
ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ (Janhvi Kapoor) ಅವರ ಪಾತ್ರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿದೆ ಎಂಬ ತೀವ್ರ ವಿರೋಧದ ಬೆನ್ನಲ್ಲೇ, ನಿರ್ದೇಶಕ ಬುಚ್ಚಿ ಬಾಬು ಸನಾ (Buchi Babu Sana) ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರೇಕ್ಷಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಕೆಲವು ವಿವಾದಾತ್ಮಕ ದೃಶ್ಯಗಳನ್ನು ಚಿತ್ರದಿಂದ ಕತ್ತರಿಸಿ ತೆಗೆದುಹಾಕಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಬುಚ್ಚಿ ಬಾಬು ಸನಾ ನಿರ್ದೇಶನದ ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ‘ಪೆದ್ದಿ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡುತ್ತಿದ್ದರೂ, ಜಾನ್ವಿ ಕಪೂರ್ ನಿರ್ವಹಿಸಿರುವ ಅಚಿಯಮ್ಮ ಎಂಬ ಪಾತ್ರದ ಚಿತ್ರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಚಿತ್ರದಲ್ಲಿ ಕಥೆಗೆ ಪೂರಕವಾಗಿರದೆ, ಕೇವಲ ಜಾನ್ವಿ ಅವರ ದೈಹಿಕ ಸೌಂದರ್ಯವನ್ನು ಅನಗತ್ಯವಾಗಿ ತೋರಿಸಲಾಗಿದೆ ಎಂದು ಪ್ರೇಕ್ಷಕರು ಮತ್ತು ಸಿನಿಮಾ ವಿಮರ್ಶಕರು ಆಕ್ಷೇಪ ಎತ್ತಿದ್ದರು.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ವಿವಾದದ ಕುರಿತು ಮುಕ್ತವಾಗಿ ಮಾತನಾಡಿದ ನಿರ್ದೇಶಕ ಬುಚ್ಚಿ ಬಾಬು ಸನಾ, ‘ನನ್ನ ದೃಷ್ಟಿಯಲ್ಲಿ, ಒಂದು ಉತ್ತಮ ಕಥೆಯಲ್ಲಿ ಜಾನ್ವಿ ಕಪೂರ್ ಅವರ ಟ್ರ್ಯಾಕ್ ಅನಗತ್ಯವಾಗಿತ್ತು ಎಂದು ಅನೇಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾನು ಸ್ವಲ್ಪ ವಿಭಿನ್ನ ಹಾಗೂ ರಗಡ್ ಆದ ಹಾದಿ ತುಳಿಯಲು ಬಯಸಿದ್ದೆ. ಏಕೆಂದರೆ ನಾಯಕ ಪೆದ್ದಿ ಬೆಟ್ಟದ ಪ್ರದೇಶಗಳಿಂದ ದೂರವಿರುವ ಒಂದು ಹಳ್ಳಿಗಾಡಿನ ಹಿನ್ನೆಲೆಯಿಂದ ಬಂದವನು’ ಎಂದು ವಿವರಿಸಿದ್ದಾರೆ.
‘ಅವನ ಹಿನ್ನೆಲೆ ಮತ್ತು ಬೆಳೆದ ವಾತಾವರಣದಿಂದಾಗಿ ಅವನ ವರ್ತನೆ ಆ ರೀತಿ ಇರುತ್ತದೆ ಎಂಬುದನ್ನು ತೋರಿಸಿ, ಚಿತ್ರದ ಕೊನೆಯಲ್ಲಿ ಅದನ್ನು ತಿದ್ದುವ ಆಲೋಚನೆ ನನ್ನದಾಗಿತ್ತು. ಅಂತಹ ಪಾತ್ರವೊಂದು ತಾನು ಪ್ರೀತಿಸುವ ಮಹಿಳೆಯನ್ನೇ ಮದುವೆಯಾಗಬೇಕು ಎಂದು ಹಠ ಹಿಡಿಯುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವು ಶಾಟ್‌ಗಳು ಪ್ರೇಕ್ಷಕರಿಗೆ ತಪ್ಪು ಸಂದೇಶ ರವಾನಿಸುವಂತೆ ಮೂಡಿಬಂದಿವೆ. ನಾವು ತಕ್ಷಣವೇ ಎಚ್ಚೆತ್ತುಕೊಂಡು, ಆ ವಿವಾದಾತ್ಮಕ ದೃಶ್ಯಗಳನ್ನು ಸಿನಿಮಾದಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ’ ಎಂದು ಬುಚ್ಚಿ ಬಾಬು ಸನಾ ಒಪ್ಪಿಕೊಂಡಿದ್ದಾರೆ.
ಚಿತ್ರ ಬಿಡುಗಡೆಯಾದ ನಂತರ, ಅಚಿಯಮ್ಮ ಮತ್ತು ಪೆದ್ದಿ ನಡುವಿನ ಪ್ರಣಯದ ದೃಶ್ಯಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ನಾಯಕಿಯ ಇಷ್ಟವಿಲ್ಲದಿದ್ದರೂ ನಾಯಕ ಪ್ರೀತಿ ವ್ಯಕ್ತಪಡಿಸುವ ದೃಶ್ಯಗಳು ಹಾಗೂ ಮುಖ್ಯವಾಗಿ ಕರೆಂಟ್ ಹೋದ ಸಮಯದಲ್ಲಿ ನಾಯಕಿಗೆ ಬಲವಂತವಾಗಿ ಮುತ್ತಿಡುವ ದೃಶ್ಯದ ವಿರುದ್ಧ ಪ್ರೇಕ್ಷಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ನಾಯಕಿಯ ವ್ಯಕ್ತಿತ್ವ ಅಥವಾ ಕಥೆಗೆ ಪ್ರಾಮುಖ್ಯತೆ ನೀಡುವ ಬದಲು ಆಕೆಯನ್ನು ಕೇವಲ ಒಂದು ವಸ್ತುವಿನಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ‘ಪೆದ್ದಿ’ ಚಿತ್ರದ ಆಕ್ಷೇಪಾರ್ಹ ಶಾಟ್‌ಗಳಿಗೆ ಜಾನ್ವಿ ಕಪೂರ್ ವಿರೋಧ? ನಟಿಯ ಮೆಸೇಜ್ ಲೀಕ್
ವಿವಾದದ ತೀವ್ರತೆಯನ್ನು ಅರಿತ ನಿರ್ದೇಶಕರು ಬಳಿಕ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು ಕ್ಷಮೆಯಾಚಿಸಿದ್ದರು. ‘ಬೆಳ್ಳಿತೆರೆಯ ಮೇಲಿರಲಿ ಅಥವಾ ನಿಜ ಜೀವನದಲ್ಲಿರಲಿ, ನಾನು ಯಾವಾಗಲೂ ಮಹಿಳೆಯರಿಗೆ ಅಪಾರ ಗೌರವ ನೀಡುತ್ತೇನೆ. ಯಾವುದೇ ಮಹಿಳಾ ಪಾತ್ರವನ್ನು ಕೀಳಾಗಿ ಅಥವಾ ವಸ್ತುವಿನಂತೆ ಬಿಂಬಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಒಂದು ವೇಳೆ ಚಿತ್ರದ ಯಾವುದೇ ಭಾಗ ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತಂದಿದ್ದರೆ, ನಾವು ಆ ಕಳಕಳಿಯನ್ನು ಗೌರವಿಸುತ್ತೇವೆ ಮತ್ತು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ’ ಎಂದು ಬರೆದುಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.