
ಕನ್ನಡದ ಕಲಾವಿದ ಧನಂಜಯ (Daali Dhananjay) ಅವರು ಈಗ ಬಹುಭಾಷಾ ನಟ. ಸ್ಯಾಂಡಲ್ವುಡ್ನಲ್ಲಿ ಡಾಲಿ ಆಗಿ ಮಿಂಚಿದ ಅವರು ಈಗ ಟಾಲಿವುಡ್ನಲ್ಲಿ ಜಾಲಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ, ‘ಪುಷ್ಪ’ (Pushpa) ಸಿನಿಮಾದಲ್ಲಿ ಅವರ ಪಾತ್ರದ ಹೆಸರು ಜಾಲಿ ರೆಡ್ಡಿ (Jolly Reddy) ಎಂಬುದು ಈಗ ಬಹಿರಂಗ ಆಗಿದೆ. ಇಂದು (ಆ.23) ಧನಂಜಯ ಬರ್ತ್ಡೇ. ಆ ಪ್ರಯುಕ್ತ ಅವರು ನಟಿಸುತ್ತಿರುವ ವಿವಿಧ ಸಿನಿಮಾ ತಂಡಗಳು ಹೊಸ ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಿವೆ. ಆ ಪೈಕಿ ಅಲ್ಲು ಅರ್ಜುನ್ (Allu Arjun) ನಾಯಕತ್ವದ ‘ಪುಷ್ಪ’ ಸಿನಿಮಾದಲ್ಲಿನ ಧನಂಜಯ ಅವರ ಗೆಟಪ್ ಗಮನ ಸೆಳೆಯುತ್ತಿದೆ.
ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ಅವರ ಬತ್ತಳಿಕೆಯಿಂದ ಬರುತ್ತಿರುವ ‘ಪುಷ್ಪ’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಈ ನಿರೀಕ್ಷೆಗೆ ಪಾತ್ರವರ್ಗ ಕೂಡ ಕಾರಣ. ಅಲ್ಲು ಅರ್ಜುನ್ ಅವರು ಪುಷ್ಪರಾಜ್ ಎಂಬ ಲಾರಿ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ವಿಲನ್ ಪಾತ್ರದಲ್ಲಿ ಧನಂಜಯ ಅವರು ಅಭಿನಯಿಸುತ್ತಿದ್ದಾರೆ. ಇದುವರೆಗೂ ಧನಂಜಯ ಅವರ ಲುಕ್ ಬಹಿರಂಗ ಆಗಿರಲಿಲ್ಲ. ಪಾತ್ರದ ಹೆಸರನ್ನು ಕೂಡ ರಹಸ್ಯವಾಗಿ ಇಡಲಾಗಿತ್ತು. ಈಗ ಹೊಸ ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ಎಲ್ಲ ಮಾಹಿತಿಯನ್ನು ಬಿಟ್ಟುಕೊಟ್ಟಿದೆ ‘ಪುಷ್ಪ’ ಚಿತ್ರತಂಡ.
ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಮೈತ್ರೀ ಮೂವೀ ಮೇಕರ್ಸ್’ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಧನಂಜಯ ಅವರ ಫಸ್ಟ್ಲುಕ್ ಪೋಸ್ಟರ್ ಅನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಬಿಡುಗಡೆ ಮಾಡಿದೆ. ‘ನಮ್ಮ ಜಾಲಿ ರೆಡ್ಡಿ ಆಗಿರುವ ಧನಂಜಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಚಿತ್ರತಂಡದಿಂದ ವಿಶ್ ಮಾಡಲಾಗಿದೆ.
ಕನ್ನಡದ ‘ಟಗರು’ ಸಿನಿಮಾದಲ್ಲಿ ‘ಡಾಲಿ’ ಎಂಬ ವಿಲನ್ ಪಾತ್ರವನ್ನು ಮಾಡಿದ ಬಳಿಕ ಧನಂಜಯ ಅವರಿಗೆ ಅದೃಷ್ಟ ಖುಲಾಯಿಸಿತು. ಹೀರೋ-ವಿಲನ್ ಎಂಬ ಬೇಧವನ್ನು ತೋರಿದೇ, ತಮ್ಮ ನಟನೆಗೆ ಸ್ಕೋಪ್ ಇರುವಂತಹ ಎಲ್ಲ ಪಾತ್ರಗಳನ್ನೂ ಧನಂಜಯ ನಿಭಾಯಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಎಲ್ಲ ಭಾಷೆಗಳಿಂದಲೂ ಆಫರ್ಗಳು ಬರುತ್ತಿವೆ. ಕನ್ನಡದಲ್ಲಿ ಮಾನ್ಸೂನ್ ರಾಗ, ರತ್ನನ್ ಪ್ರಪಂಚ, ಡಾಲಿ, ಬೈರಾಗಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಧನಂಜಯ ನಟಿಸುತ್ತಿದ್ದಾರೆ. ಬಹುನಿರೀಕ್ಷಿತ ‘ಪುಷ್ಪ’ ಚಿತ್ರ ಎರಡು ಪಾರ್ಟ್ಗಳಲ್ಲಿ ತಯಾರಾಗುತ್ತಿದ್ದು, ಈ ವರ್ಷ ಡಿಸೆಂಬರ್ಗೆ ಮೊದಲ ಪಾರ್ಟ್ ಬಿಡುಗಡೆ ಆಗಲಿದೆ.
ಇದನ್ನೂ ಓದಿ:
Dhananjay: ಧನಂಜಯ್ ಬತ್ತಳಿಕೆ ಸೇರಿತು ಹೊಸ ಸಿನಿಮಾ; ಕುತೂಹಲ ಮೂಡಿಸುವ ಪೋಸ್ಟರ್ ಇಲ್ಲಿದೆ
Published On - 6:51 pm, Mon, 23 August 21