
ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ (Adipurush) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಅವರು ರಾಮನಾಗಿ ನಟಿಸಿದ್ದಾರೆ. ಅವರಿಗೆ ಕೃತಿ ಸನೋನ್ ಅವರು ಜೋಡಿಯಾಗಿದ್ದು, ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿ ಅಬ್ಬರಿಸಲು ಬರುತ್ತಿದ್ದಾರೆ. ಟ್ರೇಲರ್ ಮೂಲಕ ದೂಳೆಬ್ಬಿಸಬೇಕು ಎಂಬುದು ‘ಆದಿಪುರುಷ್’ ಚಿತ್ರತಂಡದ ಆಲೋಚನೆ ಆಗಿತ್ತು. ಆದರೆ ಚಿತ್ರತಂಡದ ಉತ್ಸಾಹಕ್ಕೆ ಬ್ರೇಕ್ ಹಾಕುವಂತಹ ಒಂದು ಕೆಲಸ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು (ಮೇ 9) ಸಂಜೆ 5 ಗಂಟಗೆ ‘ಆದಿಪುರುಷ್’ ಚಿತ್ರದ ಟ್ರೇಲರ್ (Adipurush Trailer) ಬಿಡುಗಡೆ ಮಾಡಬೇಕು ಎಂಬುದು ತಂಡದ ಪ್ಲ್ಯಾನ್ ಆಗಿತ್ತು. ಆದರೆ ಕೆಲವರು ಟ್ರೇಲರ್ ಲೀಕ್ ಮಾಡಿದ್ದಾರೆ. ಪ್ರಭಾಸ್ (Prabhas) ಅವರು ತಮ್ಮ ಅಭಿಮಾನಿಗಳಿಗೆ ತೋರಿಸಿದ ಅತಿಯಾದ ಪ್ರೀತಿಯಿಂದಲೇ ಹೀಗೆಲ್ಲ ಆಗಿದೆ ಎನ್ನಲಾಗಿದೆ.
ಮೇ 8ರ ಸಂಜೆಯೇ ಅಭಿಮಾನಿಗಳಿಗಾಗಿ ವಿಶೇಷವಾಗಿ ಟ್ರೇಲರ್ ಪ್ರದರ್ಶನ ಮಾಡಲಾಯಿತು. ಹೈದರಾಬಾದ್ನ ಆಯ್ದ ಕೆಲವು ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಬಿತ್ತರವಾದ ಟ್ರೇಲರ್ ನೋಡಿ ಫ್ಯಾನ್ಸ್ ಖುಷಿಪಟ್ಟರು. ಆದರೆ ಕೆಲವರು ಅದನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಬೇಸರ ಆಗಿದೆ.
ಯೂಟ್ಯೂಬ್ನಲ್ಲಿ ಸಿನಿಮಾದ ಟ್ರೇಲರ್ ಎಷ್ಟು ಬಾರಿ ವೀಕ್ಷಣೆ ಕಾಣುತ್ತದೆ ಎಂಬುದರ ಆಧಾರದ ಮೇಲೆ ಹೈಪ್ ಹೆಚ್ಚುತ್ತದೆ. ಆದರೆ ಈ ರೀತಿ ಲೀಕ್ ಆದರೆ ಚಿತ್ರತಂಡ ಬಿಡುಗಡೆ ಮಾಡುವ ಯೂಟ್ಯೂಬ್ ಚಾನೆಲ್ನಲ್ಲಿ ವೀವ್ಸ್ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಅದೇ ಈಗ ‘ಆದಿಪುರುಷ್’ ಚಿತ್ರತಂಡಕ್ಕೆ ತಲೆನೋವಾಗಿದೆ. ಹಾಗಾಗಿ ಟ್ರೇಲರ್ ಬಿಡುಗಡೆಯ ಸಮಯದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಾಗಿದೆ.
ಮೇ 9ರ ಸಂಜೆ 5 ಗಂಟೆಗೆ ಟ್ರೇಲರ್ ರಿಲೀಸ್ ಮಾಡುವುದಾಗಿ ಈ ಮೊದಲು ಚಿತ್ರತಂಡ ಘೋಷಿಸಿತ್ತು. ಆದರೆ ಲೀಕ್ ಬಿಸಿ ತಟ್ಟಿರುವುದರಿಂದ ಮೂರು ಗಂಟೆ ಮುಂಚಿತವಾಗಿ ಅಂದರೆ 1.53ಕ್ಕೆ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಟಿ-ಸೀರಿಸ್ ಯೂಟ್ಯೂಬ್ ವಾಹಿನಿ ಮೂಲಕ ‘ಆದಿಪುರುಷ್’ ಟ್ರೇಲರ್ ರಿಲೀಸ್ ಆಗಲಿದೆ.
ಇದನ್ನೂ ಓದಿ: Kriti Sanon: ಸೀತೆ ಆಗಿ ಬಂದ ಕೃತಿ ಸನೋನ್; ಹೊಸ ಪೋಸ್ಟರ್ ರಿಲೀಸ್ ಮಾಡಿದ ‘ಆದಿಪುರುಷ್’ ಟೀಂ
ಮೇ 8ರಂದು ಹೈದರಾಬಾದ್ನಲ್ಲಿ ಆಯೋಜಿಸಲಾಗಿದ್ದ ಟ್ರೇಲರ್ ಪ್ರದರ್ಶನದಲ್ಲಿ ಪ್ರಭಾಸ್, ಕೃತಿ ಸನೋನ್, ನಿರ್ದೇಶಕ ಓಂ ರಾವತ್ ಸೇರಿದಂತೆ ಇಡೀ ಚಿತ್ರತಂಡದವರು ಹಾಜರಿ ಹಾಕಿದ್ದರು. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಮೂಡಿಬಂದಿದೆ. 3ಡಿ ಟ್ರೇಲರ್ ಕಣ್ತುಂಬಿಕೊಂಡ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಚಿತ್ರಮಂದಿರದಲ್ಲಿ ಪ್ರಭಾಸ್ ಜೊತೆ ಸೇರಿ ಅಭಿಮಾನಿಗಳು ‘ಜೈ ಶ್ರೀರಾಮ್’ ಎಂದು ಜೈಕಾರ ಹಾಕುವ ಮೂಲಕ ಟ್ರೇಲರ್ಗೆ ಮೆಚ್ಚುಗೆ ಸೂಚಿಸಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.