4 ದಿನಕ್ಕೆ 2 ಮಿಲಿಯನ್ ವೀಕ್ಷಣೆ ಕಂಡ ‘ಲ್ಯಾಂಡ್ಲಾರ್ಡ್’ ಚಿತ್ರದ ‘ರೋಮಾಂಚಕ’ ಹಾಡು
ಸಾಕಷ್ಟು ಕಾರಣಗಳಿಂದ ‘ಲ್ಯಾಂಡ್ಲಾರ್ಡ್’ ಸಿನಿಮಾ ಮೇಲೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್, ರಚಿತಾ ರಾಮ್, ರಿತನ್ಯಾ ವಿಜಯ್, ಶಿಶಿರ್ ಬೈಕಾಡಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ‘ರೋಮಾಂಚಕ..’ ಎಂಬ ಈ ಹಾಡು ಜನರಿಗೆ ಇಷ್ಟ ಆಗಿದೆ.

ಮೇಲೋಡಿ ಹಾಡುಗಳ ಮೂಲಕ ಜನರ ಮನ ಗೆದ್ದಿರುವ ಅಜನೀಶ್ ಲೋಕನಾಥ್ ಅವರು ‘ಲ್ಯಾಂಡ್ಲಾರ್ಡ್’ (Landlord) ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅವರು ಈ ಸಿನಿಮಾದಲ್ಲಿ ಜೋಡಿಯಾಗಿದ್ದಾರೆ. ಈ ಚಿತ್ರದ 2ನೇ ಹಾಡು ‘ರೋಮಾಂಚಕ..’ (Romanchaka) ರಿಲೀಸ್ ಆಗಿದೆ. ಈ ಹಾಡಿನಲ್ಲಿ ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ (Rithanya Vijay) ಹಾಗೂ ಯುವ ನಟ ಶಿಶಿರ್ ಬೈಕಾಡಿ ಅವರು ಅಭಿನಯಿಸಿದ್ದಾರೆ. 4 ದಿನಗಳಲ್ಲಿ ಈ ಹಾಡು 2 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಪಡೆದು ಜನಮೆಚ್ಚುಗೆ ಗಳಿಸಿದೆ.
ಜನವರಿ 8ರಂದು ಧಾರವಾಡದಲ್ಲಿ ‘ರೋಮಾಂಚಕ’ ಹಾಡನ್ನು ಬಿಡುಗಡೆ ಮಾಡಲಾಯಿತು. ಇದು ರಿತನ್ಯಾ ವಿಜಯ್ ಕುಮಾರ್ ನಟಿಸಿರುವ ಮೊದಲ ಸಿನಿಮಾ. ಈ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ದುನಿಯಾ ವಿಜಯ್ ಅವರ ಮಗಳಾಗಿಯೇ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಭಾಗ್ಯ ಎಂಬುದು ಆ ಪಾತ್ರದ ಹೆಸರು.
ರಿತನ್ಯಾ ಅವರು ‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಪಾತ್ರದ ಗೆಟಪ್ ಹೇಗಿರಲಿದೆ ಎಂಬುದು ‘ರೋಮಾಂಚಕ’ ಹಾಡಿನಲ್ಲಿ ಗೊತ್ತಾಗಿದೆ. ‘ಆನಂದ್ ಆಡಿಯೋ’ ಮೂಲಕ ಈ ಸಾಂಗ್ ರಿಲೀಸ್ ಮಾಡಲಾಗಿದೆ. ‘ಡೇರ್ ಡೆವಿಲ್ ಮುಸ್ತಫಾ’ ಖ್ಯಾತಿಯ ನಟ ಶಿಶಿರ್ ಬೈಕಾಡಿ ಹಾಗೂ ರಿತನ್ಯ ಅವರ ಕಾಂಬಿನೇಷನ್ ಮೇಲೆ ನಿರೀಕ್ಷೆ ಮೂಡಿದೆ.
‘ರೋಮಾಂಚಕ’ ಹಾಡು:
ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿರುವ ಈ ಹಾಡಿಗೆ ನಾಗಾರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕ ಸಂಜಿತ್ ಹೆಗ್ಡೆ ಹಾಗೂ ಗಾಯಕಿ ಹರ್ಷಿಕಾ ದೇವನಾಥ್ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಹಾಡು ನೋಡಿದ ವೀಕ್ಷಕರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಹಾಡಿನಿಂದಾಗಿ ಚಿತ್ರದ ಮೇಲಿನ ಹೈಪ್ ಹೆಚ್ಚಿದೆ.
ಇದನ್ನೂ ಓದಿ: ‘ಲ್ಯಾಂಡ್ಲಾರ್ಡ್’ ಟೀಸರ್ನಲ್ಲಿ ವಿಜಯ್ ಮಾಸ್ ಅವತಾರ; ಜನವರಿ 23ಕ್ಕೆ ರಿಲೀಸ್
2026ರ ಬಹುನಿರೀಕ್ಷಿತ ಕನ್ನಡ ಸಿನಿಮಾಗಳ ಪಟ್ಟಿಯಲ್ಲಿ ‘ಲ್ಯಾಂಡ್ಲಾರ್ಡ್’ ಸಿನಿಮಾ ಕೂಡ ಇದೆ. ಜನವರಿ 23ರಂದು ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಜಡೇಶ್ ಕೆ. ಹಂಪಿ ಅವರು ನಿರ್ದೇಶನ ಮಾಡಿದ್ದಾರೆ. ಕೆ.ವಿ. ಸತ್ಯಪ್ರಕಾಶ್ ಮತ್ತು ಹೇಮಂತ್ ಗೌಡ ಅವರು ಬಂಡವಾಳ ಹೂಡಿದ್ದಾರೆ. ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಪಾತ್ರದ ಗೆಟಪ್ ಭಿನ್ನವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




