ಬಾಕ್ಸ್ ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಜಾದೂ; 10ನೇ ದಿನವೂ ಧೂಳೆಬ್ಬಿಸಿದ ಸಿನಿಮಾ
ಸ್ಯಾಂಡಲ್‌ವುಡ್‌ನ 'ಪ್ರೇಮದ ಊರಲ್ಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, 10ನೇ ದಿನವಾದ ಭಾನುವಾರ 3.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಉತ್ತಮ ಮೌತ್ ಪಬ್ಲಿಸಿಟಿಯಿಂದ ಪ್ರದರ್ಶನಗಳ ಸಂಖ್ಯೆ 663ಕ್ಕೆ ಏರಿಕೆಯಾಗಿದ್ದು, ಚಿತ್ರದ ಒಟ್ಟು ಭಾರತೀಯ ಗ್ರಾಸ್ ಕಲೆಕ್ಷನ್ 16.96 ಕೋಟಿ ರೂಪಾಯಿ ದಾಟಿದೆ.

ಮುಖ್ಯಾಂಶಗಳು
- 10ನೇ ದಿನವೂ ಧೂಳೆಬ್ಬಿಸಿದ 'ಪ್ರೇಮದ ಊರಲಿ’
- ಭಾನುವಾರ ಒಂದೇ ದಿನ 3.85 ಕೋಟಿ ಬಾಚಿದ ಚಿತ್ರ
- 60ರಿಂದ 663ಕ್ಕೆ ಏರಿಕೆಯಾದ ಶೋಗಳು
ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ತೆರೆಕಂಡ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಸಿನಿಮಾ ಬಿಡುಗಡೆಯಾದ ಆರಂಭದ ದಿನಗಳಲ್ಲಿ ಸಾಧಾರಣ ಕಲೆಕ್ಷನ್ ಮಾಡಿದ್ದ ಚಿತ್ರ, ದಿನಗಳು ಕಳೆದಂತೆ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ಪಡೆದು ಈಗ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ವಿಶೇಷವಾಗಿ ಎರಡನೇ ವಾರಾಂತ್ಯದಲ್ಲಿ ಈ ಸಿನಿಮಾ ಭಾರಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಚಿತ್ರವು ತನ್ನ 10ನೇ ದಿನವಾದ ಭಾನುವಾರದಂದು (ಅಕ್ಟೋಬರ್ 4) ರಾಜ್ಯಾದ್ಯಂತ ಬರೊಬ್ಬರಿ 3.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಒಟ್ಟು 663 ಶೋಗಳಲ್ಲಿ ಪ್ರದರ್ಶನಗೊಂಡ ಈ ಚಿತ್ರ, ಶನಿವಾರದ ಗಳಿಕೆಗೆ (2.80 ಕೋಟಿ ರೂ.) ಹೋಲಿಸಿದರೆ ಶೇ. 37.5 ರಷ್ಟು ಪ್ರಗತಿ ಕಂಡಿದೆ. ಇದರೊಂದಿಗೆ ಚಿತ್ರದ ಒಟ್ಟು ಭಾರತೀಯ ನೆಟ್ ಕಲೆಕ್ಷನ್ 14.57 ಕೋಟಿ ರೂಪಾಯಿ ತಲುಪಿದ್ದು, ಒಟ್ಟು ಗ್ರಾಸ್ ಕಲೆಕ್ಷನ್ 16.96 ಕೋಟಿ ರೂಪಾಯಿ ಗಡಿ ದಾಟಿದೆ.
ಚಿತ್ರದ ಆರಂಭಿಕ ಕಲೆಕ್ಷನ್ ನೋಡಿದರೆ, ಮೊದಲ ದಿನವಾದ ಸೆಪ್ಟೆಂಬರ್ 25ರ ಶುಕ್ರವಾರ ಕೇವಲ 9 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು. ನಂತರ ಶನಿವಾರ 23 ಲಕ್ಷ ರೂಪಾಯಿ ಹಾಗೂ ಭಾನುವಾರ 55 ಲಕ್ಷ ರೂಪಾಯಿ ಗಳಿಸಿತ್ತು. ವಾರದ ಕೆಲಸದ ದಿನಗಳಲ್ಲೂ ಅಂದರೆ ಸೋಮವಾರ 65 ಲಕ್ಷ ರೂಪಾಯಿ, ಮಂಗಳವಾರ 95 ಲಕ್ಷ ರೂಪಾಯಿ, ಬುಧವಾರ 1.15 ಕೋಟಿ ಹಾಗೂ ಗುರುವಾರ 1.70 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಮೊದಲ ವಾರದಲ್ಲೇ ಒಟ್ಟು 5.32 ಕೋಟಿ ರೂಪಾಯಿ ಬಾಚಿಕೊಂಡಿತ್ತು.
ಎರಡನೇ ವಾರದಲ್ಲಿ ಗಾಂಧಿನಗರವೇ ಬೆರಗಾಗುವಂತೆ ಕಲೆಕ್ಷನ್ ಗ್ರಾಫ್ ಮೇಲೇರಿದೆ. ಗಾಂಧಿ ಜಯಂತಿಯ ರಜಾದಿನವಾದ ಶುಕ್ರವಾರ (ಅಕ್ಟೋಬರ್ 2) ಬರೋಬ್ಬರಿ 2.60 ಕೋಟಿ ರೂಪಾಯಿ ಗಳಿಸಿದರೆ, ಶನಿವಾರ 2.80 ಕೋಟಿ ರೂಪಾಯಿ ಹರಿದುಬಂದಿತ್ತು. ಈ ವಾರಾಂತ್ಯವನ್ನು ಅತ್ಯುತ್ತಮವಾಗಿ ಬಳಸಿಕೊಂಡಿರುವ ಈ ಚಿತ್ರದ ಶೋಗಳ ಸಂಖ್ಯೆ ಕೂಡ 60 ರಿಂದ 663ಕ್ಕೆ ಏರಿಕೆಯಾಗಿರುವುದು ಕಲೆಕ್ಷನ್ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ: ಕನ್ನಡ, ತೆಲುಗು ಬಳಿಕ ಮಲಯಾಳಂ, ತಮಿಳು, ಹಿಂದಿಯಲ್ಲೂ ‘ಪ್ರೇಮದ ಊರಲಿ’ ಚಿತ್ರಕ್ಕೆ ಬೇಡಿಕೆ
ಪ್ರೇಕ್ಷಕರ ‘ಮೌತ್ ಪಬ್ಲಿಸಿಟಿ’ಯಿಂದಾಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ, ಮುಂಬರುವ ದಿನಗಳಲ್ಲೂ ಹೀಗೆಯೇ ತನ್ನ ಸಫಲ ಪಯಣ ಮುಂದುವರಿಸುವ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:08 am, Mon, 5 October 26




