೆಲುಗಿನಲ್ಲಿ ಈ ಹಿಂದೆ ತೆರೆಕಂಡ ‘ದೃಶ್ಯಂ’ ಸೂಪರ್ ಹಿಟ್ ಆಗಿತ್ತು. ವೆಂಕಟೇಶ್ ರಾಂಬಾಬು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ದೃಶ್ಯಂ 2 ತೆರೆಗೆ ಬರಲಿದ್ದು, ಚಿತ್ರವನ್ನು ಡಿ.ಸುರೇಶ್ ಬಾಬು, ರಾಜ್ಕುಮಾರ್ ಸೇತುಪತಿ ಮತ್ತು ಆಂಟೋನಿ ಪೆರುವಾಂಬೂರ್ ನಿರ್ಮಾಣ ಮಾಡಿದ್ದಾರೆ. ದೃಶ್ಯಂ 2 ಚಿತ್ರದ ಮೊದಲ ಮೋಷನ್ ಪೋಸ್ಟರ್ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿತ್ತು. ಇದೀಗ ಚಿತ್ರತಂಡ 52 ಸೆಕೆಂಡ್ಗಳ ಟೀಸರ್ ಬಿಡುಗಡೆ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ದೃಶ್ಯಂ 2 ಚಿತ್ರದ ಟೀಸರ್ ಇಲ್ಲಿದೆ:
2021ರ ಏಪ್ರಿಲ್ನಲ್ಲಿ ದೃಶ್ಯಂ 2 ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿತ್ತು. ಈ ಚಿತ್ರದಲ್ಲಿ ವೆಂಕಟೇಶ್ ಅವರೊಂದಿಗೆ ಮೀನಾ ಸಾಗರ್ ಬಣ್ಣ ಹಚ್ಚಿದ್ದಾರೆ. ಸೆನ್ಸಾರ್ ಸರ್ಟಿಫಿಕೇಟ್ ಈಗಾಗಲೇ ಲಭ್ಯವಾಗಿದ್ದು, ಯು ಪ್ರಮಾಣ ಪತ್ರ ದೊರೆತಿದೆ.
ಚಿತ್ರದ ಕುರಿತು ವೆಂಕಟೇಶ್ ಹಂಚಿಕೊಂಡ ಟ್ವೀಟ್:
ಮೂಲ ಮಲಯಾಳಂ ಚಿತ್ರದಲ್ಲಿ ಮೋಹನ್ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅಂಜಲಿ ನಾಯರ್ ಹಾಗೂ ಮೀನಾ ಕಾಣಿಸಿಕೊಂಡಿದ್ದರು. ಮಲಯಾಳಂನ ‘ದೃಶ್ಯಂ 2’ ಕೂಡ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಗಳಿಸಿತ್ತು.
ಇದನ್ನೂ ಓದಿ: