
ಪಿವಿಆರ್ (PVR) ಭಾರತದ ನಂಬರ್ 1 ಮಲ್ಟಿಪ್ಲೆಕ್ಸ್ ಚೈನ್. 2023 ರಲ್ಲಿ ಐನಾಕ್ಸ್ ಅನ್ನೂ ಸಹ ತನ್ನ ತೆಕ್ಕೆಗೆ ಸೇರಿಸಿಕೊಂಡ ಪಿವಿಆರ್ ಬಲು ಬೃಹತ್ ಆಗಿ ಬೆಳೆದು ನಿಂತಿದೆ. ಆದರೆ ಮಲ್ಟಿಪ್ಲೆಕ್ಸ್ ಗಳು ಆರಂಭವಾದಾಗಿನಿಂದಲೂ ಇವು ಭಾರತದ ಮಧ್ಯಮ ಮತ್ತು ಬಡ ಮಧ್ಯಮ ವರ್ಗಕ್ಕೆ ಹೊರೆಯಾಗಿವೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಪಿವಿಆರ್-ಐನಾಕ್ಸ್ನ ಟಿಕೆಟ್ ದರ ಮತ್ತು ಪಾಪ್ಕಾರ್ನ್ ದರಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಪಿವಿಆರ್ ಸಂಸ್ಥಾಪಕ ಅಜಯ್ ಬಿಜಲಿ ಅವರು ಈ ಬಗ್ಗೆ ಮಾತನಾಡಿದ್ದು, ಪಿವಿಆರ್-ಐನಾಕ್ಸ್ನ ಟಿಕೆಟ್ ಮತ್ತು ಪಾಪ್ಕಾರ್ನ್ ದರಗಳು ದುಬಾರಿ ಅಲ್ಲ ಎಂದಿದ್ದಾರೆ.
ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿರುವ ಅಜಯ್ ಬಿಜಲಿ, ತಮ್ಮ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಟಿಕೆಟ್ ದರ ಹಾಗೂ ಪಾಪ್ಕಾರ್ನ್ ದರಗಳು ಹೆಚ್ಚಲ್ಲ, ಬದಲಿಗೆ ನಾವು ಕೊಡುತ್ತಿರುವ ಸೇವೆಗೆ ಟಿಕೆಟ್ ದರಗಳು ಕಡಿಮೆಯೇ ಇವೆ ಎಂದಿದ್ದಾರೆ. ‘ಟಿಕೆಟ್ ದರಗಳ ಬಗ್ಗೆ ದೂರು ಹೇಳುವವರು ಕೇವಲ ‘ಹೆಡ್ಲೈನ್’ ಮೇಲೆ ಗಮನ ಕೊಡುತ್ತಾರೆ. ಅಸಲಿಗೆ ನಮ್ಮ ಟಿಕೆಟ್ ದರ ಕಡಿಮೆ ಇದೆ’ ಎಂದಿದ್ದಾರೆ ಅಜಯ್.
‘ನಮ್ಮ ಸರಾಸರಿ ಟಿಕೆಟ್ ದರ ಕೇವಲ 259 ರೂಪಾಯಿಗಳಾಗಿವೆ. ಇಷ್ಟು ಮೊತ್ತಕ್ಕೆ ನಾವು ಅದ್ಭುತವಾದ ಅನುಭವವನ್ನು ಪ್ರೇಕ್ಷಕರಿಗೆ ನೀಡುತ್ತಿದ್ದೇವೆ. ಟಿಕೆಟ್ ದರದ ಬಗ್ಗೆ ದೂರು ಹೇಳುತ್ತಿರುವವರು ನಮ್ಮ ಪ್ರೀಮಿಯರ್ ಸ್ಕ್ರೀನ್ಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ನಾವು ಕೋರಮಂಗಲ, ಬೆಂಗಳೂರಿನ ರೆವ್ ಎಕ್ಸ್, ಡೈರೆಕ್ಟರ್ಸ್ ಕಟ್, ಮುಂಬೈನ ಜಿಯೋ ಸೆಂಟರ್ನಲ್ಲಿ ನಿರ್ಮಿಸಿರುವ ಐಶಾರಾಮಿ ಚಿತ್ರಮಂದಿರಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅಲ್ಲಿ ಟಿಕೆಟ್ ದರ 600-700 ರೂಪಾಯಿಗಳಿವೆ. ಆದರೆ ನಮ್ಮ ಇತರೆ ಸ್ಕ್ರೀನ್ನ ದರಗಳು ಬಹಳ ಕಡಿಮೆ ಇವೆ. ನಮ್ಮ ಟಿಕೆಟ್ ದರ ಕಡಿಮೆ ಇರುವುದಕ್ಕಾಗಿಯೇ ನಾವು ಹೆಚ್ಚು ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗುತ್ತಿದೆ’ ಎಂದಿದ್ದಾರೆ ಅಜಯ್ ಬಿಜಲಿ.
ಇದನ್ನೂ ಓದಿ:ಪಿವಿಆರ್ನಲ್ಲಿ ಸಿನಿಮಾ ಮಾತ್ರವಲ್ಲ, ಪ್ರದರ್ಶನ ಕಾಣಲಿದೆ ಐಪಿಎಲ್ ಮ್ಯಾಚ್
ಮಲ್ಟಿಪ್ಲೆಕ್ಸ್ಗಳಲ್ಲಿನ ಪಾಪ್ಕಾರ್ನ್ ದರಗಳ ಬಗ್ಗೆ ಮಾತನಾಡಿರುವ ಅಜಯ್ ಬಿಜಲಿ, ‘ನಮ್ಮಲ್ಲಿ ಪಾಪ್ಕಾರ್ನ್ ದರಗಳು ಸಹ ಕಡಿಮೆ ಇವೆ. ನಮ್ಮಲ್ಲಿ 159 ರೂಪಾಯಿಗಳಿಗೆ ಪಾಪ್ಕಾರ್ನ್ ದೊರಕುತ್ತದೆ. 400 ರೂಪಾಯಿ ಪಾಪ್ಕಾರ್ನ್ ಹೈ ಎಂಡ್ ಚಿತ್ರಮಂದಿರಗಳ ದರವಾಗಿದೆ. ಅಲ್ಲದೆ, 400 ರೂಪಾಯಿಗೆ ಖರೀದಿಸುವ ಪಾಪ್ಕಾರ್ನ್ ಅನ್ನು ಎಷ್ಟು ಬಾರಿ ಬೇಕಾದರೂ ಮರು ತುಂಬಿಸಬಹುದಾಗಿರುತ್ತದೆ ಹಾಗಾಗಿ ಅದನ್ನೂ ಸಹ ನಾನು ದುಬಾರಿ ಎನ್ನಲಾರೆ’ ಎಂದಿದ್ದಾರೆ ಅಜಯ್ ಬಿಜಲಿ.
ಬೆಂಗಳೂರಿನಲ್ಲಿ ಪಿವಿಆರ್ ಟಿಕೆಟ್ ದರಗಳು (ಕನ್ನಡ ಸಿನಿಮಾಕ್ಕೆ) 230 ರಿಂದ ಪ್ರಾರಂಭ ಆಗುತ್ತಿವೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರಗಳು ಹೆಚ್ಚಿದ್ದು, ಅವು ಪಿವಿಆರ್ನ ಐಶಾರಾಮಿ ಚಿತ್ರಮಂದಿರಗಳಾಗಿವೆ. ಇನ್ನು ಪಿವಿಆರ್ ಅಧಿಕೃತ ವೆಬ್ಸೈಟ್ನಲ್ಲಿ ಆಹಾರ ಮತ್ತು ಪಾನೀಯವನ್ನು ಮುಂಗಡ ಬುಕ್ ಮಾಡಿಕೊಳ್ಳುವ ಆಯ್ಕೆ ಇದ್ದು, ಬೆಂಗಳೂರಿನ ಯಾವ ಪಿವಿಆರ್-ಐನಾಕ್ಸ್ ಮಲ್ಟಿಪ್ಲೆಕ್ಸ್ ನಲ್ಲೂ ಸಹ ಪಾಪ್ಕಾರ್ನ್ ದರ 159 ರೂಪಾಯಿಗಳಿಲ್ಲ. ಪಾಪ್ಕಾರ್ನ್ ದರ ಪ್ರಾರಂಭಾಗುತ್ತಿರುವುದೇ 250-300 ರೂಪಾಯಿಗಳಿಂದ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ