
ರೇಣುಕಾ ಸ್ವಾಮಿ ಕೊಲೆ ಪ್ರಕರಣ ಕಳೆದ ಕೆಲ ವಾರದಿಂದ ಚುರುಕು ಪಡೆದುಕೊಂಡಿದೆ. ವಿಶೇಷವಾಗಿ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾದ ಬಳಿಕವಂತೂ ಈ ಪ್ರಕರಣ ಸಾಕಷ್ಟು ಕುತೂಹಲ ಕೆರಳಿಸಿದೆ, ದೇಶದ ಗಮನ ಸೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಅರ್ಜಿಗಳು ಸಲ್ಲಿಕೆ ಆಗುತ್ತಲೇ ಇವೆ. ವಿಚಾರಣೆ ನಡೆಯುತ್ತಲೇ ಇದೆ. ಇದೇ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ 59ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಕೆಲ ದಿನಗಳ ಹಿಂದೆ ಜಾಮೀನು ಅರ್ಜಿ ಸಲ್ಲಿಸಿದ್ದ ಪವಿತ್ರಾ ಗೌಡ ಪರ ವಕೀಲರು, ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದಿರುವುದನ್ನು ಪರಿಗಣಿಸುವಂತೆ ಹೇಳಿದ್ದರು. ಅಲ್ಲದೆ ಪವಿತ್ರಾ ಗೌಡ ಅವರು ಸಿಂಗಲ್ ಮದರ್ ಆಗಿದ್ದು, ಮಗಳ ಶಿಕ್ಷಣ, ಆರೋಗ್ಯ, ಮಗಳ ಭವಿಷ್ಯವನ್ನು ಪರಿಗಣಿಸಿ ಮಾನವೀಯ ನೆಲೆಯಲ್ಲಿ ಪವಿತ್ರಾ ಗೌಡಗೆ ಜಾಮೀನು ನೀಡಬೇಕು ಎಂದು ಅವರ ಪರ ವಕೀಲರಾದ ಬಾಲನ್ ವಾದ ಮಂಡಿಸಿದ್ದರು. ಈ ಅರ್ಜಿಯ ತೀರ್ಪು ನಿನ್ನಿಯೇ (ಶುಕ್ರವಾರ) ಬರುವ ನಿರೀಕ್ಷೆ ಇತ್ತು. ಆದರೆ ಶನಿವಾರ ತೀರ್ಪು ಹೊರಬಿದ್ದಿದ್ದು, ಪವಿತ್ರಾ ಅವರ ಜಾಮೀನು ಅರ್ಜಿಯನ್ನು ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ವಜಾಗೊಳಿಸಿದ್ದಾರೆ.
ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಮಾಫಿ ಸಾಕ್ಷಿಯನ್ನು ತಡೆಯಲು ದರ್ಶನ್ ಪರ ವಕೀಲರು ಇನ್ನಿಲ್ಲದ ಯತ್ನ ಮಾಡುತ್ತಿದ್ದಾರೆ. ಈಗಾಗಲೇ ಹೈಕೋರ್ಟ್ಗೆ ಅರ್ಜಿ ಹಾಕಿ ಅಲ್ಲಿಯೂ ಹಿನ್ನಡೆ ಅನುಭವಿಸಿದ್ದಾರೆ. 59ನೇ ಸಿಸಿಎಚ್ ನ್ಯಾಯಾಲಯವು ಸೆಪ್ಟೆಂಬರ್ 28ರ ಸೋಮವಾರದಂದು ಪ್ರದೋಶ್ ಮಾಫಿ ಸಾಕ್ಷಿ ದಾಖಲಿಗೆ ಸಮಯ ನಿಗದಿಪಡಿಸಿದೆ. ಆದರೆ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಯನ್ನು ಒಂದು ವಾರ ಮುಂದೂಡಬೇಕು ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಕುರಿತಾದ ತೀರ್ಪು ಸಹ ಇಂದೇ ಹೊರಬಿದ್ದಿದ್ದು, ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
ತಮಗೆ ಹೈಕೋರ್ಟ್ ಆದೇಶ ಇನ್ನೂ ಸಿಕ್ಕಿಲ್ಲ ಹಾಗೂ ತಾವು ಪ್ರದೋಶ್ ಮಾಫಿ ಸಾಕ್ಷಿ ವಿರುದ್ಧ ಸುಪ್ರೀಂಕೋರ್ಟ್ಗೆ ಹೋಗಬೇಕೆಂದಿದ್ದೇವೆ ಹಾಗಾಗಿ ತಮಗೆ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ಕೇಳಿದ್ದರು. ಆದರೆ ಅದಕ್ಕೆ ನಕಾರಿಸಿರುವ ನ್ಯಾಯಾಲಯ ಅರ್ಜಿಯನ್ನು ರದ್ದು ಮಾಡಿದ್ದು, ಸೋಮವಾರದಂದು ಪ್ರದೋಶ್ ಮಾಫಿ ಸಾಕ್ಷಿ ದಾಖಲು ಬಹುತೇಕ ಖಾತ್ರಿ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ