
ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಕೇವಲ ದಕ್ಷಿಣ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂಪಾಯಿ ಗಳಿಕೆ ಮಾಡುವ ಸನಿಹದಲ್ಲಿದೆ. ಸದ್ಯ ರಜನಿಕಾಂತ್ (Rajinikanth) ಅವರು ಉತ್ತರ ಪ್ರದೇಶದಲ್ಲಿದ್ದಾರೆ. ಲಖನೌನಲ್ಲಿ ತಂಗಿರುವ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ‘ಜೈಲರ್’ (Jailer Movie) ವೀಕ್ಷಣೆ ಮಾಡಲಿದ್ದಾರೆ. ಈ ವಿಚಾರವನ್ನು ಸ್ವತಃ ರಜನಿಕಾಂತ್ ಅವರೇ ಖಚಿತಪಡಿಸಿದ್ದಾರೆ.
‘ಜೈಲರ್’ ಚಿತ್ರದಲ್ಲಿ ರಜನಿ ಆ್ಯಕ್ಟಿಂಗ್ ಗಮನ ಸೆಳೆದಿದೆ. ನಿವೃತ್ತ ಜೈಲರ್ ಪಾತ್ರದಲ್ಲಿ ಅವರು ಮೋಡಿ ಮಾಡಿದ್ದಾರೆ. ಮಗನಿಗಾಗಿ ಮಿಡಿಯುವ ತಂದೆಯಾಗಿ ಅವರು ಮಿಂಚಿದ್ದಾರೆ. ಈ ಚಿತ್ರವನ್ನು ಯೋಗಿ ಆದಿತ್ಯನಾಥ್ ಕೂಡ ನೋಡಲಿದ್ದಾರೆ ಅನ್ನೋದು ವಿಶೇಷ. ಈ ಬಗ್ಗೆ ಮಾಹಿತಿ ನೀಡಿರುವ ರಜನಿಕಾಂತ್ ಅವರು, ‘ನಾನು ಸಿಎಂ ಯೋಗಿ ಆದಿತ್ಯನಾಥ್ ಜೊತೆ ಜೈಲರ್ ಸಿನಿಮಾ ವೀಕ್ಷಿಸುತ್ತೇನೆ. ದೇವರ ಆಶೀರ್ವಾದದಿಂದ ಸಿನಿಮಾ ಹಿಟ್ ಆಗಿದೆ’ ಎಂದು ರಜನಿಕಾಂತ್ ಅವರು ಎಎನ್ಐಗೆ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕೂಡ ವಿಶೇಷ ಶೋನಲ್ಲಿ ಭಾಗಿ ಆಗಲಿದ್ದಾರೆ.
ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅವರನ್ನು ರಜನಿಕಾಂತ್ ಅವರು ರಾಜಭವನದಲ್ಲಿ ಭೇಟಿ ಮಾಡಿದ್ದಾರೆ. ಈ ಭೇಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ರಜನಿಕಾಂತ್ ಅವರು ಭಾನುವಾರ (ಆಗಸ್ಟ್ 19) ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.
ರಜನಿಕಾಂತ್ ಅವರು ಸದ್ಯ ಆಧ್ಯಾತ್ಮದ ಪ್ರವಾಸದಲ್ಲಿದ್ದಾರೆ. ‘ಜೈಲರ್’ ರಿಲೀಸ್ಗೂ ಮೊದಲೇ ಅವರು ಹಿಮಾಲಯಕ್ಕೆ ತೆರಳಿದ್ದರು. ಪ್ರಮುಖ ಅಧ್ಯಾತ್ಮ ಕೇಂದ್ರಗಳಿಗೆ ಭೇಟಿ ನೀಡಿ ಅವರು ಧ್ಯಾನ ಮಾಡಿದ್ದರು. ಹಲವು ಅಧ್ಯಾತ್ಮ ಗುರುಗಳನ್ನು ಅವರು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಈ ಟ್ರಿಪ್ನ ಭಾಗವಾಗಿ ಅವರು ಅಯೋಧ್ಯೆಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೊನೆಗೂ ತಪ್ಪು ಒಪ್ಪಿಕೊಂಡ ‘ಜೈಲರ್’ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್
‘ಜೈಲರ್’ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸನ್ ಪಿಕ್ಚರ್ಸ್ ಚಿತ್ರವನ್ನು ನಿರ್ಮಾಣ ಮಾಡಿದೆ. ಕನ್ನಡದ ನಟ ಶಿವರಾಜ್ಕುಮಾರ್, ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Sat, 19 August 23