AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Landlord Movie Review: ಅಸಮಾನತೆ, ಅನ್ಯಾಯದ ಇತಿಹಾಸ ಕೆದಕಿದ ‘ಲ್ಯಾಂಡ್​ಲಾರ್ಡ್’

Landlord Movie Review: ಅಸಮಾನತೆ, ಅನ್ಯಾಯದ ಇತಿಹಾಸ ಕೆದಕಿದ ‘ಲ್ಯಾಂಡ್​ಲಾರ್ಡ್’
Landlord Movie Review
ಲ್ಯಾಂಡ್​ಲಾರ್ಡ್
UA
  • Time - 156 Minutes
  • Released - January 23, 2026
  • Language - Kannada
  • Genre - Action, Drama, Social
Cast - ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ. ಶೆಟ್ಟಿ, ರಿತನ್ಯಾ ವಿಜಯ್, ಶಿಶಿರ್ ಬೈಕಾಡಿ, ಉಮಾಶ್ರೀ ಮುಂತಾದವರು
Director - ಜಡೇಶ್ ಕೆ. ಹಂಪಿ
3.5
Critic's Rating
ಮದನ್​ ಕುಮಾರ್​
|

Updated on: Jan 23, 2026 | 3:26 PM

Share

ನಿರ್ದೇಶಕ ಜಡೇಶ್ ಕೆ. ಹಂಪಿ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಆದ ‘ಕಾಟೇರ’ ಸಿನಿಮಾದ ಕಥೆ, ಚಿತ್ರಕಥೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಜೊತೆ ಜಡೇಶ್ ಕೈ ಜೋಡಿಸಿದ್ದರು. ಈಗ ಜಡೇಶ್ ಅವರ ನಿರ್ದೇಶನದಲ್ಲಿ ‘ಲ್ಯಾಂಡ್​ಲಾರ್ಡ್’ ಸಿನಿಮಾ (Landlord Movie) ಮೂಡಿಬಂದಿದೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ (Vijay Kumar), ರಚಿತಾ ರಾಮ್, ರಾಜ್ ಬಿ. ಶೆಟ್ಟಿ, ರಿತನ್ಯಾ ವಿಜಯ್, ಶಿಶಿರ್ ಬೈಕಾಡಿ, ಉಮಾಶ್ರೀ ಮುಂತಾದವರು ನಟಿಸಿದ್ದಾರೆ. ಕೆ.ವಿ. ಸತ್ಯಪ್ರಕಾಶ್ ಮತ್ತು ಹೇಮಂತ್ ಗೌಡ ಕೆ.ಎಸ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಲ್ಯಾಂಡ್​ಲಾರ್ಡ್’ ಸಿನಿಮಾದ ವಿಮರ್ಶೆ ಇಲ್ಲಿದೆ..

‘ಲ್ಯಾಂಡ್​ಲಾರ್ಡ್’ ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗಲೇ ಅದರಲ್ಲಿ ‘ಕಾಟೇರ’ ಸಿನಿಮಾದ ಶೇಡ್ ಕಾಣಿಸಿತ್ತು. ಹೌದು, ಈ ಸಿನಿಮಾದಲ್ಲಿ ಅದೇ ರೀತಿಯ ಛಾಯೆ ಇದೆ. ಬಡವ ಮತ್ತು ಶ್ರೀಮಂತರ ನಡುವಿನ ಸಂಘರ್ಷ ಇದೆ. ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಬಡವನ ಕಥೆ ಇದೆ. ಜಾತಿಯ ಹೆಸರಿನಲ್ಲಿ ಶೋಷಣೆಗೆ ಒಳಗಾದ ಜನರ ಕಹಾನಿ ಇದೆ. ರೆಟ್ರೋ ಕಾಲದ ಕಥೆಯನ್ನು ಪ್ರೇಕ್ಷಕರ ಮುಂದೆ ಇಡಲಾಗಿದೆ.

ಇಡೀ ಊರಿಗೆ ಊರೇ ದಣಿಗಳ ಒಡೆತನದಲ್ಲಿ ಇರುವಾಗ, ತನ್ನ ಪಾಲಿಗೂ ಸ್ವಂತದ ತುಂಡು ಭೂಮಿ ಇರಬೇಕು ಎಂಬುದು ಬಡವನ ಆಸೆ. ಆ ಆಸೆಯನ್ನು ಈಡೇರಿಸುವುದು ದಣಿಗಳ ಪಾಲಿಗೆ ದೊಡ್ಡ ವಿಷಯ ಏನೂ ಅಲ್ಲ. ಆದರೆ ಬಡವರಿಗೆ ಭೂಮಿ ಕೊಟ್ಟರೆ ಅವರು ಕೂಡ ‘ಲ್ಯಾಂಡ್​ಲಾರ್ಡ್’ ಎನಿಸಿಕೊಳ್ಳುತ್ತಾರೆ. ಅದರಿಂದ ತಮ್ಮ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎಂಬುದು ದಣಿಗಳ ವಾದ. ಹಾಗಾಗಿ, ಎಂದೆಂದಿಗೂ ಬಡವರಿಗೆ ಭೂಮಿಯ ಒಡೆತನ ಸಿಗಲೇಬಾರದು ಎಂದು ದಣಿಗಳು ಕುತಂತ್ರ ನಡೆಸುತ್ತಾರೆ. ಅಂಥ ದಣಿಗಳ ವಿರುದ್ಧ ಸಿಡಿದು ನಿಲ್ಲುವ ರಾಚಯ್ಯ ಅಲಿಯಾಸ್ ಕೊಡಲಿ ರಾಚಯ್ಯ ಎಂಬ ಬಡವನ ಕಥೆ ಈ ಸಿನಿಮಾದಲ್ಲಿ ಇದೆ.

ನಟ ದುನಿಯಾ ವಿಜಯ್ ಅವರು ಕೊಡಲಿ ರಾಚಯ್ಯನಾಗಿ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಆ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ. ಕೋಲಾರ ಭಾಗದ ಕನ್ನಡವನ್ನು ಮಾತನಾಡುತ್ತಾ ಆ ಪಾತ್ರವೇ ತಾವಾಗಿದ್ದಾರೆ. ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ. ದಿಟ್ಟ ಹೆಣ್ಣುಮಗಳಾಗಿ, ಡಿ-ಗ್ಲಾಮ್ ಪಾತ್ರವನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಮಗಳ ಪಾತ್ರದಲ್ಲಿ ನಟಿಸಿರುವ ರಿತನ್ಯಾ ಅವರು ಗಮನ ಸೆಳೆಯುತ್ತಾರೆ.

ಹಿರಿಯ ನಟಿ ಉಮಾಶ್ರೀ ಅವರು ಈ ಸಿನಿಮಾದಲ್ಲಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ತಮ್ಮ ಛಾಪು ಮೂಡಿಸಿದ್ದಾರೆ. ಅವರಿಂದಾಗಿ ಸಿನಿಮಾದ ತೂಕ ಹೆಚ್ಚಿದೆ. ರಾಜ್ ಬಿ. ಶೆಟ್ಟಿ ಅವರು ಈ ಚಿತ್ರದಲ್ಲಿ ವಿಲನ್ ಆಗಿ ಘರ್ಜಿಸಿದ್ದಾರೆ. ಬಡವರ ರಕ್ತ ಹೀರುವ ಖಳನಾಗಿ ಅವರು ಇಡೀ ಸಿನಿಮಾವನ್ನು ಆವರಿಸಿದ್ದಾರೆ. ಬೇರೆ ಸಿನಿಮಾಗಳಲ್ಲಿ ಕಾಮಿಡಿ ಮೂಲಕ ಮನರಂಜಿಸಿದ ಅವರು ‘ಲ್ಯಾಂಡ್​ಲಾರ್ಡ್’ ಸಿನಿಮಾದಲ್ಲಿ ಕಟುಕನಾಗಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದ ದಂಡು ಇದೆ. ಪದ್ಮಾ ಎಂಬ ದೇವದಾಸಿ ಪಾತ್ರದಲ್ಲಿ ಭಾವನಾ ರಾವ್ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಅವರು ಪೊಲೀಸ್ ಅಧಿಕಾರಿಯಾಗಿ, ಸಂಪತ್ ಮೈತ್ರೇಯ ಅವರು ಶಾಸಕನಾಗಿ, ಗೋಪಾಲಕೃಷ್ಣ ದೇಶಪಾಂಡೆ ಅವರು ಬಡವನಾಗಿ, ಅವಿನಾಶ್ ಹಾಗೂ ಶರತ್ ಲೋಹಿತಾಶ್ವ ಅವರು ಜಮೀನ್ದಾರರಾಗಿ, ರಾಕೇಶ್ ಅಡಿಗ ಅವರು ಖಳನಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: 4 ದಿನಕ್ಕೆ 2 ಮಿಲಿಯನ್ ವೀಕ್ಷಣೆ ಕಂಡ ‘ಲ್ಯಾಂಡ್​ಲಾರ್ಡ್’ ಚಿತ್ರದ ‘ರೋಮಾಂಚಕ’ ಹಾಡು

3-4 ದಶಕಗಳ ಹಿಂದಿನ ಗ್ರಾಮೀಣ ಪರಿಸರದಲ್ಲಿ ‘ಲ್ಯಾಂಡ್​ಲಾರ್ಡ್’ ಸಿನಿಮಾದ ಕಥೆ ಸಾಗುತ್ತದೆ. ಅಂದಿನ ಕಾಲಘಟ್ಟವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವಲ್ಲಿ ಈ ಸಿನಿಮಾ ಯಶಸ್ವಿ ಆಗಿದೆ. ಅಜನೀಶ್ ಬಿ. ಲೋಕನಾಥ್ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಗಮನ ಸೆಳೆಯುವಂತಿವೆ. ಇತಿಹಾಸದಲ್ಲಿ ಗಾಢವಾಗಿದ್ದ ಅನ್ಯಾಯ, ಅಸಮಾನತೆಗಳನ್ನು ‘ಲ್ಯಾಂಡ್​ಲಾರ್ಡ್’ ಸಿನಿಮಾ ಮತ್ತೆ ನೆನಪಿಸಿದಂತಿದೆ.

ಆರಂಭದಿಂದ ಕೊನೇ ತನಕ ಉಳ್ಳವರು ಮತ್ತು ಇಲ್ಲದವರ ನಡುವಿನ ಹೊಡೆದಾಟವೇ ಈ ಸಿನಿಮಾದಲ್ಲಿ ತುಂಬಿದೆ. ಹಲವು ದೃಶ್ಯಗಳ ಮೂಲಕ ಅದು ಪುನಾರಾವರ್ತಿತ ಆಗಿದೆ. ಹಾಗಾಗಿ ಚಿತ್ರದ ಕಥೆಯನ್ನು ಪ್ರೇಕ್ಷಕ ತುಂಬ ಸುಲಭವಾಗಿ ಊಹಿಸಬಹುದಾಗಿದೆ. ಆಶಯವನ್ನು ಮೀರಿಸುವಷ್ಟು ಕಮರ್ಷಿಯಲ್ ಅಂಶಗಳು ಬೆರೆತಿವೆ. ಕಥಾನಾಯಕನನ್ನು ಸೂಪರ್ ಹೀರೋ ಎಂಬಂತೆ ತೋರಿಸಲಾಗಿದೆ. ಹಾಗಾಗಿ ಲಾಜಿಕ್ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ. ಇಂಥ ಕೆಲವು ಮಿತಿಗಳ ನಡುವೆಯೂ ‘ಲ್ಯಾಂಡ್​ಲಾರ್ಡ್’ ಸಿನಿಮಾ ಒಂದು ಉತ್ತಮ ಪ್ರಯತ್ನ ಎನಿಸಿಕೊಳ್ಳುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.