‘ಪ್ರೇಮದ ಊರಲಿ’ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ರಮಿಕಾ ಶಿವು

ಕನ್ನಡದ 'ಪ್ರೇಮದ ಊರಲಿ' ಸಿನಿಮಾದ ಭರ್ಜರಿ ಯಶಸ್ಸಿನ ಬಗ್ಗೆ ನಟಿ ರಮಿಕಾ ಶಿವು ಮಾತನಾಡಿದ್ದಾರೆ. ಬಿಎಂಟಿಸಿ ಬಸ್, ಟ್ರೇನ್‌ಗಳಲ್ಲಿ ವಿಶಿಷ್ಟ ಪ್ರಚಾರ ಮಾಡಿದ್ದು ಹಾಗೂ ಸಿನಿಮಾದಲ್ಲಿ ತಮ್ಮ ಸವಾಲಿನ ಪಾತ್ರಕ್ಕೆ ಸಿಕ್ಕ ಪ್ರೇಕ್ಷಕರ ಮೆಚ್ಚುಗೆಯಿಂದ ತಮಗೆ ಅಪಾರ ಸಂತಸವಾಗಿದೆ ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ.

‘ಪ್ರೇಮದ ಊರಲಿ’ ಗೆಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ರಮಿಕಾ ಶಿವು
ಪ್ರೇಮದ ಊರಲಿ

Updated on: Oct 05, 2026 | 12:42 PM

ಮುಖ್ಯಾಂಶಗಳು

  • 'ಪ್ರೇಮದ ಊರಲಿ' ಸಕ್ಸಸ್ ರಹಸ್ಯ ಬಿಚ್ಚಿಟ್ಟ ರಮಿಕಾ ಶಿವು
  • ಧಾರಾವಾಹಿಯಿಂದ ಹಿರಿತೆರೆಗೆ ಎಂಟ್ರಿ
  • ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಮನ ಗೆದ್ದ 'ವಸಂತಾ'

‘ಪ್ರೇಮದ ಊರಲಿ’ ಸಿನಿಮಾ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಹೊಸ ಉತ್ಸಾಹ ತಂದಿದೆ. ಸುಂದರ ಹಳ್ಳಿ ಪ್ರೇಮಕಥೆಯನ್ನು ನಿರ್ದೇಶಕ ಮನೋಜ್ ಕುಮಾರ್ ಅವರು ಜನರ ಮುಂದಿಟ್ಟಿದ್ದಾರೆ. ಈ ಚಿತ್ರದ ಮೂಲಕ ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದ ಯಶಸ್ಸಿನ ಬಗ್ಗೆ ವಸಂತಾ ಪಾತ್ರ ಮಾಡಿದ ರಮಿಕಾ ಶಿವು ಅವರು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆಯ ಪ್ರೇಮಕಥೆ ನೋಡಬೇಕು ಎಂಬುದು ಸಿನಿಪ್ರಿಯರ ಆಸೆ ಆಗಿತ್ತು. ಆ ಆಸೆಯನ್ನು ‘ಪ್ರೇಮದ ಊರಲಿ’ ಚಿತ್ರ ನೀಗಿಸಿದೆ. ‘ಜನರಿಗೆ ಈ ರೀತಿಯ ಸಿನಿಮಾ ಬೇಕಿತ್ತು. ನಾವು ಜನರಿಗೆ ಪ್ರೀತಿ ಕೊಟ್ಟಿದ್ದೇವೆ. ಅದಕ್ಕೆ ಪ್ರತಿಯಾಗಿ ಅವರು ಡಬಲ್ ಪ್ರೀತಿ ಕೊಟ್ಟಿದ್ದಾರೆ’ ಎಂದು ರಮಿಕಾ ಶಿವು ಹೇಳಿದ್ದಾರೆ.

‘ಪ್ರೇಮದ ಊರಲಿ’ ಸಿನಿಮಾ ಪ್ರಚಾರವೇ ಭಿನ್ನವಾಗಿತ್ತು. ಈ ಬಗ್ಗೆ ಮಾತನಾಡಿರುವ ರಮಿಕಾ, ‘ನಾವು ಆನ್​​ಲೈನ್​ ಅಲ್ಲಿ ಪ್ರಚಾರ ಮಾಡುವುದಕ್ಕಿಂತ, ಜನರನ್ನು ಭೇಟಿ ಮಾಡಿ ಸಿನಿಮಾ ಪ್ರಮೋಷನ್ ಮಾಡಿದೆವು. ಟ್ರೇನ್, ಆಟೋ ಹಾಗೂ ಬಿಎಂಟಿಸಿ ಬಸ್​​ಗಳನ್ನು ಏರಿ ನಮ್ಮ ಸಿನಿಮಾ ನೋಡಿ ಎಂದು ಕೋರಿಕೊಂಡೆವು. ಜನರು ಬಂದು ಸಿನಿಮಾ ನೋಡಿ ಹಾರೈಸಿದ್ದಾರೆ’ ಎಂದು ರಮಿಕಾ ಶಿವು ಖುಷಿಯಿಂದ ಹೇಳಿದ್ದಾರೆ.

‘ಪ್ರೇಮದ ಊರಲಿ’ ಸಿನಿಮಾದಲ್ಲಿ ಜಡೆ ಕೂಡ ಒಂದು ಪ್ರಮುಖ ಪಾತ್ರವಹಿಸುತ್ತದೆ. ರಮಿಕಾಗೂ ಕೂದಲು ಅಂದ್ರೆ ಸಖತ್ ಇಷ್ಟವಂತೆ. ‘ಯಾವ ಹೆಣ್ಣುಮಕ್ಕಳಿಗೆ ಕೂದಲು ಅಂದ್ರೆ ಇಷ್ಟ ಇಲ್ಲ ಹೇಳಿ. ನನಗೂ ಕೂದಲು ತುಂಬಾನೇ ಇಷ್ಟ. ನಿರ್ದೇಶಕರು ಕೂದಲನ್ನು ಒಂದು ಪಾತ್ರದ ರೀತಿ ತೋರಿಸಿದ್ದಾರೆ. ಚಾಲೆಂಜಿಂಗ್ ಪಾತ್ರ ಮಾಡ್ಬೇಕಿತ್ತು ಎಂಬುದು ನನ್ನ ಆಸೆ ಆಗಿತ್ತು. ಆ ಆಸೆ ಈಗ ಈಡೇರಿದೆ. ಕಾದು ಈ ಸಿನಿಮಾ ಒಪ್ಪಿದ್ದಕ್ಕೂ ಸಾರ್ಥಕವಾಯಿತು’ ಎಂದು ಖುಷಿ ವ್ಯಕ್ತಪಡಿಸುತ್ತಾರೆ ರಮಿಕಾ ಶಿವು.

‘ಪ್ರೇಮದ ಊರಲಿ’ ಸಿನಿಮಾದಲ್ಲಿ ಟಾಮ್ ಬಾಯ್ ಲುಕ್​ನಲ್ಲಿ ರಮಿಕಾ ಮಿಂಚಿದ್ದಾರೆ. ಅವರು ಶಾಲಾ ದಿನಗಳಲ್ಲಿ ಅದೇ ರೀತಿಯಲ್ಲೇ ಇದ್ದರಂತೆ. ಆದರೆ, ಎಲ್ಲರಿಗೂ ಆ ರೀತಿಯ ವರ್ತನೆ ಇಷ್ಟ ಆಗೋದಿಲ್ಲ ಎಂಬ ಕಾರಣಕ್ಕೆ ಅವರ ತನವನ್ನು ಬದಲಿಸಿಕೊಂಡರು. ‘ನನ್ನ ಗ್ಯಾಂಗ್​​ ಜೊತೆ ಮಾತ್ರ ನಾನು ಇನ್ನೂ ಹಾಗೆಯೇ ವರ್ತಿಸುತ್ತೇನೆ. ಹೊರ ಸಮಾಜದಲ್ಲಿ ನಾನು ಡೀಸೆಂಟ್ ಗರ್ಲ್​ ರೀತಿ ಇರುತ್ತೇನೆ’ ಎನ್ನುತ್ತಾರೆ ಅವರು.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಜಾದೂ; 10ನೇ ದಿನವೂ ಧೂಳೆಬ್ಬಿಸಿದ ಸಿನಿಮಾ

ಈ ಸಿನಿಮಾದಲ್ಲಿ ನಾಲ್ಕು ಶೇಡ್​​ನ ಪಾತ್ರ ಅವರಿಗೆ ಇದೆ. ಇದನ್ನು ಮಾಡೋದು ಚಾಲೆಂಜಿಂಗ್ ಆಗಿತ್ತು ಎಂಬುದು ರಮಿಕಾ ಮಾತು. ಈ ಚಾಲೆಂಜ್​​ನ ಅವರು ಯಶಸ್ವಿಯಾಗಿ ಸ್ವೀಕರಿಸಿ, ಅದರಲ್ಲಿ ಗೆಲುವು ಕಂಡಿದ್ದಾರೆ. ರಮಿಕಾ ಶಿವು ಮೊದಲು ನಟಿಸಿದ್ದು ‘ಪಾರು’ ಧಾರಾವಾಹಿಯಲ್ಲಿ. ಆ ಬಳಿಕ ಅವರು ಕಿರುತೆರೆಯಲ್ಲಿ ಬ್ಯುಸಿ ಆದರು. ‘ನೀನಾದೆ ನಾ’ ಧಾರಾವಾಹಿಯಲ್ಲೂ ಅವರು ಬಣ್ಣ ಹಚ್ಚಿದರು. ಈಗ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಇಷ್ಟು ದೊಡ್ಡ ಯಶಸ್ಸು ಸಿಕ್ಕರೂ ರಮಿಕಾ ತಮ್ಮ ಜವಾಬ್ದಾರಿ ಮರೆತಿಲ್ಲ. ಮುಂಬರುವ ಸಿನಿಮಾಗಳಲ್ಲಿ ತಮ್ಮ ಪಾತ್ರಕ್ಕೆ ತೂಕ ಇರುವ ಚಿತ್ರಗಳನ್ನು ಮಾತ್ರ ಅವರು ಒಪ್ಪಿಕೊಳ್ಳುವ ಉದ್ದೇಶ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us