ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಜಮಾನ ಆಗಿರುವ ಕಾರಣ ಅವಶ್ಯಕತೆ ಇರಲಿ, ಇಲ್ಲದಿರಲಿ ಪರಭಾಷೆಯ ಜನಪ್ರಿಯ ನಟರನ್ನು ಸಿನಿಮಾಗಳಿಗೆ ಹಾಕಿಕೊಳ್ಳುವ ಪರಿಪಾಠ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಾರುಕಟ್ಟೆ ಉದ್ದೇಶದಿಂದಾಗಿ ಈ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಹಾಗೆಂದು ಈ ಟ್ರೆಂಡ್ ಮುಂಚೆ ಇರಲಿಲ್ಲವೆಂದೇನಿಲ್ಲ, ಆದರೆ ಪಾತ್ರದ ಅವಶ್ಯಕತೆಗೆ ತಕ್ಕಂತೆ ಮಾತ್ರವೇ ಹಿಂದೆ ಪರಭಾಷೆಯ ಸ್ಟಾರ್ ನಟರನ್ನು ಸಿನಿಮಾಗಳಲ್ಲಿ ಹಾಕಿಕೊಳ್ಳಲಾಗುತ್ತಿತ್ತು. ಒಮ್ಮೊಮ್ಮೆ ನಟರ ನಡುವಿನ ಸ್ನೇಹವೂ ಸಹ ಇದಕ್ಕೆ ಕಾರಣವಾಗಿದ್ದಿದೆ. ರಜನೀಕಾಂತ್ ಸಹ ಹಿಂದೆ ಪರಭಾಷೆಯ ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಇದೀಗ 33 ವರ್ಷಗಳ ಬಳಿಕ ಮತ್ತೊಮ್ಮೆ ನೆರೆಯ ಚಿತ್ರರಂಗದ ಸ್ಟಾರ್ ನಟರೊಬ್ಬರೊಡನೆ ತೆರೆ ಹಂಚಿಕೊಳ್ಳಲಿದ್ದಾರೆ.
1991 ರಲ್ಲಿ ರಜನೀಕಾಂತ್ ನಟಿಸಿದ್ದ ‘ದಳಪತಿ’ ಭಾರಿ ದೊಡ್ಡ ಹಿಟ್ ಆಗಿತ್ತು. ರಜನೀಕಾಂತ್ರ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಅದೂ ಸಹ ಒಂದು. ಅದೇ ಸಿನಿಮಾದಲ್ಲಿ ರಜನೀಕಾಂತ್ರ ಆತ್ಮೀಯ ಗೆಳೆಯನ ಪಾತ್ರದಲ್ಲಿ ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟಿ ಸಹ ನಟಿಸಿದ್ದರು. ಅದಾದ ಬಳಿಕ ಈ ಇಬ್ಬರೂ ನಟರು ಮತ್ತೆ ಒಟ್ಟಿಗೆ ನಟಿಸಿಯೇ ಇಲ್ಲ. ಇದೀಗ 33 ವರ್ಷಗಳ ಬಳಿಕ ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಮತ್ತೆ ನಟಿಸಲಿದ್ದಾರೆ.
ಇದನ್ನೂ ಓದಿ:ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾದ ಹಾರ್ಡ್ ಡಿಸ್ಕ್ ನಾಪತ್ತೆ! ಮುಂದೇನು ಗತಿ
ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್, ರಜನೀಕಾಂತ್ರ 171ನೇ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಮಮ್ಮುಟಿ ಅವರೂ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ಈ ಇಬ್ಬರು ಬರೋಬ್ಬರಿ 33 ವರ್ಷಗಳ ಬಳಿಕ ಒಟ್ಟಿಗೆ ನಟಿಸಿದಂತಾಗುತ್ತದೆ. ರಜನೀಕಾಂತ್ರ ಈ ಹಿಂದಿನ ಸಿನಿಮಾ ‘ಜೈಲರ್’ನಲ್ಲಿ ರಜನೀಕಾಂತ್ ಮಲಯಾಳಂನ ಮತ್ತೊಬ್ಬ ಸೂಪರ್ ಸ್ಟಾರ್ ಮೋಹನ್ಲಾಲ್ ಜೊತೆಗೆ ನಟಿಸಿದ್ದರು. ಈಗ ತಮ್ಮ ಮುಂದಿನ ಸಿನಿಮಾದಲ್ಲಿ ಮಮ್ಮುಟಿ ಜೊತೆಗೆ ನಟಿಸಲಿದ್ದಾರೆ. ಮತ್ತೊಂದು ವಿಶೇಷವೆಂದರೆ ದಶಕಗಳ ಹಿಂದೆ ಅಮಿತಾಬ್ ಬಚ್ಚನ್ ಜೊತೆ ರಜನೀಕಾಂತ್ ನಟಿಸಿದ್ದರು, ಈಗ ಮತ್ತೆ ಬೇರೊಂದು ಸಿನಿಮಾದಲ್ಲಿ ರಜನೀಕಾಂತ್ ಹಾಗೂ ಅಮಿತಾಬ್ ಬಚ್ಚನ್ ಒಟ್ಟಿಗೆ ನಟಿಸುತ್ತಿದ್ದಾರೆ. ಆ ಮೂಲಕ ರಜನೀಕಾಂತ್ರ ಸಿನಿಮಾ ಚಕ್ರ ಒಂದು ಸುತ್ತು ಬಂದಂತಾಗಿದೆ.
ರಜನೀಕಾಂತ್ ಪ್ರಸ್ತುತ ‘ಲಾಲ್ ಸಲಾಂ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಅವರ ಪುತ್ರಿಯೇ ಆಗಿರುವ ಐಶ್ವರ್ಯಾ ರಜನೀಕಾಂತ್ ನಿರ್ದೇಶನ ಮಾಡಿದ್ದು, ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಸಿನಿಮಾದಲ್ಲಿ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ರಜನೀಕಾಂತ್ ನಟಿಸಿದ್ದಾರೆ. ಈ ಸಿನಿಮಾ ಕ್ರಿಕೆಟ್ ಆಟದ ಕುರಿತಾದ ಕತೆ ಹೊಂದಿದ್ದು, ಸಿನಿಮಾದಲ್ಲಿ ಕಪಿಲ್ ದೇವ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಲಾಲ್ ಸಲಾಂ’ ಸಿನಿಮಾ ಮುಗಿದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ