ನನ್ನ ಮಕ್ಕಳು ಕ್ರಿಶ್ಚಿಯನ್ನರು, ನಾನು ಮತಾಂತರ ಆಗಿದ್ದೇನೆ: ಪವನ್ ಕಲ್ಯಾಣ್ ಹಳೆ ವಿಡಿಯೋ ವೈರಲ್

|

Updated on: Sep 25, 2024 | 11:45 AM

ನಟ ಪವನ್ ಕಲ್ಯಾಣ್ ನಿನ್ನೆಯಷ್ಟೆ ಮಾಧ್ಯಮಗಳ ಮುಂದೆ ಹಿಂದೂ ಧರ್ಮದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾ, ಏಸುವಿನ ಬಗ್ಗೆ, ಇಸ್ಲಾಂ ಬಗ್ಗೆ ಜೋಕುಗಳನ್ನು ಮಾಡುವುದಿಲ್ಲ, ನಮ್ಮ ಸನಾತನ ಧರ್ಮದ ಬಗ್ಗೆ ಜೋಕುಗಳು ಮಾಡುತ್ತಾರೆ ಎಂದೆಲ್ಲ ಅಬ್ಬರಿಸಿದ್ದರು. ಅದರ ಬೆನ್ನಲ್ಲೆ ಪವನ್, ಕ್ರಿಶ್ಚಿಯನ್ ಧರ್ಮದ ಬಗ್ಗೆ ಹೊಗಳುತ್ತಿರುವ ಹಳೆಯ ವಿಡಿಯೋ ವೈರಲ್ ಆಗಿದೆ.

ನನ್ನ ಮಕ್ಕಳು ಕ್ರಿಶ್ಚಿಯನ್ನರು, ನಾನು ಮತಾಂತರ ಆಗಿದ್ದೇನೆ: ಪವನ್ ಕಲ್ಯಾಣ್ ಹಳೆ ವಿಡಿಯೋ ವೈರಲ್
Follow us on

ಆಂಧ್ರ ಡಿಸಿಎಂ ಆಗುವ ಮುಂಚಿನ ಪವನ್ ಕಲ್ಯಾಣ್​ಗೂ ಆ ನಂತರದ ಪವನ್​ ಕಲ್ಯಾಣ್​ಗೂ ದೊಡ್ಡ ಅಂತರ ಕಾಣುತ್ತಿದೆ ಎಂದು ಕಳೆದ ಕೆಲ ದಿನಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅದರಲ್ಲೂ ತಿರುಪತಿ ಲಡ್ಡು ವಿವಾದ ಹೊರಬಿದ್ದ ಬಳಿಕವಂತೂ ಪವನ್ ಕಲ್ಯಾಣ್ ಹಿಂದೂ ಧರ್ಮದ ವಿಷಯವಾಗಿ ಆರ್​ಎಸ್​ಎಸ್ ಕಾರ್ಯಕರ್ತರ ರೀತಿಯೇ ವರ್ತಿಸುತ್ತಿದ್ದಾರೆ. ಮೊದಲೆಲ್ಲ ಜಾತ್ಯಾತೀತತೆ, ಮಾರ್ಕ್ಸ್​ ವಾದ, ಕಾರ್ಮಿಕ ಕ್ರಾಂತಿ ಮುಂತಾದ ವಿಷಯಗಳನ್ನೇ ಭಾಷಣಗಳಲ್ಲಿ ಪ್ರತಿಪಾದಿಸುತ್ತಿದ್ದ ಪವನ್ ಕಲ್ಯಾಣ್ ಡಿಸಿಎಂ ಆದ ಬಳಿಕ ಹಠಾತ್ತನೆ ಹಿಂದೂ ಕಾರ್ಯಕರ್ತನಾಗಿ ಬದಲಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೆ ಪವನ್ ಕಲ್ಯಾಣ್​ ಈ ಹಿಂದೆ ಕ್ರಿಶ್ಚಿಯನ್ ಸಮುದಾಯದ ಸಭೆಯೊಂದರಲ್ಲಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಆಡಿದ್ದ ಮಾತುಗಳ ವಿಡಿಯೋ ಒಂದು ವೈರಲ್ ಆಗಿದ್ದು, ಹಿಂದೂ ಧರ್ಮದ ಬಗ್ಗೆ ಮಾತನಾಡಲು ಪವನ್​ ಕಲ್ಯಾಣ್​ಗೆ ಅಧಿಕಾರವೇ ಇಲ್ಲವೆಂಬ ಒಕ್ಕಣೆಯೊಂದಿಗೆ ಆ ವಿಡಿಯೋ ವೈರಲ್ ಆಗುತ್ತಿದೆ.

ನಿನ್ನೆಯಷ್ಟೆ ಮಾಧ್ಯಮಗಳ ಮುಂದೆ ಅಬ್ಬರಿಸಿದ್ದ ಪವನ್ ಕಲ್ಯಾಣ್, ‘ತಿರುಪತಿ ಲಡ್ಡು ವಿಚಾರ ಹೊರಬಿದ್ದ ಬಳಿಕ ನಾವು ಹಿಂದೂಗಳು ತೀವ್ರ ನೋವಿನಲ್ಲಿದ್ದೇವೆ. ನಮ್ಮ ನೋವನ್ನು ಅಪಹಾಸ್ಯ ಮಾಡಬೇಡಿ. ಜಾತ್ಯಾತೀತರೆಂದು ಹೇಳಿಕೊಳ್ಳುವ ಕೆಲವರು ತಿರುಪತಿ ಲಡ್ಡು ಬಗ್ಗೆ, ಗಣೇಶನ ಬಗ್ಗೆ, ಸರಸ್ವತಿ ಬಗ್ಗೆ ಅಯ್ಯಪ್ಪ ಮಾಲೆ ಧರಿಸುವವರ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ನೀವು ಏಸು ಬಗ್ಗೆ ಜೋಕ್ ಮಾಡಬಲ್ಲಿರಾ? ಇಸ್ಲಾಂ ಧರ್ಮದ ಬಗ್ಗೆ ಪ್ರವಾದಿ ಮೊಹಮ್ಮದ್ ಬಗ್ಗೆ ಜೋಕ್ ಮಾಡಬಲ್ಲಿರಾ? ಏಕೆ ಮಾಡುವುದಿಲ್ಲ? ಎಂದು ಆವೇಶಭರಿತವಾಗಿ ಪ್ರಶ್ನೆ ಮಾಡಿದ್ದರು. ಸನಾತನ ಧರ್ಮದ ಬಗ್ಗೆ ಮಾತನಾಡುವಾಗ ಸಾವಿರ ಬಾರಿ ಯೋಚಿಸಿ’ ಎಂದಿದ್ದರು.

ಇದನ್ನೂ ಓದಿ:ಲಡ್ಡು ಬಗ್ಗೆ ಮಾತನಾಡಿದ ನಟ ಕಾರ್ತಿಗೆ ಪವನ್ ಕಲ್ಯಾಣ್ ಎಚ್ಚರಿಕೆ

ಇದಾದ ಬಳಿಕ ಪವನ್​ ಕಲ್ಯಾಣ್ ಕ್ರಿಶ್ಚಿಯನ್ ಧರ್ಮದ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋ ವೈರಲ್ ಆಗಿದೆ. ‘ನಾನು ಸಹ ಚರ್ಚ್​​ಗಳಿಗೆ ಭೇಟಿ ಕೊಟ್ಟಿದ್ದೇನೆ, ನನಗೆ ಬ್ಯಾಪ್ಟಿಸ್ಟ್ (ಕ್ರಿಶ್ಚಿಯನ್ನರ ಮತಾಂತರ ವಿಧಾನ) ಮಾಡಿದ್ದಾರೆ. ಹೆಚ್ಚು ಜನರಿಗೆ ಗೊತ್ತಿಲ್ಲದ ವಿಷಯವೆಂದರೆ ನಾನು ಇಸ್ರೇಲ್​ಗೆ ಹೋಗಿದ್ದೆ. ಅಲ್ಲಿ ಜೀಸಸ್ ಜನನ ಸ್ಥಳವಾದ ಬೆತ್ಲೇಹೇಮ್​ಗೆ ಭೇಟಿ ನೀಡಿದ್ದೆ. ಕ್ರಿಶ್ಚಿಯಾನಿಟಿ ಎಂಬುದು ಬಹಳ ದೊಡ್ಡ ಧರ್ಮ. ಎಲ್ಲೆಲ್ಲಿಂದಲೋ ಅಷ್ಟು ದೂರ ಬಂದು ಜನ ಭೇಟಿ ನೀಡುತ್ತಿರುವುದು ಆಶ್ಚರ್ಯ ತರಿಸಿತು. ಈ ಧರ್ಮದಲ್ಲಿರುವ ಸೇವಾ ತತ್ಪರತೆಯಿಂದಲೇ ಅದು ಸಾಧ್ಯವಾಗಿದೆ. ಆ ಭಗವಂತನ ಆಜ್ಞೆ ಇಂದ, ಸೇವಾತತ್ಪರತೆಯಿಂದಲೇ ಇಷ್ಟು ಜನ ಈ ಧರ್ಮವನ್ನು ತಮ್ಮದಾಗಿಸಿಕೊಂಡಿದ್ದಾರೆ’ ಎಂದಿದ್ದಾರೆ ಪವನ್ ಕಲ್ಯಾಣ್.

‘ಹಾಗಾಗಿ ನಿಮಗೆ ಯಾವುದೇ ಸಮಸ್ಯೆ ಎದುರಾದಾಗ ನಾನು ನಿಮಗೆ ಬೆಂಬಲವಾಗಿ ನಿಲ್ಲುತ್ತೀನಿ. ಮನೆಯಲ್ಲಿ ಸಹ ನನ್ನ ಇಬ್ಬರು ಮಕ್ಕಳು ಸಾಂಪ್ರದಾಯಿಕ ಕ್ರಿಶ್ಚಿಯನ್ನರು (ಆರ್ಥೋಡಾಕ್ಸ್ ಕ್ರಿಶ್ಚಿಯನ್). ಇಂದು ಇಲ್ಲಿ ಬಂದಿದ್ದೀನಿ ಎಂದಲ್ಲ, ಮೊದಲಿನಿಂದಲೂ ಈ ವಿಷಯವನ್ನು ನಾನು ಹೇಳುತ್ತಲೇ ಬಂದಿದ್ದೀನಿ’ ಎಂದು ಆ ವಿಡಿಯೋನಲ್ಲಿ ಪವನ್ ಕಲ್ಯಾಣ್ ಎಲ್ಲರೆದುರು ಹೇಳಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋನಲ್ಲಿ ಪವನ್ ಕಲ್ಯಾಣ್, ಕ್ರಿಶ್ಚಿಯನ್ ಧರ್ಮವನ್ನು, ‘ನಮ್ಮ ಧರ್ಮ’ ಎಂದೇ ಸಂಭೋಧಿಸಿರುವುದನ್ನು ನೆಟ್ಟಿಗರು ಗುರುತಿಸಿ ಟೀಕಿಸಿದ್ದಾರೆ. ಅಲ್ಲದೆ, ’ಕ್ರಿಶ್ಚಿಯನ್ನರಲ್ಲಿ ಮತಾಂತರವನ್ನು ಏನೆಂದು ಕರೆಯುತ್ತಾರೆ’ ಎಂದು ಪಕ್ಕದವರನ್ನು ಕೇಳಿ ಖಾತ್ರಿಪಡಿಸಿಕೊಂಡು ‘ಬ್ಯಾಪ್ಟಿಸ್ಟ್’ ನನಗೂ ಮಾಡಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ:‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ

ಅಂದಹಾಗೆ ಪವನ್ ಕಲ್ಯಾಣ್ ಏಸುವಿನ ಬಗ್ಗೆ ಸಿನಿಮಾ ಮಾಡುವುದಾಗಿ ಈ ಹಿಂದೆಯೇ ಘೋಷಣೆ ಮಾಡಿದ್ದರು. ಸಿನಿಮಾ ಮಾಡುವ ಭಾಗವಾಗಿಯೇ ಅವರು ಇಸ್ರೇಲ್​ಗೆ ತೆರಳಿದ್ದರು. ಆ ಸಿನಿಮಾವನ್ನು ಸಿಂಗೀತಂ ಶ್ರೀನಿವಾಸ್ ನಿರ್ದೇಶನ ಮಾಡುವವರಿದ್ದರು, ಕೊಂಡ ಕ್ರಷ್ಣಂ ರಾಜು ಆ ಸಿನಿಮಾದ ನಿರ್ಮಾಣ ಮಾಡುವವರಿದ್ದರು. ಸಿನಿಮಾದ ಬಗ್ಗೆ ಜೆರುಸುಲೆಂನಿಂದಲೇ ಲೈವ್ ಪ್ರೆಸ್ ಮೀಟ್ ಸಹ ಮಾಡಿದ್ದರು. ಆದರೆ ಆ ನಂತರ ಆ ಪ್ರಾಜೆಕ್ಟ್ ಅನ್ನು ಕೈಬಿಟ್ಟರು. ಜೆರುಸುಲೆಂನಿಂದ ಮಾಡಿದ್ದ ಲೈವ್ ವಿಡಿಯೋ ಕಾನ್ಫೆರೆನ್ಸ್​ನ ವಿಡಿಯೋ ತುಣುಕುಗಳು ಸಹ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಪವನ್​ರ ಈ ಹಳೆ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಪವನ್ ಹಿಂದೂವೆ ಅಲ್ಲ ಎಂದು ಕಮೆಂಟ್​ಗಳನ್ನು ಮಾಡುತ್ತಿದ್ದು, ಸನಾತನ ಧರ್ಮದ ಬಗ್ಗೆ ಮಾತನಾಡಲು ಪವನ್ ಕಲ್ಯಾಣ್​ಗೆ ಅರ್ಹತೆ ಇಲ್ಲ ಎಂಬ ಅಭಿಪ್ರಾಯಗಳನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಪವನ್ ಮಕ್ಕಳು ಸಂಪ್ರದಾಯವಾದಿ ಕ್ರಿಶ್ಚಿಯನ್ನರು, ಆದರೆ ಬೇರೆಯವರ ಮಕ್ಕಳು ಸನಾತನ ಧರ್ಮಕ್ಕಾಗಿ ಹೋರಾಡಲಿ ಎಂದು ಬಯಸುತ್ತಾರೆ ಎಂದು ಸಹ ಕೆಲವರು ಟೀಕಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ