
ನಟ ರಜನಿಕಾಂತ್ (Rajinikanth) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷ ಬಿಡುಗಡೆ ಆದ ಅವರ ‘ಜೈಲರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಅಭಿಮಾನಿಗಳು ಆ ಚಿತ್ರವನ್ನು ಸಖತ್ ಇಷ್ಟಪಟ್ಟರು. ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ಬಳಿಕ ಒಟಿಟಿಯಲ್ಲೂ ‘ಜೈಲರ್’ ಅಬ್ಬರಿಸಿತು. ಅದರ ಬೆನ್ನಲ್ಲೇ ರಜನಿಕಾಂತ್ ನಟನೆಯ ಮುಂದಿನ ಸಿನಿಮಾದ ಬಗ್ಗೆ ಹೊಸ ಹೊಸ ಅಪ್ಡೇಟ್ ಸಿಗುತ್ತಿದೆ. ರಜನಿ ಅಭಿನಯಿಸಲಿರುವ 170ನೇ ಸಿನಿಮಾದಿಂದ ಫಸ್ಟ್ ಲುಕ್ ಪೋಸ್ಟರ್ (Thalaivar 170 First Look) ಬಿಡುಗಡೆ ಮಾಡಲಾಗಿದೆ. ಇದನ್ನು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಸದ್ಯಕ್ಕೆ ‘ತಲೈವರ್ 170’ (Thalaivar 170) ಎಂದು ಕರೆಯಲಾಗುತ್ತಿದೆ. ಅಮಿತಾಭ್ ಬಚ್ಚನ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.
ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ‘ತಲೈವರ್ 170’ ಸಿನಿಮಾ ಮೂಡಿಬರುತ್ತಿದೆ. ‘ಜೈ ಭೀಮ್’ ಸಿನಿಮಾ ಖ್ಯಾತಿಯ ಟಿಜೆ ಜ್ಞಾನವೇಲ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಗಮನ ಸೆಳೆಯುತ್ತಿದೆ. ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಮಾತ್ರವಲ್ಲದೇ ರಾಣಾ ದಗ್ಗುಬಾಟಿ, ಫಹಾದ್ ಪಾಸಿಲ್, ಮಂಜು ವಾರಿಯರ್ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಈಗ ಎಲ್ಲ ಕಲಾವಿದರ ಪೋಸ್ಟರ್ಗಳು ರಾರಾಜಿಸುತ್ತಿವೆ.
ಇತ್ತೀಚೆಗೆ ಲೈಕಾ ಪ್ರೊಡಕ್ಷನ್ಸ್ ಕಡೆಯಿಂದ ಎಲ್ಲ ಕಲಾವಿದರ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು. ಕೊನೆಯದಾಗಿ ರಜನಿಕಾಂತ್ ಅವರ ಲುಕ್ ಬಹಿರಂಗ ಆಗಿದೆ. ಬ್ಲಾಕ್ ಆ್ಯಂಡ್ ವೈಟ್ ಥೀಮ್ನಲ್ಲಿ ಈ ಪೋಸ್ಟರ್ ವಿನ್ಯಾಸಗೊಂಡಿದೆ. ‘ಲೈಟ್ಸ್, ಕ್ಯಾಮರಾ, ಕ್ಲ್ಯಾಪ್ ಆ್ಯಂಡ್ ಆ್ಯಕ್ಷನ್. ರಜನಿಕಾಂತ್ ಜೊತೆ ಇಡೀ ತಂಡ ಸಿದ್ಧವಾಗಿದೆ. ಇದು ಆ್ಯಕ್ಷನ್ ಮೆರೆಯುವ ಸಮಯ. ಶೂಟಿಂಗ್ ಶುರುವಾದ ಬಳಿಕ ಹೆಚ್ಚು ಅಪ್ಡೇಟ್ ನೀಡುತ್ತೇವೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.
ಒಂದೇ ಸಿನಿಮಾದಲ್ಲಿ ರಜನಿಕಾಂತ್-ಅಮಿತಾಭ್ ಬಚ್ಚನ್; 32 ವರ್ಷಗಳ ಬಳಿಕ ದಿಗ್ಗಜರ ಸಂಗಮ
‘ತಲೈವರ್ 170’ ಸಿನಿಮಾದ ಕಥೆಯ ಬಗ್ಗೆ ಈಗಾಗಲೇ ಕೆಲವು ಅಂತೆ-ಕಂತೆಗಳು ಹರಿದಾಡುತ್ತಿವೆ. ಈ ಸಿನಿಮಾದಲ್ಲಿ ರಜನಿಕಾಂತ್ ಅವರು ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ನಕಲಿ ಎನ್ಕೌಂಟರ್ ಘಟನೆಯ ಕುರಿತು ಈ ಚಿತ್ರ ಸಿದ್ಧವಾಗಲಿದೆ ಎಂಬ ಗಾಸಿಪ್ ಇದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. 72ನೇ ವಯಸ್ಸಿನಲ್ಲಿ ರಜನಿಕಾಂತ್ ಅವರು ಈ ರೀತಿಯ ಆ್ಯಕ್ಷನ್ ಸಿನಿಮಾ ಮಾಡುತ್ತಿರುವುದು ವಿಶೇಷ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.