‘ಜೈಲರ್’ ಬಳಿಕ ದೊಡ್ಡ ಘೋಷಣೆ ಮಾಡಿದ ರಜನಿಕಾಂತ್​; ಲೋಕೇಶ್​ ಕನಗರಾಜ್​ ಜತೆ ಸಿನಿಮಾ

ರಜನಿಕಾಂತ್​ ಮತ್ತು ಲೋಕೇಶ್​ ಕನಗರಾಜ್​ ಅವರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಗಾಸಿಪ್​ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಅದೀಗ ನಿಜವಾಗಿದೆ. ಸ್ವತಃ ನಿರ್ಮಾಣ ಸಂಸ್ಥೆಯ ಕಡೆಯಿಂದಲೇ ಈ ಬಗ್ಗೆ ಘೋಷಣೆ ಆಗಿದೆ. ‘ಜೈಲರ್​’ಗೆ ಸಂಗೀತ ನೀಡಿದ ಅನಿರುದ್ಧ್​ ರವಿಚಂದರ್​ ಅವರೇ ‘ತಲೈವರ್ 171’ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ.

‘ಜೈಲರ್’ ಬಳಿಕ ದೊಡ್ಡ ಘೋಷಣೆ ಮಾಡಿದ ರಜನಿಕಾಂತ್​; ಲೋಕೇಶ್​ ಕನಗರಾಜ್​ ಜತೆ ಸಿನಿಮಾ
ರಜನಿಕಾಂತ್​, ಲೋಕೇಶ್​ ಕನಗರಾಜ್​

Updated on: Sep 11, 2023 | 4:14 PM

ನಟ ರಜನಿಕಾಂತ್​ (Rajinikanth) ಅವರಿಗೆ 2023ರ ವರ್ಷ ಸಖತ್​ ಸ್ಪೆಷಲ್​. ಅವರು ನಟಿಸಿದ ‘ಜೈಲರ್​’ ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. 72ನೇ ವಯಸ್ಸಿನಲ್ಲೂ ಅವರು ಆ್ಯಕ್ಷನ್​ ಸಿನಿಮಾ ಮಾಡಿ ಇಷ್ಟು ದೊಡ್ಡ ಗೆಲುವು ಕಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈಗ ರಜನಿಕಾಂತ್​ ಅವರ ಹೊಸ ಸಿನಿಮಾದ ಬಗ್ಗೆ ಅಪ್​ಡೇಟ್​ ಸಿಕ್ಕಿದೆ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ (Lokesh Kanagaraj) ಜೊತೆ ರಜನಿಕಾಂತ್​ ಕೈ ಜೋಡಿಸುತ್ತಿದ್ದಾರೆ. ಇದು ರಜನಿ ನಟನೆಯ 171ನೇ ಸಿನಿಮಾ ಆಗಲಿದೆ. ಇದನ್ನು ತಾತ್ಕಾಲಿಕವಾಗಿ ‘ತಲೈವರ್ 171’ (Thalaivar 171) ಎಂದು ಕರೆಯಲಾಗುತ್ತಿದೆ. ‘ಜೈಲರ್​’ ಚಿತ್ರವನ್ನು ನಿರ್ಮಾಣ ಮಾಡಿದ ‘ಸನ್​ ಪಿಕ್ಚರ್ಸ್​’ ಸಂಸ್ಥೆಯೇ ‘ತಲೈವರ್ 171’ ಸಿನಿಮಾಗೆ ಬಂಡವಾಳ ಹೂಡಲಿದೆ.

ರಜನಿಕಾಂತ್​ ಮತ್ತು ಲೋಕೇಶ್​ ಕನಗರಾಜ್​ ಅವರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಗಾಸಿಪ್​ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಅದೀಗ ನಿಜವಾಗಿದೆ. ಸ್ವತಃ ನಿರ್ಮಾಣ ಸಂಸ್ಥೆಯ ಕಡೆಯಿಂದಲೇ ಈ ಬಗ್ಗೆ ಘೋಷಣೆ ಆಗಿದೆ. ‘ಜೈಲರ್​’ಗೆ ಸಂಗೀತ ನೀಡಿದ ಅನಿರುದ್ಧ್​ ರವಿಚಂದರ್​ ಅವರೇ ‘ತಲೈವರ್ 171’ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅನ್ಬರಿವ್​ ಅವರು ಸಾಹಸ ನಿರ್ದೇಶನ ಮಾಡಲಿದ್ದಾರೆ. ಇದು ಭರ್ಜರಿ ಆ್ಯಕ್ಷನ್​ ಸಿನಿಮಾ ಆಗಿರಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ.

ಕಾಲಿವುಡ್​ನಲ್ಲಿ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರಿಗೆ ಸಖತ್​ ಬೇಡಿಕೆ ಇದೆ. ‘ಕೈದಿ’, ‘ವಿಕ್ರಮ್​’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ಅವರು ಈಗ ದಳಪತಿ ವಿಜಯ್​ ನಟನೆಯ ‘ಲಿಯೋ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಎಲ್ಲ ಸಿನಿಮಾಗಳ ಕಥೆ ಒಂದಕ್ಕೊಂದು ಕನೆಕ್ಟ್​ ಆಗಿವೆ. ಆದ್ದರಿಂದ ‘ತಲೈವರ್ 171’ ಸಿನಿಮಾದ ಕಥೆ ಕೂಡ ಈ ಚಿತ್ರಗಳಿಗೆ ಲಿಂಕ್​ ಹೊಂದಿರಲಿದೆ ಎಂದು ಬಹುತೇಕರು ಊಹಿಸುತ್ತಿದ್ದಾರೆ. ಕಾಲಿವುಡ್​ನ ಎಲ್ಲ ದಾಖಲೆಗಳನ್ನು ಈ ಸಿನಿಮಾ ಮುರಿದುಹಾಕಲಿದೆ ಎಂದು ಕೂಡ ಫ್ಯಾನ್ಸ್​ ಹೇಳುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರಜನಿಕಾಂತ್

ಇದು ರಜನಿಕಾಂತ್​ ಅವರ ಕೊನೇ ಸಿನಿಮಾ ಆಗಲಿದೆ ಎಂಬ ಗುಮಾನಿ ಕೂಡ ಇದೆ. ‘ತಲೈವರ್ 171’ ಬಳಿಕ ಅವರು ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಗಾಸಿಪ್​ ಸಹ ಹರಿದಾಡಿದೆ. ಒಂದು ವೇಳೆ ಅದು ನಿಜವೇ ಹೌದಾದರೆ ಈ ಸಿನಿಮಾದಲ್ಲಿ ರಜನಿಕಾಂತ್​ ಜೊತೆ ಸೂರ್ಯ, ಕಮಲ್​ ಹಾಸನ್​, ದಳಪತಿ ವಿಜಯ್​ ಮುಂತಾದವರು ನಟಿಸಲಿ ಎಂದು ಅಭಿಮಾನಿಗಳು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us