ಮಾರ್ಚ್ 19ರಿಂದ ಜೀ5 ಒಟಿಟಿಯಲ್ಲಿ ‘ಲ್ಯಾಂಡ್​ಲಾರ್ಡ್’ ಸಿನಿಮಾ ಪ್ರಸಾರ

ಚಿತ್ರಮಂದಿರಗಳಲ್ಲಿ ಹಿಟ್ ಆದ ‘ಲ್ಯಾಂಡ್​ಲಾರ್ಡ್’ ಸಿನಿಮಾವನ್ನು ಈಗ ಒಟಿಟಿಯಲ್ಲಿ ನೋಡಲು ಸಮಯ ಬಂದಿದೆ. ಹಲವು ಪ್ರತಿಭಾವಂತ ಕಲಾವಿದರನ್ನು ಒಳಗೊಂಡ ಈ ಚಿತ್ರ ‘ಜೀ5’ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ತಲುಪಲಿದೆ. ಮಾರ್ಚ್ 19ರಂದು ಯುಗಾದಿ ಹಬ್ಬದ ಪ್ರಯುಕ್ತ ‘ಲ್ಯಾಂಡ್​ಲಾರ್ಡ್’ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಡಲಿದೆ.

ಮಾರ್ಚ್ 19ರಿಂದ ಜೀ5 ಒಟಿಟಿಯಲ್ಲಿ ‘ಲ್ಯಾಂಡ್​ಲಾರ್ಡ್’ ಸಿನಿಮಾ ಪ್ರಸಾರ
Landlord Kannada Movie Poster

Updated on: Mar 13, 2026 | 9:43 PM

ಜನವರಿ 23ರಂದು ‘ಲ್ಯಾಂಡ್​ಲಾರ್ಡ್’ ಸಿನಿಮಾ (Landlord Kannada Movie) ಬಿಡುಗಡೆ ಆಗಿತ್ತು. ದುನಿಯಾ ವಿಜಯ್, ರಚಿತಾ ರಾಮ್, ಶಿಶಿರ್ ಬೈಕಾಡಿ, ರಿತನ್ಯ ವಿಜಯ್, ಉಮಾಶ್ರೀ, ರಾಜ್ ಬಿ. ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿರುವ ಈ ಸಿನಿಮಾಗೆ ಚಿತ್ರಮಂದಿರಗಳಲ್ಲಿ ಜನರ ಮೆಚ್ಚುಗೆ ಸಿಕ್ಕಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಈಗ ‘ಲ್ಯಾಂಡ್​ಲಾರ್ಡ್’ ಚಿತ್ರ ಒಟಿಟಿಗೆ ಬರುತ್ತಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಜೀ5 ಒಟಿಟಿ (Zee5 OTT) ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

ಮಾರ್ಚ್ 19ಕ್ಕೆ ಜೀ5ನಲ್ಲಿ ‘ಲ್ಯಾಂಡ್​ಲಾರ್ಡ್’ ಸಿನಿಮಾ ಪ್ರಸಾರ ಆರಂಭ ಆಗಲಿದೆ. ಜಡೇಶ್ ಕೆ. ಹಂಪಿ ನಿರ್ದೇಶನದ ಈ ಸಿನಮಾ 1980ರಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ನಡೆಯುವ ಕಥೆಯನ್ನು ಹೇಳುತ್ತದೆ. ‘ಸಾರಥಿ ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಸಂಪತ್ ಮೈತ್ರೇಯ, ಭಾವನಾ ರಾವ್ ಕೂಡ ಈ ಚಿತ್ರದಲ್ಲಿ ಗಮನಾರ್ಹ ಪಾತ್ರಗಳನ್ನು ಮಾಡಿದ್ದಾರೆ.

‘ಲ್ಯಾಂಡ್​ಲಾರ್ಡ್’ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ಕೊಡಲಿ ರಾಚಯ್ಯ ಎಂಬ ಪಾತ್ರ ಮಾಡಿದ್ದಾರೆ. ಆ ಪಾತ್ರದ ಕುರಿತು ಮಾತನಾಡಿದ ಅವರು, ‘ನಾನು ರಾಚಯ್ಯ ಎಂಬ ಪಾತ್ರವನ್ನು ವಹಿಸಿದ್ದೇನೆ. ರಾಚಯ್ಯನು ಒಬ್ಬ ಅಂತರ್ಮುಖಿ‌. ಹೆಚ್ಚು ಮಾತನಾಡದೇ ಒಳಗಿನ ಭಾವನೆಗಳನ್ನು ವ್ಯಕ್ತಪಡಿಸುವ ಈ ಪಾತ್ರ ನನಗೆ ಒಂದು ಸವಾಲಾಗಿತ್ತು. ಇದೀಗ ಜೀ5ನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದು ನನಗೆ ಸಂತಸ ತಂದಿದೆ. ಪ್ರೇಕ್ಷಕರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ’ ಎಂದಿದ್ದಾರೆ.

ಸಿನಿಮಾದ ಬಗ್ಗೆ ಮತ್ತು ತಮ್ಮ ಪಾತ್ರದ ಕುರಿತು ಮಾತನಾಡಿದ ನಟಿ ರಚಿತಾ ರಾಮ್, ‘ಚಿತ್ರವು ಸರಳವಾಗಿದ್ದರೂ, ಕಥೆಯಲ್ಲಿರುವ ಭಾವನೆಗಳ ಆಳ ದೊಡ್ಡದಾಗಿದೆ. ಅಗಾಧವಾದ ಭಾವನೆಗಳನ್ನು ವ್ಯಕ್ತಪಡಿಸುವ ಕಥೆಯೇ ಲ್ಯಾಂಡ್​ಲಾರ್ಡ್. ಇದರಲ್ಲಿ ನನ್ನದು ಬಹಳ ವಿಶೇಷವಾದ ಪಾತ್ರ’ ಎಂದಿದ್ದಾರೆ. ಉಮಾಶ್ರೀ ಅವರ ಪಾತ್ರ ಕೂಡ ಗಮನ ಸೆಳೆಯುಂತಿದೆ.

ಇದನ್ನೂ ಓದಿ: Landlord Movie Review: ಅಸಮಾನತೆ, ಅನ್ಯಾಯದ ಇತಿಹಾಸ ಕೆದಕಿದ ‘ಲ್ಯಾಂಡ್​ಲಾರ್ಡ್’

‘ಲ್ಯಾಂಡ್​ಲಾರ್ಡ್​’ ಸಿನಿಮಾದಲ್ಲಿನ ಎಲ್ಲ ಕಲಾವಿದರ ನಟನೆಗೆ ಚಿತ್ರಮಂದಿರದಲ್ಲಿ ಜನರು ಭೇಷ್ ಎಂದಿದ್ದರು. ವಿಲನ್ ಪಾತ್ರದಲ್ಲಿ ಅಬ್ಬರಿಸಿದ ರಾಜ್ ಬಿ. ಶೆಟ್ಟಿ ಅವರು ಚಪ್ಪಾಳೆ ಗಿಟ್ಟಿಸಿದರು. ಈಗ ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಸಮಯ ಸಮೀಪಿಸಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us