Salman Khan: ಸಲ್ಮಾನ್​ ಖಾನ್​ ವಿರುದ್ಧ ತಿರುಗಿ ಬಿದ್ದ ಸುಶಾಂತ್ ಫ್ಯಾನ್ಸ್​; ‘ರಾಧೆ’ ಬಹಿಷ್ಕಾರ ಮಾಡಲು ಶಪಥ

Radhe Trailer: ರಾಧೆ ಚಿತ್ರದ ಟ್ರೇಲರ್​ ಬಿಡುಗಡೆ ಆಗುತ್ತಿದ್ದಂತೆಯೇ ಸುಶಾಂತ್​ ಸಿಂಗ್​ ರಜಪೂತ್​ ಅಭಿಮಾನಿಗಳು ಅದನ್ನು ವಿರೋಧಿಸಲು ಆರಂಭಿಸಿದ್ದಾರೆ. ಟ್ವಿಟರ್​ನಲ್ಲಿ #BoycottRadhe ಎಂಬ ಹ್ಯಾಶ್​ ಟ್ಯಾಗ್​ ಮೂಲಕ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

Salman Khan: ಸಲ್ಮಾನ್​ ಖಾನ್​ ವಿರುದ್ಧ ತಿರುಗಿ ಬಿದ್ದ ಸುಶಾಂತ್ ಫ್ಯಾನ್ಸ್​; ‘ರಾಧೆ’ ಬಹಿಷ್ಕಾರ ಮಾಡಲು ಶಪಥ
ಸಲ್ಮಾನ್​ ಖಾನ್​ - ಸುಶಾಂತ್​ ಸಿಂಗ್​ ರಜಪೂತ್​
Edited By:

Updated on: Apr 23, 2021 | 4:01 PM

ನಟ ಸಲ್ಮಾನ್​ ಖಾನ್​ ಅಭಿನಯದ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರ ಮೊದಲ ಹಂತವಾಗಿ ಗುರುವಾರ (ಏ.22) ಅದ್ದೂರಿಯಾಗಿ ಟ್ರೇಲರ್​ ಲಾಂಚ್​ ಮಾಡಲಾಯಿತು. ಎಲ್ಲವೂ ಪ್ಲ್ಯಾನ್​ ಪ್ರಕಾರವೇ ನಡೆದರೆ ಮೇ 13ರಂದು ಈದ್​ ಹಬ್ಬದ ಪ್ರಯುಕ್ತ ಈ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ‘ರಾಧೆ’ ಚಿತ್ರಕ್ಕೆ ಒಂದು ತೊಂದರೆ ಎದುರಾಗಿದೆ. ಈ ಚಿತ್ರವನ್ನು ಬಹಿಷ್ಕಾರ ಮಾಡಲು ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅಭಿಮಾನಿಗಳು ಪಣ ತೊಟ್ಟಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಅವರಿಗೂ, ಸಲ್ಮಾನ್​ ಖಾನ್​ ನಟನೆಯ ರಾಧೆ ಚಿತ್ರಕ್ಕೂ ಯಾವುದೇ ರೀತಿಯ ನೇರ ಸಂಬಂಧ ಇಲ್ಲ. ಹಾಗಿದ್ದರೂ ಈ ಸಿನಿಮಾ ಸುಶಾಂತ್​ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ. ಅದಕ್ಕೆ ನೇರ ಕಾರಣ ಸಲ್ಮಾನ್​ ಖಾನ್​. ಸುಶಾಂತ್​ ಅಭಿಮಾನಿಗಳ ಪ್ರಕಾರ, ಸುಶಾಂತ್​ ನಿಧನರಾದಲು ಬಾಲಿವುಡ್​ನಲ್ಲಿ ಇರುವ ಮೂವೀ ಮಾಫಿಯಾ ಕಾರಣ. ಆ ಮೂವೀ ಮಾಫಿಯಾವನ್ನು ಸಲ್ಮಾನ್​ ಖಾನ್​ ಪೋಷಿಸುತ್ತಿದ್ದಾರೆ. ಹಾಗಾಗಿ ಸುಶಾಂತ್​ ಸಾವಿಗೆ ಸಲ್ಮಾನ್​ ನೇರವಾಗಿ ಕಾರಣರಾಗುತ್ತಾರೆ ಎಂಬುದು ಸುಶಾಂತ್​ ಪ್ಯಾನ್ಸ್​ ಅಭಿಪ್ರಾಯ.

ರಾಧೆ ಚಿತ್ರದ ಟ್ರೇಲರ್​ ಬಿಡುಗಡೆ ಆಗುತ್ತಿದ್ದಂತೆಯೇ ಸುಶಾಂತ್​ ಸಿಂಗ್​ ರಜಪೂತ್​ ಅಭಿಮಾನಿಗಳು ಅದನ್ನು ವಿರೋಧಿಸಲು ಆರಂಭಿಸಿದ್ದಾರೆ. ಟ್ವಿಟರ್​ನಲ್ಲಿ #BoycottRadhe ಎಂಬ ಹ್ಯಾಶ್​ ಟ್ಯಾಗ್​ ಮೂಲಕ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಹಾಗಾಗಿ ಇದು ಟ್ರೆಂಡ್​ ಆಗುತ್ತಿದೆ. ‘ಸುಶಾಂತ್​ಗೆ ಆದ ಅನ್ಯಾಯವನ್ನು ನಾವು ಮರೆಯುವುದಿಲ್ಲ. ಅವರ ಸಾವಿಗೆ ಕಾರಣ ಆದವರಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಸುಶಾಂತ್​ ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ.

ಗುರುವಾರ ಬಿಡುಗಡೆಯಾದ ರಾಧೆ ಟ್ರೇಲರ್ 24 ಗಂಟೆಯೊಳಗೆ 70 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ನಾಲ್ಕ ಲಕ್ಷಕ್ಕೂ ಹೆಚ್ಚು ಜನರು ಇದನ್ನು ಮೆಚ್ಚಿಕೊಂಡು ಲೈಕ್​ ಮಾಡಿದ್ದಾರೆ. 4 ಸಾವಿರ ಡಿಸ್​ಲೈಕ್​ ಬಂದಿದೆ. ‘ಇದು ಜಗತ್ತಿನಲ್ಲೇ ಅತಿ ಹೆಚ್ಚು ಡಿಸ್​ಲೈಕ್​ ಪಡೆದ ಟ್ರೇಲರ್ ಆಗಬೇಕು, ಅಲ್ಲಿಯವರೆಗೆ ಡಿಸ್​ಲೈಕ್​ ಮಾಡುತ್ತಿರಿ’ ಎಂದು ಸುಶಾಂತ್​ ಸಿಂಗ್​ ರಜಪೂತ್​ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ.

ಮೇ 13ರಂದು ಈ ಚಿತ್ರ ಓಟಿಟಿ ಮತ್ತು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಸಲ್ಮಾನ್​ ಖಾನ್​ಗೆ ಜೋಡಿಯಾಗಿ ದಿಶಾ ಪಠಾಣಿ ನಟಿಸಿದ್ದಾರೆ. ಪ್ರಭುದೇವ ನಿರ್ದೇಶನದ ಈ ಸಿನಿಮಾದಲ್ಲಿ ಜಾಕಿ ಶ್ರಾಫ್​, ರಣದೀಪ್​ ಹೂಡಾ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

 

(Radhe Trailer: Sushant Singh Rajput fans trend Boycott Radhe on Social media to oppose Salman Khan)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us